ಖಾಸಗಿ ಕಂಪನಿಗಳಿಂದ 69 ಐಸಿಯು ಹಾಸಿಗೆಗಳು, ಜೀವರಕ್ಷಕ ವೈದ್ಯಕೀಯ ಉಪಕರಣಗಳ ಕೊಡುಗೆ

Update: 2021-05-11 18:36 GMT

ಬೆಂಗಳೂರು, ಮೇ 11: ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ನಿರಂತರ ಏರಿಕೆ ಕಾಣುತ್ತಿರುವ ನಡುವೆಯೇ ಎಂಬೆಸ್ಸಿ ಆರ್‍ಇಐಟಿ ಕಾರ್ಪೋರೇಟ್ ಕನೆಕ್ಟ್ ಕಾರ್ಯಕ್ರಮದಡಿ, ಎ.ಎನ್.ಜಿ, ಸ್ವಿಸ್ ರೆ, ಮೆಕ್ ಎಫೇ, ಎಕ್ಸಾ ಏಕ್ಸೆಲ್, ಕ್ಯಾಪಿಟಲ್ಯಾಂಡ್ ಮತ್ತು ಯಾಹೂ ಇಂಡಿಯಾ ಕಂಪನಿಗಳ ಸಹಯೋಗದೊಂದಿಗೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕರೆಗೆ ಸ್ಪಂದಿಸಿ 69 ಅತ್ಯಾಧುನಿಕ ಐಸಿಯು ಹಾಸಿಗೆಗಳು ಮತ್ತು ಜೀವರಕ್ಷಕ ವೈದ್ಯಕೀಯ ಉಪಕರಣಗಳ ಕೊಡುಗೆ ಪ್ರಕಟಿಸಲಾಗಿದೆ.

ಬೆಂಗಳೂರಿನ ಮೂರು ಸರಕಾರಿ ಆಸ್ಪತ್ರೆಗಳಲ್ಲಿ ಇವುಗಳನ್ನು ಶೀಘ್ರದಲ್ಲಿ ಅಳವಡಿಸಲಾಗುವುದು. ನಗರದ ಹಳೇ ಮದ್ರಾಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 24, ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯಲ್ಲಿ 25 ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಐಸಿಯು ಹಾಸಿಗೆಗಳನ್ನು ಅಳವಡಿಸಲಾಗುವುದು. 3-4 ವಾರಗಳಲ್ಲಿ ಈ ಹೊಸ ಮೂಲಸೌಕರ್ಯ ರೂಪುಗೊಳ್ಳಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 8 ಬಿಬಿಎಂಪಿ ವಲಯಗಳಲ್ಲಿ ತಲಾ 500 ಐಸಿಯು ಹಾಸಿಗೆಗಳನ್ನು ಸ್ಥಾಪಿಸಲು ನೋಡಲ್ ಅಧಿಕಾರಿಯನ್ನಾಗಿ ವಾರ್ತಾ ಇಲಾಖೆ ಆಯುಕ್ತ ಡಾ. ಪಿ.ಎಸ್.ಹರ್ಷ(ಐಪಿಎಸ್) ಅವರನ್ನು ನೇಮಕ ಮಾಡಿದ್ದರು. ಮುಖ್ಯಮಂತ್ರಿಯ ಆದೇಶದಂತೆ ಕಾರ್ಯಪ್ರವೃತ್ತರಾಗಿರುವ ನೋಡಲ್ ಅಧಿಕಾರಿ ಡಾ.ಹರ್ಷ ಅವರ ಮೂಲಕ ಇದೇ ಮೇ 8 ರಂದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯು 86 ತುರ್ತು ಚಿಕಿತ್ಸಾ ಘಟಕಗಳ ಐಸಿಯು ಹಾಸಿಗೆಗಳನ್ನು ನೀಡುವುದಾಗಿ ಪ್ರಕಟಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಆಸ್ಪತ್ರೆಗಳ ತುರ್ತು ಸೇವೆ ಮೂಲಸೌಕರ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ನೆರವಾದ ಎಂಬೆಸ್ಸಿ ಹಾಗೂ ಇತರೆ ಕಂಪನಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸವಾಲಿನ ಸಮಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬೇರೆ ಕಾರ್ಪೋರೇಟ್ ಕಂಪನಿಗಳು ಕೂಡ ಮುಂದೆ ಬರುವ ವಿಶ್ವಾಸವಿದೆ. ಅನೇಕ ಕಂಪನಿಗಳು ಸಿಎಸ್‍ಆರ್ ಅನುದಾನವನ್ನು ಬಳಸಿಕೊಂಡು ಕೋವಿಡ್ ವಿರುದ್ಧ ಹೋರಾಟ ನಡೆಸಲು ಸರಕಾರದೊಂದಿಗೆ ಕೈ ಜೋಡಿಸಿವೆ ಎಂದು ಹರ್ಷ ತಿಳಿಸಿದ್ದಾರೆ.

ಬೇರೆ ಸರಕಾರಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜು ಹಾಗೂ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಐಸಿಯು ಅಳವಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕೋವಿಡ್ ಸಮರದಲ್ಲಿ ಸರಕಾರದೊಂದಿಗೆ ಕೈಜೋಡಿಸಲು ಉತ್ಸುಕರಾಗಿರುವ ಖಾಸಗಿ ಉದ್ಯಮ ವಲಯ  nodalicubbmp@gmail.com ಇಮೇಲ್‍ನಲ್ಲಿ ಸರಕಾರದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹರ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News