ಸತ್ಯ ಬಯಲಿಗೆ ಬರಲಿ

Update: 2021-05-15 09:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ದುರಂತ ಸಾವುಗಳ ಬಗ್ಗೆ ರಾಜ್ಯ ಸರಕಾರದ ನಡೆ ಸಂಶಯಾಸ್ಪದವಾಗಿದೆ. ಏನನ್ನೋ ಮುಚ್ಚಿಡಲು ಮಸಲತ್ತು ನಡೆದಿದೆ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಆದರೆ ಹೈಕೋರ್ಟಿನ ನ್ಯಾಯಮೂರ್ತಿ ಎ. ಎನ್. ವೇಣುಗೋಪಾಲಗೌಡ ಅವರ ನೇತೃತ್ವದ ತ್ರಿಸದಸ್ಯ ಸಮಿತಿ ಕೂಡ ಈ ಸಂದೇಹಕ್ಕೆ ಪುಷ್ಟಿ ನೀಡಿದ್ದು. ಈ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ತಿರುಚಲಾಗಿದೆ ಎಂದು ಹೇಳಿದೆ. ಅಲ್ಲದೆ ದುರಂತಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಕ್ಷಣ ವಶಕ್ಕೆ ಪಡೆದು ಸಂರಕ್ಷಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಆಮ್ಲಜನಕ ಕೊರತೆಯೇ ಅನಾಹುತಕ್ಕೆ ಕಾರಣ ಎಂದು ಈ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ ಹಾಗೂ ಆಮ್ಲಜನಕ ಪೂರೈಕೆ ಮತ್ತು ಬಳಕೆಯ ಬಗ್ಗೆ ಹಲವಾರು ಶಿಫಾರಸುಗಳನ್ನು ಈ ಸಮಿತಿ ಮಾಡಿದೆ.

ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಸಂಖ್ಯೆ 24 ಅಲ್ಲ 37 ಎಂದು ಈ ಸಮಿತಿ 31 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದೆ. ದುರಂತಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿಯೇ ಕಾರಣ ಎಂದು ಈ ವರದಿಯಿಂದ ತಿಳಿದು ಬಂದಿದೆ. ದಾಖಲೆ ತಿದ್ದಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿರುವುದು ಈ ಸಮಿತಿ ನಡೆಸಿದ ತನಿಖೆಯಿಂದ ಸ್ಪಷ್ಟವಾಗಿದೆ. ಈ ದುರ್ಘಟನೆಯ ಕುರಿತು ಏಕಕಾಲದಲ್ಲಿ ಐದು ತನಿಖೆಗಳು ನಡೆಯುತ್ತಿವೆ. ಘಟನೆ ನಡೆದ ತಕ್ಷಣ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ನೇತೃತ್ವದಲ್ಲಿ ಪ್ರಾಥಮಿಕ ತನಿಖೆಗೆ ರಾಜ್ಯ ಸರಕಾರ ಆದೇಶ ಮಾಡಿತ್ತು. ರಾಜ್ಯ ಮಾನವ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಣೆಯಿಂದ ತನಿಖೆ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಈ ಮಧ್ಯೆ ಆರೋಗ್ಯ ಇಲಾಖೆ ಆಂತರಿಕ ತನಿಖೆಗೆ ಮುಂದಾಗಿತ್ತು. ಈ ನಡುವೆ ಸಂವಿಧಾನದ 226 ಅನುಚ್ಛೇದದ ಅನ್ವಯ ತನಗಿರುವ ಅಧಿಕಾರವನ್ನು ಬಳಸಿಕೊಂಡ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ರಾಜ್ಯ ಕಾನೂನು ಸೇವೆಗಳ ಉಸ್ತುವಾರಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ. ಎನ್. ವೇಣುಗೋಪಾಲಗೌಡ ಮತ್ತು ಕೆ. ಎನ್. ಕೇಶವನಾರಾಯಣ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ನೇಮಿಸಿತ್ತು. ಹೈಕೋರ್ಟ್ ಮಧ್ಯಪ್ರವೇಶದ ಸುಳಿವು ಸಿಗುತ್ತಿದ್ದಂತೆ ರಾಜ್ಯ ಸರಕಾರ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಆದೇಶ ಹೊರಡಿಸಿದೆ. ಇಂತಹ ಗಂಭೀರ ಆರೋಪಗಳು ಬಂದಾಗ ಅಧಿಕಾರದಲ್ಲಿರುವವರು ತರಾತುರಿಯಲ್ಲಿ ತನಿಖೆಗೆ ಆದೇಶ ಮಾಡಿ ಬಿಸಿಯನ್ನು ತಣ್ಣಗೆ ಮಾಡುವುದು ಹೊಸದೇನಲ್ಲ.ಆದರೆ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ರಾಜ್ಯ ಸರಕಾರ ಅವಸರವಸರವಾಗಿ ತನಿಖಾ ಆಯೋಗ ರಚಿಸಿರುವುದರ ಔಚಿತ್ಯ ಅರ್ಥವಾಗಲಿಲ್ಲ. ಹೀಗೆ ಏಕಕಾಲದಲ್ಲಿ ಐದಾರು ತನಿಖೆಗಳು ನಡೆದು ತನಿಖಾ ವರದಿಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ದುರಂತಕ್ಕೆ ಕಾರಣವಾಗಿರುವ ಖಳ ನಾಯಕರು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂಬುದು ಕಾನೂನು ಪರಿಣಿತರ ಅಭಿಪ್ರಾಯವಾಗಿದೆ.

ಮೂವತ್ತಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಚಾಮರಾಜನಗರ ದುರಂತ ಸಾಮಾನ್ಯ ಪ್ರಕರಣವಲ್ಲ. ಕೋವಿಡ್ ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವಿಗೀಡಾದಲ್ಲಿ ಅಂತಹ ಅನಾಹುತಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಮಾನವ ಹತ್ಯೆಯ ಆರೋಪವನ್ನು ಹೊರಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಇಂತಹದ್ದೇ ಒಂದು ಪ್ರಕರಣದಲ್ಲಿ ಇತ್ತೀಚೆಗೆ ಹೇಳಿದೆ.ಚಾಮರಾಜನಗರ ದುರಂತದ ಹಿನ್ನೆಲೆಯಲ್ಲಿ ಹೇಳುವುದಾದರೆ ಕೋವಿಡ್ ರೋಗಿಗಳ ಚಿಕಿತ್ಸಾ ವ್ಯವಸ್ಥೆ, ಕೋವಿಡ್ ಎದುರಿಸಲು ರಾಜ್ಯ ಸರಕಾರ ಕೈಗೊಂಡ ಕ್ರಮಗಳು, ಆಮ್ಲಜನಕದ ಬೇಡಿಕೆ ಹಾಗೂ ಪೂರೈಕೆ ವ್ಯವಸ್ಥೆ, ಜಿಲ್ಲಾಡಳಿತ ಹಾಗೂ ಆರೋಗ್ಯ ಮಂತ್ರಿಗಳ ಮೇಲಿನ ಕರ್ತವ್ಯ ಲೋಪದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆದು ಸತ್ಯ ಹೊರಗೆ ಬರಬೇಕಾಗಿದೆ.

ಹೈಕೋರ್ಟ್ ತನಗಿರುವ ಸಂವಿಧಾನದತ್ತ ಅಧಿಕಾರವನ್ನು ಬಳಸಿಕೊಂಡು ಈ ದುರಂತ ಪ್ರಕರಣದ ತನಿಖೆಗೆ ತ್ರಿ ಸದಸ್ಯ ಸಮಿತಿಯನ್ನು ರಚಿಸಿರುವಾಗ ರಾಜ್ಯ ಸರಕಾರ ಗಾಬರಿಗೊಂಡು ತರಾತುರಿಯಲ್ಲಿ ಆಯೋಗವೊಂದನ್ನು ನೇಮಕ ಮಾಡಿರುವುದು ಶಿಷ್ಟಾಚಾರಕ್ಕೆ ಮಾಡಿದ ಅಪಚಾರ ಎಂದು ಹೈಕೋರ್ಟ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ. ಲೋಪಗಳನ್ನು ಮುಚ್ಚಿಹಾಕಲು ನಡೆದ ಹುನ್ನಾರವಿದು ಎಂಬ ಭಾವನೆ ಸಾರ್ವಜನಿಕರಲ್ಲೂ ಮೂಡಿದೆ. ಏನೇ ಇರಲಿ ಸರಕಾರ ತಪ್ಪಿತಸ್ಥರನ್ನು ರಕ್ಷಿಸುತ್ತದೆ ಎಂಬ ಸಂದೇಹ ಜನರಲ್ಲಿ ಮೂಡಬಾರದು. ಈ ಮಧ್ಯೆ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ನಡೆದ ತನಿಖೆಯ ಆಧಾರದಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ಹೇಳಿರುವುದು ಶ್ಲಾಘನೀಯವಾಗಿದೆ.

ಅದೇನೇ ಇರಲಿ ಚಾಮರಾಜನಗರ ಆಮ್ಲಜನಕ ದುರಂತಕ್ಕೆ ಸಂಬಂಧಿಸಿದಂತೆ ಸ್ಥಳ ತನಿಖೆ, ಸಂಬಂಧಿಕರ ಹೇಳಿಕೆ ದಾಖಲೀಕರಣ, ವೈದ್ಯಕೀಯ ಹಿನ್ನೆಲೆಯ ತನಿಖೆ ಸೇರಿದಂತೆ ಉಳಿದೆಲ್ಲ ಪ್ರಕ್ರಿಯೆಗಳು ಹೈಕೋರ್ಟ್ ನೇಮಿಸಿದ ತನಿಖೆಯ ಮೂಲಕವೇ ನಡೆಯುವುದು ಸೂಕ್ತ. ಮುಂದೆ ಇಂತಹ ದುರ್ಘಟನೆ ಸಂಭವಿಸದಂತೆ ಸರಕಾರ ನೋಡಿಕೊಳ್ಳಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕಾನೂನು ಕ್ರಮಕ್ಕೆ ಒಳಪಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News