ಮೋದಿ ಸರಕಾರದ ಕೋವಿಡ್ ನಿರ್ವಹಣೆ ಕುರಿತು ಬಿಜೆಪಿ, ಸಂಘ ಪರಿವಾರ ಪಾಳಯದಲ್ಲಿ ಅಸಮಾಧಾನ: ವರದಿ

Update: 2021-05-10 09:57 GMT

ಹೊಸದಿಲ್ಲಿ:  ದೇಶವನ್ನೇ ತಲ್ಲಣಗೊಳಿಸಿರುವ ಕೋವಿಡ್ ಎರಡನೇ ಅಲೆ ಹಾಗೂ  ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಆಡಳಿತ ಬಿಜೆಪಿ ಹಾಗೂ ಆರೆಸ್ಸೆಸ್  ಪಾಳಯದಲ್ಲಿ ಆತಂಕ ಮೂಡಿಸಿವೆ. ಮೋದಿ ಅಧಿಕಾರಕ್ಕೆ ಬಂದಂದಿನಿಂದ ಕಳೆದ ಏಳು ವರ್ಷಗಳಲ್ಲಿ ಸಂಘ ಪರಿವಾರ ಈ ಪರಿಯಲ್ಲಿ ಆತಂಕಕ್ಕೊಳಗಾಗಿರಲಿಲ್ಲ ಎನ್ನಲಾಗಿದೆ.

ಉಗ್ರ ಸ್ವರೂಪ ತಾಳಿರುವ ಕೋವಿಡ್ ಎರಡನೇ ಅಲೆಯಿಂದಾಗಿ  ಆಡಳಿತ ಪಕ್ಷದ ಪ್ರಮುಖ ಬೆಂಬಲಿಗರನ್ನೇ ಬಾಧಿಸಿದ್ದರೂ ಸರಕಾರ ಕೈಚೆಲ್ಲಿ ಕುಳಿತಿದೆ ಎಂಬ  ಭಾವನೆ ವ್ಯಾಪಕವಾಗಿದೆ.

"ನೀವು ಯಾರನ್ನಾದರೂ ಕಳೆದುಕೊಂಡರೆ ಆ ನೋವು ಮತ್ತು ಆಕ್ರೋಶ ಬಹಳ ಕಾಲ ಉಳಿಯುತ್ತದೆ ಹಾಗೂ ಇದು ಯಾವುದೇ ರೂಪದಲ್ಲಿ ಅಭಿವ್ಯಕ್ತಿಯಾಗಬಹುದು" ಎಂದು ಪಕ್ಷದ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ ಮೂರು ವರ್ಷಗಳೇ ಇದ್ದರೂ ಉತ್ತರ ಪ್ರದೇಶದಲ್ಲಿ  ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇತ್ತೀಚೆಗೆ ಅಲ್ಲಿ ನಡೆದ ಪಂಚಾಯತ್ ಚುನಾವಣೆಗಳ ಫಲಿತಾಂಶ ಕೂಡ ಬಿಜೆಪಿಯಲ್ಲಿ ಆತಂಕ ಮೂಡಿಸಿದೆ.

ಉತ್ತರ ಪ್ರದೇಶದ ಬರೇಲಿಯ ತಮ್ಮ ಕ್ಷೇತ್ರದಲ್ಲಿ ಆಕ್ಸಿಜನ್ ಸಮಸ್ಯೆ ಹಾಗೂ ಕೋವಿಡ್ ರೋಗಿಗಳ ಸಂಕಷ್ಟ ಕುರಿತು ಇತ್ತೀಚೆಗೆ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರು ಉ ಪ್ರ ಮುಖ್ಯಮಂತ್ರಿ ತಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವುದು ಕೂಡ  ಸಾಕಷ್ಟು ಸುದ್ದಿ ಮಾಡಿದೆ.

ಇಂತಹ ಒಂದು ಸಾಂಕ್ರಾಮಿಕವನ್ನು ಎದುರಿಸಲು ದೇಶದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸನ್ನದ್ಧಗೊಳಿಸಬೇಕಿದೆ ಎಂದು ಪಕ್ಷದ ಹಲವು ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಮೇಲಾಗಿ ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿರುವುದೂ ``ತಪ್ಪು ಸಂದೇಶ'' ರವಾನಿಸಿದೆ ಎಂದು  ಹಲವು ನಾಯಕರು  ಅಭಿಪ್ರಾಯಿಸಿದ್ದಾರೆನ್ನಲಾಗಿದೆ.

ಮೇಲಾಗಿ ಕಳೆದ ಬಾರಿಗೆ ವ್ಯತಿರಿಕ್ತವೆಂಬಂತೆ ಈ ಬಾರಿ ಪಕ್ಷದ ತಳಮಟ್ಟದ ಕಾರ್ಯಕರ್ತರು ಕೋವಿಡ್ ಬಾಧಿತರಿಗೆ ಸಹಾಯಹಸ್ತ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲವೆಂದೂ ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News