ಅಸ್ಸಾಂ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಹಿಮಂತ ಶರ್ಮಾ ಮುಂಚೂಣಿಯಲ್ಲಿ

Update: 2021-05-08 14:37 GMT

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಗೂ  ಬಿಜೆಪಿಯ ಹಿರಿಯ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರು ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಹಾಗೂ  ಗೃಹ ಸಚಿವ ಅಮಿತ್ ಷಾ ಅವರನ್ನು ದಿಲ್ಲಿ ನಿವಾಸದಲ್ಲಿ ಶನಿವಾರ ಭೇಟಿಯಾದರು.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ರವಿವಾರ ನಡೆಯಲಿದ್ದು ಶರ್ಮಾ ಸಿಎಂ  ಸ್ಪರ್ಧೆಯಲ್ಲಿ ಮುಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಅಸ್ಸಾಂ ನಾಯಕರು ಹಾಗೂ  ಬಿಜೆಪಿ ಹಿರಿಯ ನಾಯಕತ್ವವು ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ಇದಕ್ಕೂ ಮುನ್ನ ನಡ್ಡಾ, ಶಾ ಹಾಗೂ  ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಬ್ಬರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು.

ಆರೋಗ್ಯ ಸಚಿವರಾಗಿರುವ ಶರ್ಮಾ ಅವರೊಂದಿಗೆ ಬಿಜೆಪಿ ಮೊದಲಿಗೆ ಸಭೆ ನಡೆಸಿತು.  ಅದರ ನಂತರ ಹಾಲಿ ಮುಖ್ಯಮಂತ್ರಿ ಸೋನೊವಾಲ್ ಅವರೊಂದಿಗೆ ಮಾತುಕತೆ ನಡೆಸಿತು.

"ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಾಳೆ (ರವಿವಾರ) ಗುವಾಹಟಿಯಲ್ಲಿ ನಡೆಯಬಹುದು. ಆ ಸಭೆಯಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಹೊರಬರಲಿವೆ" ಎಂದು ನಡ್ಡಾ ಅವರ ನಿವಾಸದಿಂದ ಹೊರಬಂದ ಬಳಿಕ  ಶರ್ಮಾ ತಿಳಿಸಿದರು.

ಮುಖ್ಯಮಂತ್ರಿ ವಿಚಾರವನ್ನು  ಚರ್ಚಿಸಲು  ಸೋನೊವಾಲ್ ಹಾಗೂ ಶರ್ಮಾ ಇಬ್ಬರನ್ನೂ ಮುಖಾಮುಖಿ ಮಾತುಕತೆಗೆ ದಿಲ್ಲಿಗೆ ಕರೆಸಲಾಯಿತು. ಪಕ್ಷವು ಅಸ್ಸಾಂ  ಬಣ ವಾದವನ್ನು ತಪ್ಪಿಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಸರ್ಬಾನಂದ ಸೋನೊವಾಲ್ ಹಾಗೂ ಹಿಮಂತ ಶರ್ಮಾ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡುವುದು ಬಿಜೆಪಿಗೆ ಕಠಿಣ ಸವಾಲಾಗಿದೆ. ಇಬ್ಬರೂ ಪಕ್ಷದಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News