ಅರ್ಹತೆಗೆ ಸಂದ ಗೌರವ: ಮಾಜಿ ಬ್ಯಾಂಕರ್‌, ಎಂಐಟಿ ಪದವೀಧರ ಈಗ ತಮಿಳುನಾಡಿನ ಹಣಕಾಸು ಸಚಿವ

Update: 2021-05-10 10:32 GMT
Photo: indianexpress

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸಚಿವ ಸಂಪುಟದಲ್ಲಿ ಮಹತ್ವದ ವಿತ್ತ ಖಾತೆ 55 ವರ್ಷದ ಪಳನಿವೇಲ್ ತ್ಯಾಗರಾಜನ್ ಅವರ ಪಾಲಾಗಿದೆ. ಪಿಟಿಆರ್ ಎಂದೇ ಜನಜನಿತರಾಗಿರುವ ತ್ಯಾಗರಾಜನ್ ಅವರು  ಎನ್‍ಐಟಿ ತಿರುಚ್ಚಿ ಇಲ್ಲಿನ ಇಂಜಿನಿಯರಿಂಗ್ ಪದವೀಧರರಾಗಿದ್ದಾರಲ್ಲದೆ  ನ್ಯೂಯಾರ್ಕ್‍ನ ಸ್ಟೇಟ್ ಯುನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಅಷ್ಟೇ ಅಲ್ಲದೆ  ಎಂಐಟಿಯ ಸ್ಲೋವನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‍ನಿಂದ ಫೈನಾನ್ಸ್ ವಿಷಯದಲ್ಲಿ ಇವರು ಎಂಬಿಎ ಪದವೀಧರರೂ ಆಗಿದ್ದಾರೆ.

ಪಿಟಿಆರ್ ಅವರ ಅಜ್ಜ ಪಿ ಟಿ ರಾಜನ್ ಅವರು 30ರ ದಶಕದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಮಂತ್ರಿಯಾಗಿದ್ದರೆ ಅವರ ತಂದೆ ಪಿಟಿಆರ್ ಪಳನಿವೇಲ್ ರಾಜನ್ ಡಿಎಂಕೆ ಸಚಿವರಾಗಿದ್ದರು.

ತ್ಯಾಗರಾಜನ್ ಅವರು ಮದುರೈ ಸೆಂಟ್ರಲ್ ಕ್ಷೇತ್ರದಿಂದ 34,176 ಮತಗಳ ಅಂತರದಲ್ಲಿ ಎರಡನೇ ಬಾರಿ ಗೆದ್ದು ಈ ಬಾರಿ ವಿತ್ತ ಸಚಿವರಾಗಿದ್ದಾರೆ.

1987ರಲ್ಲಿ ಭಾರತದಿಂದ ಅಮೆರಿಕಾಗೆ ತೆರಳಿದ್ದ ತ್ಯಾಗರಾಜನ್  ಅಲ್ಲಿ  ತಮ್ಮ ಸಹಪಾಠಿ ಮಾರ್ಗರೆಟ್ ಅವರನ್ನು ವಿವಾಹವಾಗಿದ್ದರು 2011ರಲ್ಲಿ ಅವರು ಸಿಂಗಾಪುರಕ್ಕೆ ತೆರಳಿ ಉನ್ನತ ಬ್ಯಾಂಕಿಂಗ್ ಹುದ್ದೆ ವಹಿಸಿಕೊಂಡಿದ್ದರು. 2015ರಲ್ಲಿ ಭಾರತಕ್ಕೆ ಮರಳಿದ್ದ ಅವರು  ಮುಂದಿನ ವರ್ಷ ಮದುರೈ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿ ಜಯ ಗಳಿಸಿದ್ದರು.

ಈಗ ಚೆನ್ನೈಯಲ್ಲಿ ತಮ್ಮ ಮಡದಿ, ಹಾಗೂ ಇಬ್ಬರು ಪುತ್ರರ ಜತೆ ವಾಸವಿರುವ ತ್ಯಾಗರಾಜನ್, ತಾವು ಯಾವತ್ತೂ ಜನಸೇವೆ ಮಾಡಲು ಬಯಸಿದ್ದಾಗಿ ತಿಳಿಸುತ್ತಾರೆ.

ಇದೀಗ ತಮಿಳುನಾಡಿನ ನೂತನ ವಿತ್ತ ಮಂತ್ರಿಯಾಗಿರುವ ಅವರು ಕೇಂದ್ರ ಸರಕಾರ ತಮಿಳುನಾಡಿನ ಜಿಎಸ್‍ಟಿ ಬಾಕಿಯನ್ನು ಆದಷ್ಟು ಬೇಗ ತೀರಿಸಬೇಕೆಂದು ಹೇಳುತ್ತಾರೆ.

ಮದುರೈ ಮೀನಾಕ್ಷಿ ದೇವರ ಪರಮ ಭಕ್ತರೂ ಆಗಿರುವ ತ್ಯಾಗರಾಜನ್ ತಮ್ಮ ಪ್ರಣಾಳಿಕೆಯಲ್ಲಿ ಮದುರೈ ದೇವಸ್ಥಾನವನ್ನು ನವೀಕರಣಗೊಳಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News