ಜೋ ಬೈಡನ್ ರ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್

Update: 2021-05-15 03:52 GMT

ವಾಷಿಂಗ್ಟನ್: ಸೆನೆಟ್ ಸದಸ್ಯರಿಂದ ವ್ಯಾಪಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಬೈಡನ್ ಆಡಳಿತದ ಆಫೀಸ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಬಜೆಟ್ (ಓಎಂಬಿ) ಮುಖ್ಯಸ್ಥೆ ಹುದ್ದೆಯಿಂದ ಹಿಂದೆ ಸರಿದಿದ್ದ ಭಾರತ ಮೂಲದ ನೀರಾ ಟಂಡನ್ ಇದೀಗ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಶ್ವೇತಭವನ ಪ್ರವೇಶಿಸಲಿದ್ದಾರೆ.

ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ ಸಂಸ್ಥೆಯ ಸಂಸ್ಥಾಪಕ ಜಾನ್ ಪೊಡೆಸ್ಟಾ ಈ ಬಗ್ಗೆ ಹೇಳಿಕೆ ನೀಡಿ, "ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ನಿಯುಕ್ತಿಗೊಂಡಿರುವ ನೀರಾ ಅವರ ಬುದ್ಧಿಮತ್ತೆ, ಸ್ಥಿರತೆ ಮತ್ತು ರಾಜಕೀಯ ಜಾಣ್ಮೆ ಬೈಡನ್ ಆಡಳಿತಕ್ಕೆ ದೊಡ್ಡ ಆಸ್ತಿಯಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ನಾವು 2003ರಲ್ಲಿ ಜಂಟಿಯಾಗಿ ಆರಂಭಿಸಿದ ಸಂಸ್ಥೆಗೆ ಅವರ ನೀತಿ ಅನುಭವ ಹಾಗೂ ನಾಯಕತ್ವ ಗುಣಗಳ ಸೇವೆ ನಷ್ಟವಾಗಲಿದೆ. ಹೊಸ ಹೊಣೆಯಲ್ಲಿ ಅವರು ಶ್ವೇತಭವನಕ್ಕೆ ಮತ್ತು ಅಮೆರಿಕದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಪಡೆದಿರುವುದು ನಿಜಕ್ಕೂ ರೋಮಾಂಚನ ಮೂಡಿಸಿದೆ" ಎಂದು ವಿವರಿಸಿದ್ದಾರೆ.

ಟಂಡನ್ ಪ್ರಸ್ತುತ ಸಿಎಪಿಯ ಅಧ್ಯಕ್ಷೆ ಮತ್ತು ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ವೇತಭವನದ ಓಎಂಬಿ ನಿರ್ದೇಶಕ ಹುದ್ದೆಯ ನಾಮನಿರ್ದೇಶನದಿಂದ ಕಳೆದ ಮಾರ್ಚ್‌ನಲ್ಲಿ ಟಂಡನ್ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News