ಖಾಸಗಿ ಆಸ್ಪತ್ರೆಗಳನ್ನು ಸರಕಾರ ವಶಕ್ಕೆ ಪಡೆದು ನಿರ್ವಹಿಸಲು ಮುಂದಾಗಬೇಕು: ಎಡಪಕ್ಷಗಳಿಂದ ಸಿಎಂಗೆ ಮನವಿ

Update: 2021-05-06 17:57 GMT

ಬೆಂಗಳೂರು, ಮೇ 6: ಹಾಸಿಗೆ ಬ್ಲಾಕ್ ದಂಧೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು. ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ತಲಾ 10 ಸಾವಿರ ರೂ.ಪ್ರತಿ ತಿಂಗಳು ನೀಡಬೇಕು. ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು ಎಂದು ಎಡಪಕ್ಷಗಳು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿವೆ.

ಈ ಸಂಬಂಧ ಸಿಪಿಎಂ, ಸಿಪಿಐ, ಎಸ್‍ಯುಸಿಐ, ಸಿಪಿಐ(ಎಂಎಲ್), ಆರ್‍ಪಿಐ, ಸ್ವರಾಜ್ ಇಂಡಿಯಾ ಮುಖಂಡರು, ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದು, ರಾಜ್ಯದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಕೊರತೆಯಾದರೆ ಕೇಂದ್ರವನ್ನು ಆಗ್ರಹಿಸಬೇಕು. ಆರ್‍ಟಿಪಿಸಿಆರ್ ಪರೀಕ್ಷೆಯ ವರದಿಯನ್ನು ಒಂದೇ ದಿನದಲ್ಲಿ ದೊರಕಿಸಿ, ಅದಕ್ಕೆ ಬೇಕಾದ ಪರಿಕರಗಳು ಮತ್ತು ಸಿಬ್ಬಂದಿಯನ್ನು ಒದಗಿಸಿ, ಸೋಂಕಿತರ ಪತ್ತೆ ಮತ್ತು ಐಸೋಲೇಷನ್ ವಿಳಂಬವಾಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೋಂ ಐಸೋಲೇಷನ್‍ನಲ್ಲಿರುವ ರೋಗಿಗಳಿಗೆ ಹಿಂದಿನಂತೆ ಅಗತ್ಯ ಔಷಧಿಗಳನ್ನು ಉಚಿತವಾಗಿ ಒದಗಿಸಬೇಕು. ಐಸಿಯು, ವೆಂಟಿಲೇಟರ್ ಹಾಸಿಗೆಗಳ ಕೊರತೆಯಿಂದ ಸಾವು ಸಂಭವಿಸುತ್ತಿದೆ. ತಾಲೂಕುಗಳಲ್ಲಿ ವೆಂಟಿಲೇಟರ್ ಗಳ ಕೊರತೆ, ಅವುಗಳ ಬಳಕೆಗೆ ತಜ್ಞರ ಕೊರತೆ ಕಾಡುತ್ತಿದೆ. ಇವುಗಳನ್ನು ಈ ಕೂಡಲೇ ಸರಿಪಡಿಸಬೇಕು. ತಕ್ಷಣವೇ ಸಮರ್ಪಕ ಪ್ರಮಾಣದಲ್ಲಿ ಆಸ್ಪತ್ರೆ ಹಾಸಿಗೆಗಳು, ವೆಂಟಿಲೇಟರುಗಳು, ಐಸಿಯು ಹಾಸಿಗೆಗಳು, ಮತ್ತು ವೈರಾಣುವಿರೋಧಿ ಔಷಧಿಗಳು ಮತ್ತು ಲಸಿಕೆಗಳ ವ್ಯವಸ್ಥೆ ಮಾಡಬೇಕು. ವಿಶೇಷವಾಗಿ ಸೋಂಕು ತ್ವರಿತವಾಗಿ ಹರಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳು ಸಿಗುವಂತೆ ಮಾಡಬೇಕು.

ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳ ಸಹಿತ ವೆಂಟಿಲೇಟರ್ ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ರೋಗಿಗಳಿಗೂ ಉತ್ತಮ, ಆಮ್ಲಜನಕದ ಬಳಕೆ ಕಡಿಮೆಯಾಗಬಹುದು. ಇದನ್ನು ಅಳವಡಿಸಬೇಕು. ಹಾಸಿಗೆಗಳ ಲಭ್ಯತೆಯ ಮಾಹಿತಿಯ ಕೊರತೆಯಿಂದಾಗಿ ರೋಗಿಗಳು ಅಲೆದಾಡುವುದನ್ನು ತಪ್ಪಿಸಲು ಪ್ರತಿ ಜಿಲ್ಲೆಯಲ್ಲಿ ಕೇಂದ್ರೀಕೃತ ವ್ಯವಸ್ಥೆ ಬೇಕು. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿಯನ್ನು ನೀಡುವ ವೆಬ್ ಪೋರ್ಟಲ್ ಸಿದ್ಧಪಡಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಕೋಟಾದ ರೋಗಿಗಳನ್ನು ದಾಖಲಿಸಲು ಕೆಲವೊಮ್ಮೆ ನಿರಾಕರಿಸುತ್ತಿದ್ದು, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು.

ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದು, ಗಂಭೀರ ರೋಗ ಲಕ್ಷಣಗಳು ಇರುವವರಿಗೆ ಚಿಕಿತ್ಸೆ ದೊರಕುವುದು ಕಷ್ಟವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಮ್ಲಜನಕ ವ್ಯವಸ್ಥೆ ಇರುವ ಕೋವಿಡ್ ಆ್ಯಂಬುಲನ್ಸ್ ಗಳ ಕೊರತೆಯನ್ನು ನೀಗಿಸಬೇಕು. ಕೋವಿಡ್ ಸೆಂಟರ್ ಗಳಾಗಿ ಕೆಲಸ ಮಾಡುವ ಖಾಸಗಿ ಆಸ್ಪತ್ರೆಗಳಿಗೂ ಸರಕಾರಕ್ಕೂ ನಡುವೆ ಸಮನ್ವಯ ಬೇಕು. ಅಲ್ಲಿರುವ ಸೋಂಕಿತರ ಪರಿಸ್ಥಿತಿ ಗಂಭೀರವಾದಾಗ ಅವರು ಕೈಚೆಲ್ಲುತ್ತಾರೆ. ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಖಾತ್ರಿಪಡಿಸಬೇಕು.

ಆರ್‍ಟಿಪಿಸಿಆರ್ ವರದಿ ಇಲ್ಲದ ಗಂಭೀರ (ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿ) ರೋಗಿಗಳಿಗೆ ತುರ್ತುಚಿಕಿತ್ಸೆ ಪಡೆಯುವುದೂ ಕಷ್ಟವಾಗುತ್ತಿದ್ದು, ಈ ಕುರಿತು ಒಂದು ಸರಿಯಾದ ನೀತಿ ರೂಪಿಸಬೇಕು. ತಜ್ಞ ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು, ಬಯೋ ಮೆಡಿಕಲ್ ಇಂಜಿನಿಯರುಗಳು ಮುಂತಾದ ಪರಿಣಿತ ಸಿಬ್ಬಂದಿಯ ತೀವ್ರ ಕೊರತೆ ಇದ್ದು ಇವರ ನೇಮಕಾತಿಗೆ ತಕ್ಷಣ ಕ್ರಮಕೈಗೊಳ್ಳಬೇಕು. ಆವಶ್ಯಕ ಔಷಧಿಗಳ ಮತ್ತು ಆಮ್ಲಜನಕಗಳ ಬೆಲೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಮತ್ತು ಅವುಗಳ ಕಳ್ಳ ದಾಸ್ತಾನು ಹಾಗೂ ಕಾಳಸಂತೆಯನ್ನು ನಿಗ್ರಹಿಸಬೇಕು.

ಲಸಿಕೆಗಳನ್ನೂ, ಜೀವ ಉಳಿಸುವ ಔಷಧಿಗಳನ್ನೂ ಅವನ್ನು ತಯಾರಿಸಬಲ್ಲ ಸಾಮರ್ಥ್ಯ-ಸೌಕರ್ಯಗಳು ಇರುವ ಎಲ್ಲರೂ ಉತ್ಪಾದಿಸಲು ಸಾಧ್ಯವಾಗುವಂತೆ ಕಾಯ್ದೆಯ ಕಡ್ಡಾಯ ಲೈಸೆನ್ಸಿಂಗ್' ಉಪಬಂಧವನ್ನು ಬಳಸಿಕೊಳ್ಳಬೇಕು. ಪರಿಸ್ಥಿತಿ ಕೈಮೀರಿ ಹೋದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸರಕಾರದ ವಶಕ್ಕೆ ಪಡೆದು ನಿರ್ವಹಿಸಲು ಮುಂದಾಗಬೇಕು. ಮೃತರ ಗೌರವಯುತ ಅಂತ್ಯಸಂಸ್ಕಾರಕ್ಕೆ ಬೇಕಾದ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂದು ಎಡಪಕ್ಷಗಳ ಯು.ಬಸವರಾಜ, ಸಾತಿ ಸುಂದರೇಶ್, ಕ್ಲಿಪ್ಟನ್ ರೋಜಾರಿಯೋ, ಜಿ.ಆರ್.ಶಿವಶಂಕರ್, ಮೋಹನ್ ರಾಜ್ ಹಾಗೂ ಚಾಮರಸ ಪಾಟೀಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News