ಬೆಡ್ ಬ್ಲಾಕಿಂಗ್ ಹಗರಣಕ್ಕೆ ತಿರುವು: ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಸತೀಶ್ ರೆಡ್ಡಿ ವಿರುದ್ಧವೇ ಈಗ ಆರೋಪ !

Update: 2021-05-06 05:55 GMT

ಬೆಂಗಳೂರು, ಮೇ 6: ಬಿಬಿಎಂಪಿ ದಕ್ಷಿಣ ವಲಯ ವಾರ್ ರೂಂನಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣ ಪ್ರಕರಣ ಇದೀಗ ಹೊಸ ತಿರುವು ಪಡೆದು ಕೊಂಡಿದೆ.

ಮಂಗಳವಾರ ಸಂಸದ ತೇಜಸ್ವಿ ಸೂರ್ಯ ಹಾಗೂ ಇತರೆ ಶಾಸಕರ ಜೊತೆ ಸುದ್ದಿಗೋಷ್ಠಿ ನಡೆಸಿ, ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆ ಸಿಬ್ಬಂದಿಯ ವಿರುದ್ಧ ಹರಿಹಾಯ್ದಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ತಮ್ಮ ಬೆಂಬಲಿಗರಿಗೆ ಹಾಸಿಗೆ ಕೊಡಿಸುತ್ತಿದ್ದರೆಂಬ ಆರೋಪ ಕೇಳಿಬಂದಿದೆ.

ನಗರದ ಬೊಮ್ಮನಹಳ್ಳಿ ವಲಯದ ವಾರ್‌ ರೂಂನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಶಾಸಕ ಸತೀಶ್‌ ರೆಡ್ಡಿ ಹಾಗೂ ಅವರ ಬೆಂಬಲಿಗರು ಬೆದರಿಗೆ ಹಾಕಿ ಕೋವಿಡ್ ಸೋಂಕಿತರಿಗೆ ಹಾಸಿಗೆಗಳನ್ನು ನೀಡುತ್ತಿದ್ದರು ಎಂದು ದೂರಲಾಗಿದೆ.

ವಾರ್ ರೂಮ್‌ನಲ್ಲಿ ಕೆಲಸ ಮಾಡುತ್ತಿರವವರಲ್ಲಿ ಸತೀಶ್ ರೆಡ್ಡಿ 'ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕು, ಇಲ್ಲವಾದಲ್ಲಿ ವಾರ್‌ ರೂಮ್‌ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಖುದ್ದು ಸತೀಶ್ ರೆಡ್ಡಿ ವಾರ್ ರೂಮ್ ಉಸ್ತುವಾರಿಗಳಿಗೆ ನೀಡಿದ್ದರು ಎಂದು ತಿಳಿದು ಬಂದಿದೆ.

ಸತೀಶ್‌ ರೆಡ್ಡಿ ಶಿಫಾರಸು ಮಾಡಿದವರಿಗೆ ಹಾಸಿಗೆಗಳನ್ನು ನೀಡಲಾಗುತ್ತಿತ್ತು ಎನ್ನುವ ಆರೋಪಗಳ ನಡುವೆಯೇ ಹಾಸಿಗೆಗಳನ್ನು ಸಂಕಷ್ಟದಲ್ಲಿರುವ ಸೋಂಕಿತರಿಗೆ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಬೆಡ್ ಬ್ಲಾಕಿಂಗ್ ಬಗ್ಗೆ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಇದೀಗ ಸ್ವತಃ ಸತೀಶ್ ರೆಡ್ಡಿ ಅವರ ಹೆಸರೇ ಮುನ್ನೆಲೆಗೆ ಬಂದಿದ್ದು, ಪ್ರಕರಣಕ್ಕೆ ತಿರುವು ಲಭಿಸಿದೆ.

ಆದರೆ ಈ ಆರೋಪಗಳನ್ನು ಶಾಸಕ ಸತೀಶ್ ರೆಡ್ಡಿ ನಿರಾಕರಿಸಿದ್ದು, 'ವಾರ್ ರೂಮ್ ಗಳಲ್ಲಿ ನಮ್ಮ ಬೆಂಬಲಿಗರು ಹಾಸಿಗೆಗಳನ್ನು ಬ್ಲಾಕ್ ಮಾಡಿಸುತ್ತಿದ್ದರು ಎಂಬ ಆರೋಪದಲ್ಲಿ ಹುರುಳಿಲ್ಲ. ಸಹಾಯವಾಣಿ ಸಂಪರ್ಕಕ್ಕೆ ಸಿಗದಿದ್ದಾಗ ನನ್ನ ಕಚೇರಿಗೆ ಕರೆ ಮಾಡಿ ಹಾಸಿಗೆ ಒದಗಿಸುವಂತೆ ಮನವಿ ಮಾಡಿದವರಿಗೆ ಆದ್ಯತೆಯ ಮೇರೆಗೆ ಹಾಸಿಗೆ ನೀಡುವಂತೆ ತಿಳಿಸಿದ್ದೇನೆ. ಆದರೆ ಬೆಡ್ ಬ್ಲಾಕ್ ಮಾಡಿಸುತ್ತಿದ್ದರು ಎಂಬ ಆರೋಪ ಸುಳ್ಳು' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News