ಶೀರೂರು ಮಠಕ್ಕೆ ಬಾಲಕ ಉತ್ತರಾಧಿಕಾರಿ ಬೇಡ: ವಿಶ್ವ ವಿಜಯ ತೀರ್ಥ

Update: 2021-05-13 15:17 GMT

ಉಡುಪಿ, ಮೇ 13: ಲಕ್ಷ್ಮೀವರ ತೀರ್ಥರ ನಿಧನದಿಂದ ತೆರವಾಗಿದ್ದ ಶೀರೂರು ಮಠದ ಉತ್ತರಾಧಿಕಾರಿಯ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಲೇ ಒಂದು ವರ್ಗದಿಂದ ಅದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಈ ಆಕ್ಷೇಪ ವ್ಯಕ್ತಪಡಿಸಿರುವುದು ಬೇರೆ ಯಾರೂ ಅಲ್ಲ, ದಶಕಗಳ ಹಿಂದೆ ಪೇಜಾವರ ಮಠಾಧೀಶರಾಗಿದ್ದ ವಿಶ್ವ ವಿಜಯ ತೀರ್ಥರು !

ಈ ಕುರಿತು ಆಕ್ಷೇಪ ಎತ್ತಿರುವ ವಿಶ್ವ ವಿಜಯರು, ಮಠಕ್ಕೆ ಬಾಲ ಸನ್ಯಾಸಿಯನ್ನು ನೇಮಕ ಮಾಡಬಾರದು ಎಂದು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದೇನೆ. ಇದೀಗ 15 ವರ್ಷದ ಬಾಲಕನಿಗೆ ಸನ್ಯಾಸ ನೀಡಲಾಗುತ್ತಿದೆ. ಇದು ಅಶಾಸ್ತ್ರೀಯ ಮತ್ತು ಅವೈಜ್ಞಾನಿಕ ನಡೆ ಎಂದಿದ್ದಾರೆ.

ವೈರಾಗ್ಯ ಬಂದಾಗ ಸನ್ಯಾಸ ನೀಡಬೇಕು ಎಂದು ಮಧ್ವ ವಿಜಯದಲ್ಲಿ ಹೇಳಿದೆ. ವೇದಾಂತ, ತರ್ಕ, ಸಂಸ್ಕೃತ ಜ್ಞಾನ ಇಲ್ಲದ ಬಾಲಕನಿಗೆ ವೈರಾಗ್ಯ ಬರುವುದು ಹೇಗೆ? ಬಾಲಸನ್ಯಾಸ ರದ್ದಾಗಬೇಕು ಎಂದು ಕಾನೂನು ಹೋರಾಟ ಮಾಡುತ್ತಿದ್ದೇನೆ. ಈ ಹಿಂದೆ ಬಾಲ ಸನ್ಯಾಸದಿಂದ ಅಷ್ಟಮಠಗಳಲ್ಲಿ ಅನರ್ಥಗಳು ಆಗುತ್ತಿದ್ದವು. ವಿದ್ಯಾಮಾನ್ಯ ಮತ್ತು ವಿಶ್ವೇಶತೀರ್ಥರು ಬಾಲಸನ್ಯಾಸ ಅಸಮಂಜಸ ಎಂದಿದ್ದರು ಎಂದು ಹೇಳಿದ್ದಾರೆ.

ಈಗ ಶೀರೂರು ಮಠಕ್ಕೆ ಯತಿಯನ್ನು ನೇಮಿಸುತ್ತಿರುವ ಸೋದೆ ಮಠಾಧೀಶರ ನಡೆ ಸರಿಯಲ್ಲ ಎಂದ ಅವರು, ಲಾಕ್ಡೌನ್ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಬಾರದು ಎಂಬ ನಿಯಮ ಇದೆ. ಈ ಕಾರ್ಯಕ್ರಮ ಹೇಗೆ ನಡೆಯಿತು? ಹೇಗೆ ಅವಕಾಶ ನೀಡಲಾಯಿತು? ಕೋರ್ಟಿನಲ್ಲಿ ಪ್ರಕರಣ ಇರುವಾಗ ಬಾಲ ಸನ್ಯಾಸಿಯನ್ನು ನೇಮಕ ಮಾಡುವುದು ಸರಿಯಲ್ಲ. ಲಾಕ್ಡೌನ್ ಸಮಯದಲ್ಲಿ ಕೋರ್ಟ್ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ. 2017-2019 ರಲ್ಲಿ ನಾನು ಅಷ್ಟಮಠಾಧೀಶರ ವಿರುದ್ಧ ಈ ಸಂಬಂಧ ಕೋರ್ಟಿನಲ್ಲಿ ಕೇಸು ಹಾಕಿದ್ದೇನೆ ಎಂದು ಹೇಳಿದ್ದಾರೆ.

ಶೀರೂರು ಮಠದ ಉತ್ತರಾಧಿಕಾರಿಯಾಗಿ ಹದಿನೈದರ ಹರೆಯದ ಬಾಲಯತಿ ಅನಿರುದ್ಧ ಸರಳತ್ತಾಯರ ಪಟ್ಟಾಭಿಷೇಕ ಇಂದು ಮತ್ತು ನಾಳೆ ಶೀರೂರಿನ ಮೂಲ ಮಠದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News