ಅನೈತಿಕ ಸಂಬಂಧ ಶಂಕಿಸಿ ವೈದ್ಯ ಪತಿಗೆ ನಿದ್ದೆ ಮಾತ್ರೆ, ಕರೆಂಟ್‌ ಶಾಕ್‌ ನೀಡಿ ಕೊಂದ ಕೆಮಿಸ್ಟ್ರಿ ಪ್ರೊಫೆಸರ್

Update: 2021-05-10 08:37 GMT
photo: indianexpress

ಭೋಪಾಲ್: ಮಧ್ಯ ಪ್ರದೇಶದ ಛತರ್ಪುರ್ ನಗರದಲ್ಲಿ ವೈದ್ಯರೊಬ್ಬರಿಗೆ ನಿದ್ದೆ ಮಾತ್ರೆ ನೀಡಿ, ಆತ ನಿದ್ದೆಗೆ ಜಾರಿದ ಮೇಲೆ ಕರೆಂಟ್ ಶಾಕ್ ನೀಡಿ ಕೊಂದ ಆರೋಪದ ಮೇಲೆ ಅವರ ಪತ್ನಿ, 63 ವರ್ಷದ ಕೆಮಿಸ್ಟ್ರಿ ಪ್ರೊಫೆಸರ್ ಒಬ್ಬರನ್ನು ಬಂಧಿಸಲಾಗಿದೆ.

ಆರೋಪಿ ಮಹಿಳೆಯನ್ನು ಮಮತಾ ಪಾಠಕ್ ಎಂದು ಗುರುತಿಸಲಾಗಿದೆ. ತನ್ನ ಪತಿ, ಜನಪ್ರಿಯ ವೈದ್ಯ  ನೀರಜ್ ಪಾಠಕ್ ಅವರಿಗೆ ವಿವಾಹೇತರ ಸಂಬಂಧವಿದೆಯೆಂಬ ಶಂಕೆಯಿಂದ  ಮಮತಾ ಈ ಕೊಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ದಂಪತಿ ಆಗಾಗ ಜಗಳವಾಡುತ್ತಿದ್ದರಲ್ಲದೆ ಕೆಲ ದಿನಗಳ ಹಿಂದೆ ನೀರಜ್ ಅವರು ತಮ್ಮ ವಕೀಲರ ಮೂಲಕ ವೀಡಿಯೋ ಬಿಡುಗಡೆಗೊಳಿಸಿ ತಮಗೆ ಪತ್ನಿಯಿಂದ ಜೀವ ಬೆದರಿಕೆಯಿದೆ ಆಕೆ ಯಾವತ್ತಾದರೂ ತಮ್ಮನ್ನು ಸಾಯಿಸಬಹುದು ಎಂದಿದ್ದರು.

ಎಪ್ರಿಲ್ 29ರಂದು ಕೊಲೆ ನಡೆದಿತ್ತು. ಆದರೆ ಮೇ 1ರಂದು ಮಮತಾ ಲೋಕನಾಥ್ ಪುರಂ ಪೊಲೀಸ್ ಠಾಣೆಗೆ ತೆರಳಿ ತನ್ನ ಪತಿ ಎಪ್ರಿಲ್ 29ರಂದು ಮನೆಯಲ್ಲಿ ಮೃತಪಟ್ಟಿದ್ದಾರೆಂದು ಹೇಳಿದ್ದರು. ಊಟಕ್ಕೆ ಕರೆಯಲೆಂದು ರಾತ್ರಿ 9 ಗಂಟೆಗೆ ಅವರ ಕೊಠಡಿಗೆ ತೆರಳಿದಾಗ ಅವರು ಅಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಾಡಿ ಬಡಿತ ಕೂಡ ನಿಂತಿತ್ತು ಎಂದು ತಿಳಿಸಿದ್ದರು. ಅವರಿಗೆ ಅದಾಗಲೇ ಜ್ವರವಿದ್ದುದರಿಂದ ಮರುದಿನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ  ಪೊಲಿಸರಿಗೆ ಮಾಹಿತಿ  ನೀಡಿರಲಿಲ್ಲ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು.

ಆದರೆ ದೂರು ದಾಖಲಿಸಲು ಆಗಿರುವ ವಿಳಂಬದಿಂದ ಸಂಶಯಗೊಂಡ ಪೊಲೀಸರು ಮಮತಾ ಅವರನ್ನು ವಿಚಾರಣೆಗೊಳಪಡಿಸಿದಾಗ ತನ್ನ ಪತಿಯನ್ನು ಕೊಂದಿದ್ದನ್ನು ಆಕೆ ಒಪ್ಪಿಕೊಂಡಿದ್ದು ನಂತರ ಆಕೆಯನ್ನು ಬಂಧಿಸಲಾಗಿದೆ.

ಮೃತ ನೀರಜ್  ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ.  ಎಪ್ರಿಲ್ 29ರ ರಾತ್ರಿ ಆಹಾರದ ಜತೆ  ಹೆಚ್ಚು ನಿದ್ದೆ ಗುಳಿಗೆ ಮಿಶ್ರಣಗೊಳಿಸಿ ಮಮತಾ ನೀಡಿದ್ದರು. ಆತ ನಿದ್ದೆಗೆ ಜಾರುತ್ತಿದ್ದಂತೆಯೇ ಎಕ್ಸ್‍ಟೆನ್ಶನ್ ಕಾರ್ಡ್ ಬಳಸಿ ಶಾಕ್ ನೀಡಿ ಕೊಂದಿದ್ದರೆನ್ನಲಾಗಿದೆ.

ನೀರಜ್ ಸೊದರ ಪಂಕಜ್ ಪ್ರಕಾರ ದಂಪತಿ ಕಳೆದ 11 ವರ್ಷಗಳಿಂದ ಪ್ರತ್ಯೇಕವಾಗಿದ್ದು ನಾಲ್ಕು ತಿಂಗಳ ಹಿಂದೆ ನೀರಜ್ ಛತ್ತರ್ಪುರ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಹುದ್ದೆಯಿಂದ  ಸ್ವಯಂನಿವೃತ್ತಿಗೊಳ್ಳುವುದಾಗಿ ಹೇಳಿದ ನಂತರ ಮಮತಾ ಅವರ ಜತೆ ಮತ್ತೆ ವಾಸಿಸಲು ಬಂದಿದ್ದರು.

ಪಂಕಜ್ ಪ್ರಕಾರ  ಆರೋಪಿ ಮಹಿಳೆ ನೀರಜ್ ಅವರು ಇತ್ತೀಚೆಗೆ ಶೌಚಾಲಯದಲ್ಲಿ ಬಂಧಿಯಾಗಿಸಿದ್ದರಿಂದ ಪೊಲೀಸರಿಗೆ   ಮಾಹಿತಿ ನೀಡಲಾಗಿತ್ತು. ಆದರೆ ಯಾವುದೇ ದೂರು ದಾಖಲಾಗದೇ ಇದ್ದುದರಿಂದ ಕ್ರಮ ಕೈಗೊಳ್ಳಲಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News