ಯಲಹಂಕದಲ್ಲಿ ಬೋಯಿಂಗ್‍ನಿಂದ 450 ಬೆಡ್ ಆಕ್ಸಿಜನ್ ಘಟಕ: ಡಿಸಿಎಂ ಅಶ್ವತ್ಥ ನಾರಾಯಣ

Update: 2021-05-08 12:23 GMT

ಬೆಂಗಳೂರು, ಮೇ 8: ಗಿವ್ ಇಂಡಿಯಾ ಸಂಸ್ಥೆಯು ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ 80 ಆಮ್ಲಜನಕ ಸಾಂದ್ರಕ (oxygen concentrator)ಗಳನ್ನು ಶನಿವಾರ ಹಸ್ತಾಂತರ ಮಾಡಿದೆ.

ಸಂಸ್ಥೆಯ ಸಿಇಒ ಅಥುತ್ ಸಟೇಜಾ ಅವರು ಆಮ್ಲಜನಕ ಸಾಂದ್ರಕಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಜಿಕೆವಿಕೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಮುಂದಿನ ದಿನಗಳಲ್ಲಿ ಗಿವ್ ಇಂಡಿಯಾ ಸಂಸ್ಥೆ ಇನ್ನೂ 2000 ಆಮ್ಲಜನಕ ಸಾಂದ್ರಕಗಳನ್ನು ನೀಡಲಿದೆ. ಅವುಗಳನ್ನು ರಾಜ್ಯಾದ್ಯಂತ ಸ್ಥಾಪನೆ ಮಾಡಲಾಗುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಅಳವಡಿಸಲಾಗುವುದು ಎಂದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಖಾಸಗಿ ಕ್ಷೇತ್ರವೂ ಹೆಗಲು ಕೊಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಗಿವ್ ಇಂಡಿಯಾದ ಕೊಡುಗೆ ಸ್ಮರಣೀಯವಾಗಿದೆ ಎಂದ ಅವರು, ಜಿಕೆವಿಕೆಯ ಕೋವಿಡ್ ಕೇರ್ ಸೆಂಟರ್ ಅತ್ಯುತ್ತಮವಾಗಿದ್ದು, ಯಾರೇ ಸೋಂಕಿತರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದಾಗಿದೆ. ಇಲ್ಲಿಗೆ ಬಂದವರಿಗೆ ನಿಸ್ಸಂಶಯವಾಗಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂದರು.

ಬೋಯಿಂಗ್‍ನಿಂದ 450 ಬೆಡ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿದ ಮಾತುಕತೆ ಫಲವಾಗಿ ಯಲಹಂಕ ಭಾಗದಲ್ಲಿ 200 ಆಕ್ಸಿಜನ್ ಬೆಡ್‍ಗಳ ಚಿಕಿತ್ಸಾ ಘಟಕವನ್ನು ಬೋಯಿಂಗ್ ಸಂಸ್ಥೆ ಸ್ಥಾಪಿಸಿದ್ದು, ಅದು ಲೋಕಾರ್ಪಣೆಗೆ ಸಿದ್ಧವಾಗಿದೆ. ಇನ್ನೂ 250 ಬೆಡ್‍ಗಳನ್ನು ಮಾಡಿಕೊಡಲು ಅದೇ ಸಂಸ್ಥೆ ಮುಂದೆ ಬಂದಿದೆ. ಅದು ಕೂಡ ಬೇಗ ಕಾರ್ಯಾರಂಭ ಆಗಲಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕರಕುಶಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಸಿಎಸ್‍ಆರ್ ಸಲಹೆಗಾರ ಕೆ.ವಿ.ಮಹೇಶ್, ಯಲಹಂಕ ವಲಯದ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News