ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ: ಒತ್ತಾಯ

Update: 2021-05-08 12:26 GMT

ಬೆಂಗಳೂರು, ಮೇ 8: ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಮೃತರ ಪೋಷಕರು ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವುದು ರಾಜ್ಯದ ಹಲವೆಡೆ ವರದಿಯಾಗಿದೆ. ಈ ಸಂಬಂಧ ರಾಜ್ಯ ಸರಿಕಾರ ವೈದ್ಯರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೈಟ್ ಸ್ಪಾಕ್ರ್ಸ್ ವೈದ್ಯಕೀಯ ಸಂಘದ ಸಂಚಾಲಕ ಎಸ್.ಹನುಮಂತ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿಗೆ ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಮೇಲೆ ರೋಗಿಯನ್ನು ಕಳೆದುಕೊಂಡ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಇದೇ ರೀತಿಯಾದ ಘಟನೆ ಕೆಲವು ದಿನಗಳ ಹಿಂದೆ ಮಂಡ್ಯ ಹಾಗೂ ಗುಲ್ಬರ್ಗಾ ಸರಕಾರಿ ಆಸ್ಪತ್ರೆಯಲ್ಲಿಯೂ ಸಹ ಜರುಗಿದೆ. ಇದರಿಂದ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಕಷ್ಟಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. 

ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ಆಕ್ಸಿಜನ್ ಸಿಲಿಂಡರ್‍ಗಳು ಸಿಗದೆ ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರಕಾರದ ಬೇಜವಾಬ್ದಾರಿತನವೇ ಕಾರಣವಾಗಿದೆ. ಈ ಸಂದರ್ಭದಲ್ಲಿ ಅವಿರತವಾಗಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರ ಪರಿಶ್ರಮವನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಹಾಗೂ ಸರಕಾರ ವೈದ್ಯರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News