ಕಾಳಸಂತೆಯಲ್ಲಿ ಜೀವರಕ್ಷಕ ರೆಮ್‍ಡೆಸಿವಿರ್: ಮುಖ್ಯ ಕಾರ್ಯದರ್ಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪತ್ರ

Update: 2021-05-09 18:42 GMT

ಬೆಂಗಳೂರು, ಮೇ 9: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ `ಜೀವರಕ್ಷಕ' ರೆಮ್‍ಡೆಸಿವಿರ್ ಔಷಧ ನಿಯಂತ್ರಕರ ಮತ್ತು ಮಧ್ಯವರ್ತಿಗಳ ನಡುವೆ ಸಂಬಂಧವಿದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ನಾಗರಿಕರಿಗೆ ಈ ಔಷಧ ಜನರಿಗೆ ಸಿಗುತ್ತಿಲ್ಲ. ಆದುದರಿಂದ ರೆಮ್‍ಡೆಸಿವಿರ್ ಇಂಜೆಕ್ಷನ್ ಜನರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರಕ್ಕೆ ಔಷಧಿ ನಿಯಂತ್ರಕರ ಮೇಲೆ ನಿಯಂತ್ರಣವಿಲ್ಲ. ರೆಮ್‍ಡೆಸಿವಿರ್ ಔಷಧಿಯನ್ನು ಕೋವಿಡ್ ಸೋಂಕಿತರಿಗೆ ಜೀವರಕ್ಷಕ ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಔಷಧಿ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಆದರೆ, ರೆಮ್‍ಡೆಸಿವಿರ್ ಔಷಧಿಯಲ್ಲಿ ಕಾಳಸಂತೆಯಲ್ಲಿ 25 ಸಾವಿರ ರೂ.ನಿಂದ 40 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಇದರ ಎಂಆರ್‍ಪಿ ದರ 900 ರೂ.ನಿಂದ 4 ಸಾವಿರ ರೂ.ಗಳಾಗಿದೆ ಎಂದು ರಾಮಲಿಂಗಾರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಔಷಧಿ ತಯಾರಕರಿಂದ ವಿತರಕರು ಹಾಗೂ ಅವರಿಂದ ಔಷಧ ಮಳಿಗೆಗಳಿಗೆ ಮಾರಾಟ ನಡೆಯುತ್ತಿತ್ತು. ಆದರೆ, ಇದರಿಂದ ದುರುಪಯೋಗ ಆಗದಂತೆ ತಡೆಯುವ ಹಿನ್ನೆಲೆಯಲ್ಲಿ ಸರಕಾರ ತಯಾರಕರಿಂದಲೇ ರೆಮ್‍ಡೆಸಿವಿರ್ ನೇರವಾಗಿ ಖರೀದಿ ಮಾಡುತ್ತಿದೆ. ಎಲ್ಲ ದಾಸ್ತಾನು ಡ್ರಗ್ ಕಂಟ್ರೋಲರ್ ನಿಯಂತ್ರಣದಲ್ಲಿರುತ್ತದೆ. ಅವರು ಅಗತ್ಯಕ್ಕೆ ತಕ್ಕಂತೆ ಆಸ್ಪತ್ರೆಗೆ ನೇರವಾಗಿ ಔಷಧಿಯನ್ನು ರವಾನೆ ಮಾಡಬೇಕಿದೆ. ಆದರೆ, ವಾಸ್ತವದಲ್ಲಿ ನಡೆಯುತ್ತಿರುವುದೇ ಬೇರೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆಸ್ಪತ್ರೆಗಳಿಗೆ ರೆಮ್‍ಡೆಸಿವಿರ್ ಅಗತ್ಯಕ್ಕೆ ತಕ್ಕ ಹಾಗೆ ಪೂರೈಕೆ ಆಗುತ್ತಿಲ್ಲ. ಅಷ್ಟೇ ಅಲ್ಲದೆ, ಜೀವರಕ್ಷಕ ರೆಮ್‍ಡೆಸಿವಿರ್ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಆದರೆ, ಮಧ್ಯವರ್ತಿಗಳಿಗೆ ಔಷಧ ದೊರಕುತ್ತಿದೆ. ಈ ನಿಟ್ಟಿನಲ್ಲಿ ರೆಮ್‍ಡೆಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಸೂಕ್ತ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ರೆಮ್‍ಡೆಸಿವಿರ್ ದೊರಕಿಸಿಕೊಡಲು ಸರಕಾರ ಅಗತ್ಯ ಕ್ರಮ ವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News