ಸಮರೋಪಾದಿಯಲ್ಲಿ ಲಸಿಕೆ ಉತ್ಪಾದನೆ ಆಗಬೇಕು: ಅರವಿಂದ ಕೇಜ್ರಿವಾಲ್ ಆಗ್ರಹ

Update: 2021-05-11 18:18 GMT

ಹೊಸದಿಲ್ಲಿ, ಮೇ 11: ಕೊರೋನ ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಂಡಿರುವುದರಿಂದ ಕೊರೋನ ವಿರುದ್ಧದ ಲಸಿಕೆಗೆ ಬೇಡಿಕೆ ಹೆಚ್ಚಿದ್ದು ಬಳಕೆಗೆ ಸಾಕಾಗುವಷ್ಟು ಲಸಿಕೆ ಉತ್ಪಾದಿಸಲು ಸೆರಂ ಮತ್ತು ಭಾರತ್ ಬಯೊಟೆಕ್ ಸಂಸ್ಥೆಗಳು ಹೆಣಗಾಡುತ್ತಿವೆ. ಈ ಹಿನ್ನೆಲೆಯಲ್ಲಿ ಲಸಿಕೆ ತಯಾರಿಸುವ ಸೂತ್ರ(ಫಾರ್ಮುಲಾ)ವನ್ನು ಇತರ ಸಂಸ್ಥೆಗಳೊಂದಿಗೆ ಹಂಚಿಕೊಂಡರೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಅನುಕೂಲವಾಗುತ್ತದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಈಗ ಭಾರತದಲ್ಲಿ ಕೊರೋನ ಸೋಂಕಿನ ಎರಡು ಲಸಿಕೆಗಳು ಮಾತ್ರ ಲಭ್ಯವಿದ್ದು ಸೆರಂ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೊಟೆಕ್ ಇವನ್ನು ಉತ್ಪಾದಿಸುತ್ತಿವೆ. ಮೂರನೇ ಲಸಿಕೆಯಾಗಿ ರಶ್ಯಾದ ಸ್ಪುಟ್ನಿಕ್ಗೆ ಅನುಮೋದನೆ ಲಭಿಸಿದ್ದರೂ ಇದು ಇನ್ನೂ ಭಾರತದಲ್ಲಿ ಲಭ್ಯವಾಗುತ್ತಿಲ್ಲ. ಆದ್ದರಿಂದ ಲಸಿಕೆ ತಯಾರಿಸುವ ಸೂತ್ರವನ್ನು ಹಂಚಿಕೊಂಡರೆ ಇನ್ನಷ್ಟು ಸಂಸ್ಥೆಗಳೂ ಲಸಿಕೆ ತಯಾರಿಸಬಹುದು ಮತ್ತು ಈ ಮೂಲಕ ಹೆಚ್ಚು ಲಸಿಕೆ ಲಭ್ಯವಾಗುತ್ತದೆ ಎಂದು ಕೇಜ್ರೀವಾಲ್ ಸಲಹೆ ನೀಡಿದ್ದಾರೆ.

ದೇಶದಲ್ಲಿ ಈಗ ಕೇವಲ 2 ಸಂಸ್ಥೆಗಳು  ಪ್ರತೀ ತಿಂಗಳು 6ರಿಂದ 7 ಕೋಟಿ ಡೋಸ್ ಲಸಿಕೆ ಉತ್ಪಾದಿಸುತ್ತವೆ. ಇದೇ ವೇಗದಲ್ಲಿ ಮುಂದುವರಿದರೆ ದೇಶದ ಎಲ್ಲಾ ಜನರಿಗೂ ಲಸಿಕೆ ಹಾಕಬೇಕಿದ್ದರೆ ಕನಿಷ್ಟ 2 ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ ಸೋಂಕಿನ ಹಲವು ಅಲೆಗಳು ಬರಬಹುದು. ಇದೀಗ ಲಸಿಕೆ ಉತ್ಪಾದನೆಯ ನಿಟ್ಟಿನಲ್ಲಿ ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ಜೊತೆಗೆ ಲಸಿಕೆ ಉತ್ಪಾದನೆ ಹೆಚ್ಚಿಸುವ ಸಮಯ ಬಂದಿದೆ ಎಂದವರು ಹೇಳಿದ್ದಾರೆ.

ಮುಂದಿನ ಎರಡು ತಿಂಗಳೊಳಗೆ ದೇಶದ ಎಲ್ಲಾ ಪ್ರಜೆಗಳಿಗೂ ಲಸಿಕೆ ಹಾಕಬೇಕಿದೆ. ಆದ್ದರಿಂದ ಕೇಂದ್ರ ಸರಕಾರ ತನ್ನ ಅಧಿಕಾರ ಬಳಸಿಕೊಂಡು ಲಸಿಕೆ ಉತ್ಪಾದನೆಯ ಸೂತ್ರವನ್ನು ಇತರ ಸಂಸ್ಥೆಗಳಿಗೂ ತಿಳಿಸುವಂತೆ ಸೂಚಿಸಬೇಕು. ಈಗ ದಿಲ್ಲಿಯಲ್ಲಿ ದಿನಾ 1.25 ಲಕ್ಷ ಡೋಸ್ ಲಸಿಕೆ ಹಾಕಲಾಗುತ್ತಿದೆ. ಈ ಪ್ರಮಾಣವನ್ನು 3 ಲಕ್ಷ ಡೋಸ್ಗೆ ಹೆಚ್ಚಿಸುವ ಉದ್ದೇಶವಿದೆ. ಆದರೆ ಇದಕ್ಕೆ ಲಸಿಕೆಯ ಕೊರತೆ ಸಮಸ್ಯೆ ಎದುರಾಗಿದೆ ಎಂದು ಕೇಜ್ರೀವಾಲ್ ಹೇಳಿದ್ದಾರೆ.

ದಿಲ್ಲಿಯಲ್ಲಿ ಲಾಕ್ಡೌನ್ ಯಶಸ್ವಿಯಾಗಿದ್ದು ದೈನಂದಿನ ಸೋಂಕು ಪ್ರಕರಣ ಇಳಿಕೆಯಾಗುತ್ತಿದೆ. ಅಲ್ಲದೆ ದಿಲ್ಲಿಯಲ್ಲಿ ಈಗ ಆಮ್ಲಜನಕ ಅಥವಾ ಐಸಿಯು ವ್ಯವಸ್ಥೆಯ ಕೊರತೆಯಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News