ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್‍ನಂತಹ ಬಿಗಿ ಕ್ರಮ ಅನಿವಾರ್ಯ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-05-07 11:49 GMT

ಬೆಂಗಳೂರು, ಮೇ 7: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನ ಪ್ರಕರಣಗಳು ಮಿತಿ ಮೀರುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‍ಡೌನ್‍ನಂತಹ ಬಿಗಿಯಾದ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಗಾಂಧಿನಗರದಲ್ಲಿರುವ ನಗರ ದೇವತೆ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೊರೋನ ಸೋಂಕಿನಿಂದ ರಾಜ್ಯವನ್ನು ಪಾರು ಮಾಡುವಂತೆ ಕೋರಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕೊರೋನ ಕರ್ಫ್ಯೂ'ವನ್ನು ಜನತೆ ಸರಿಯಾಗಿ ಪಾಲಿಸುತ್ತಿಲ್ಲ. ಸೋಂಕು ದಿನದಿಂದ ದಿನಕ್ಕೆ ಏರುತ್ತಿದೆ. ಸೋಂಕು ತಡೆಗೆ ಬಿಗಿಕ್ರಮ ಕೈಗೊಳ್ಳಲೇಬೇಕಿದೆ. ಸಂಪೂರ್ಣ ಲಾಕ್‍ಡೌನ್ ಅನಿವಾರ್ಯ ಎನಿಸಿದೆ. ಹಾಗಾಗಿ ನಾಳೆ(ಮೇ8) ಉನ್ನತ ಮಟ್ಟದ ಸಭೆ ನಡೆಸಿ ಸಂಪೂರ್ಣ ಲಾಕ್‍ಡೌನ್ ಜಾರಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಬಿಗಿಕ್ರಮ ಅಗತ್ಯ. 14 ದಿನಗಳ ಕೊರೋನ ಕರ್ಫ್ಯೂ ಜಾರಿ ಮಾಡಿದ್ದರೂ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಜನತೆ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಬೇಕು. ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಲಾಕ್‍ಡೌನ್ ಜಾರಿ ಅನಿವಾರ್ಯ. ಇಂದು ಮತ್ತು ನಾಳೆ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿ ಲಾಕ್‍ಡೌನ್‍ನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಕರ್ನಾಟಕ ಸೇರಿದಂತೆ ಇಡೀ ದೇಶವನ್ನೇ ಕೊರೋನ ಮುಕ್ತ ಮಾಡುವಂತೆ ತಾಯಿ ಅಣ್ಣಮ್ಮ ದೇವತೆಯನ್ನು ಪ್ರಾರ್ಥಿಸುತ್ತೇನೆ. ದೇವಿ ಆಶೀರ್ವಾದದಿಂದ ದೇಶ ಕೊರೋನ ಮುಕ್ತವಾಗಿ ಜನ ನೆಮ್ಮದಿಯಿಂದ ಬದುಕುವಂತಹ ಕಾಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಂಕಿತರು ಸಿಎಂ ಮನೆ ಬಳಿ ಬರುವುದು ಸರಿಯಲ್ಲ

ದುಃಖ ದುಮ್ಮಾನ ತೋಡಿಕೊಳ್ಳಲು ಜನತೆ ತಮ್ಮ ನಿವಾಸಕ್ಕೆ ಬರುವುದು ತಪ್ಪಲ್ಲ. ಆದರೆ, ಸೋಂಕಿತರನ್ನು ಕರೆದುಕೊಂಡು ಬೆಡ್ ಸಿಕ್ಕಿಲ್ಲ ಎಂದು ವಿಧಾನಸೌಧ, ಸಿಎಂ ಮನೆಗೆ ಬರುವುದು ಸರಿಯಲ್ಲ. ತೊಂದರೆಗಳಾದಾಗ ಆ ಬಗ್ಗೆ ಗಮನ ಹರಿಸಿ ಎಲ್ಲಿ ಖಾಲಿ ಇದೆಯೋ ಅಲ್ಲಿ ಬೆಡ್ ವ್ಯವಸ್ಥೆಗೆ ಸೂಕ್ತಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News