'ಕೇಂದ್ರದಿಂದ 200 ಕೋಟಿ ಲಸಿಕೆ ಉತ್ಪಾದನೆ' ಇದು ಅಪ್ರಾಯೋಗಿಕ ಮತ್ತು ಅಸಾಧ್ಯ : ತಜ್ಞರ ಅಭಿಮತ

Update: 2021-05-15 05:03 GMT

ಹೊಸದಿಲ್ಲಿ: ಈ ವರ್ಷದ ಕೊನೆಯ ಐದು ತಿಂಗಳ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಕೋವಿಡ್-19 ಲಸಿಕೆ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲೇ, ಇದು ಅಪ್ರಾಯೋಗಿಕ ಮತ್ತು ಅಸಾಧ್ಯ ಎಂದು ತಜ್ಞರು ಸ್ಪಷ್ಟನೆ ನೀಡಿದ್ದಾರೆ.

ದೇಶದಲ್ಲಿ ಇದೀಗ ದಿನಕ್ಕೆ ಸರಾಸರಿ 23 ಲಕ್ಷ ಲಸಿಕೆ ಉತ್ಪಾದನೆಯಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾಡಿದ ಘೋಷಣೆಯಷ್ಟು ಪ್ರಮಾಣದ ಲಸಿಕೆ ಉತ್ಪಾದನೆಯಾಗಬೇಕಿದ್ದರೆ, ಆಗಸ್ಟ್ ಮತ್ತು ಡಿಸೆಂಬರ್ ತಿಂಗಳ ನಡುವೆ ಉತ್ಪಾದನೆ ಪ್ರಮಾಣ ಆರು ಪಟ್ಟು ಅಧಿಕವಾಗಬೇಕು ಎಂದು ಕೇಂದ್ರ ಸರ್ಕಾರದ ಘೋಷಣೆಯ ಬಗ್ಗೆ ವಿವರಿಸಿದ್ದಾರೆ.

200 ಕೋಟಿ ಲಸಿಕಾ ಡೋಸ್‌ಗಳನ್ನು ಉತ್ಪಾದಿಸುವುದು ಕನಸು ಎಂದು ಹೇಳಿದ್ದಾರೆ. ದೇಶದಲ್ಲಿ ಸುಮಾರು 95 ಕೋಟಿ ವಯಸ್ಕರಿದ್ದು, ಇವರೆಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗುವಷ್ಟು ಅಂದರೆ 2.16 ಶತಕೋಟಿ ಲಸಿಕಾ ಡೋಸ್‌ಗಳನ್ನು ಆಗಸ್ಟ್ ಮತ್ತು ಡಿಸೆಂಬರ್ ತಿಂಗಳ ಮಧ್ಯೆ ಉತ್ಪಾದಿಸಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. 75 ಕೋಟಿ ಕೋವಿಶೀಲ್ಡ್ ಲಸಿಕೆ, 55 ಕೋಟಿ ಕೊವ್ಯಾಕ್ಸಿನ್ ಲಸಿಕೆ ಮತ್ತು 15.6 ಕೋಟಿ ಸ್ಪುಟ್ನಿಕ್ ಲಸಿಕೆ ಸೇರಿರುತ್ತದೆ ಎಂದು ಹೇಳಿದ್ದರು.

ಆದರೆ ಇಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆ ಮಾಡುವುದು ಅಸಾಧ್ಯ ಎನ್ನುವುದನ್ನು ಕೋವಿಡ್ ಲಸಿಕೆ ಉತ್ಪಾದನೆ ಆರಂಭದಿಂದಲೂ ಸೂಕ್ಷ್ಮವಾಗಿ ಅವಲೋಕಿಸುತ್ತಾ ಬಂದ ತಜ್ಞರು ಅಭಿಪ್ರಾಯಪಡುತ್ತಾರೆ. "ಈ ಗುರಿಯನ್ನು ಸಾಧಿಸಿದರೆ ನಿಜಕ್ಕೂ ಅಚ್ಚರಿ. ಆದರೆ ಅದು ಸದ್ಯದ ಮಟ್ಟಿಗೆ ಅಸಾಧ್ಯ" ಎಂದು ಸೂಕ್ಷ್ಮ ಜೀವಿ ತಜ್ಞ ಸುಧಾಂಶು ವ್ರತಿ ಅಭಿಪ್ರಾಯಪಟ್ಟಿದ್ದಾರೆ.

ಟಾಟಾ ಸಮಾಜ ವಿಜ್ಞಾನ ಸಂಸ್ಥೆಗಳ ಅರ್ಥಶಾಸ್ತ್ರಜ್ಞ ಆರ್.ರಾಮಕುಮಾರ್ ಅವರ ಪ್ರಕಾರ, ಎಸ್‌ಐಐ ಹಾಲಿ ಇರುವ ಉತ್ಪಾದನಾ ಸಾಮರ್ಥ್ಯ ವನ್ನು 3 ಪಟ್ಟು ಹೆಚ್ಚಿಸಿದರೆ ಮಾತ್ರ ಗುರಿ ಸಾಧಿಸಲು ಸಾಧ್ಯ. ಜುಲೈ ತಿಂಗಳ ಒಳಗಾಗಿ ದಿನಕ್ಕೆ 33 ಲಕ್ಷ ಡೋಸ್‌ಗಳನ್ನು ಉತ್ಪಾದಿಸುವ ಗುರಿ ತಲುಪಲು ಹೆಣಗುತ್ತಿರುವ ಎಸ್‌ಐಐ ಡಿಸೆಂಬರ್ ವೇಳೆಗೆ 64 ಲಕ್ಷದ ಗುರಿಯನ್ನು ತಲುಪಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News