ತೇಜಸ್ವಿ ಸೂರ್ಯ ಆರೋಪದ ಬಳಿಕ ಅಮಾನತುಗೊಂಡಿದ್ದ 17 ಮಂದಿ ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರು

Update: 2021-05-10 15:34 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರ ಹೇಳಿಕೆ ಬೆನ್ನಲ್ಲೇ ಅಮಾನತುಗೊಂಡಿದ್ದ 17 ಮಂದಿ ನೌಕರರು ಸೋಮವಾರ ಕರ್ತವ್ಯಕ್ಕೆ ಹಾಜರಾದರು.

ಮೇ 4ರಂದು ಕೋವಿಡ್ ವಾರ್ ರೂಂ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರ ದಾಳಿ ನಡೆಸಿದ ನಂತರ ಈ 17 ಜನ ನೌಕರರು ಅಮಾನತುಗೊಂಡಿದ್ದರು. ಇದಾದ ಬಳಿಕ ಕ್ರಿಸ್ಟಲ್ ಇನ್ಫೊಸಿಸ್ಟಂ ಅಂಡ್ ಸರ್ವಿಸಸ್ ಎಂಬ ಹೊರಗುತ್ತಿಗೆ ಸಂಸ್ಥೆಯ ಅಧಿಕಾರಿಗಳು, ಕೋವಿಡ್ ದಕ್ಷಿಣ ವಲಯ ವಾರ್ ರೂಮ್‍ನ ಉಸ್ತುವಾರಿ, ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಭೇಟಿ ಮಾಡಿ ನೌಕರರು ಹಾಸಿಗೆ ಬ್ಲಾಕಿಂಗ್‍ನಲ್ಲಿ ಪಾಲ್ಗೊಂಡಿಲ್ಲ. ಇವರನ್ನು ಮರುನೇಮಕ ಮಾಡಿಕೊಳ್ಳಬೇಕೆಂದು ಸಲ್ಲಿಸಿದ ಮನವಿಗೆ ಸ್ಪಂದನೆ ದೊರೆತ ಹಿನ್ನೆಲೆ ನೌಕರರು ಸೋಮವಾರದಿಂದ ಮತ್ತೆ ಕಾರ್ಯನಿರ್ವಹಿಸಿದರು ಎನ್ನಲಾಗಿದೆ.

ಸದ್ಯ ಇವರನ್ನು ದಕ್ಷಿಣ ವಲಯ ವ್ಯಾಪ್ತಿಗೆ ಬರುವ 6 ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಲಾಗಿದೆ. ಅವರಿಗೆ, ಪ್ರತಿ ಸೋಂಕಿತರ 20 ಜನ ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ನೀಡಲಾಗಿದೆ ಎಂದು ಪಾಲಿಕೆಯ ಜಂಟಿ ಆಯುಕ್ತರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News