ಐಐಟಿ ಕ್ಯಾಂಪಸ್‌ಗಳಲ್ಲಿ ಜಾತಿ ವೈರಸ್‌ಗಳು

Update: 2021-05-17 05:08 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಪುಕ್ಕಟೆ ಅಕ್ಕಿ ಕೊಟ್ಟು ಸರಕಾರ ಕೂಲಿ ಕಾರ್ಮಿಕರನ್ನು ಸೋಮಾರಿಗಳನ್ನಾಗಿಸಿದೆ’ ‘ಸರಕಾರದ ಯೋಜನೆಗಳಿಂದ ದಲಿತರು ಕೊಬ್ಬಿದ್ದಾರೆ’ ‘ಮೀಸಲಾತಿಯಿಂದಾಗಿ ನಿಮಗೆ ದುರಹಂಕಾರ ಬಂದು ಬಿಟ್ಟಿದೆ’ ಇತ್ಯಾದಿ ಇತ್ಯಾದಿ ಹೇಳಿಕೆಗಳು ವಿದ್ಯಾವಂತರಿಂದಲೇ ಬೇರೆ ರೂಪಗಳಲ್ಲಿ ಹೊರಹೊಮ್ಮುತ್ತಿರುತ್ತವೆ. ನಾಡಿನ ಖ್ಯಾತ ಉದ್ಯಮಿ, ಪತ್ರಿಕೋದ್ಯಮಿ ಎಂದು ಹೆಸರು ಗಳಿಸಿರುವ ಓರ್ವ ವ್ಯಕ್ತಿಯ ‘ಕೊರೋನ ಕಾಲದಲ್ಲಿ ಜನರಿಗೆ ಪುಕ್ಕಟೆ ಅಕ್ಕಿ ನೀಡಬಾರದು’ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಗಮನಿಸಿರಬಹುದು. ಈ ಹೇಳಿಕೆಯ ಹಿಂದೆಯೂ ಜಾತೀಯ ಮನಸ್ಥಿತಿ ಕೆಲಸ ಮಾಡಿದೆ. ‘ಇಂದು ಜಾತಿ ಎಲ್ಲಿದೆ?’ ಎಂಬ ಪ್ರಶ್ನೆಯನ್ನು ಜೋರು ದನಿಯಲ್ಲಿ ಕೇಳುವ ವಿದ್ಯಾವಂತರೇ ತಮ್ಮ ಆಳದಲ್ಲಿ ಜಾತಿ ಮನಸ್ಥಿತಿಯನ್ನು ಬಚ್ಚಿಟ್ಟುಕೊಂಡಿರುತ್ತಾರೆ ಮತ್ತು ಆ ಕಾರಣದಿಂದಲೇ ಆ ಪ್ರಶ್ನೆಯನ್ನು ಪದೇ ಪದೇ ಕೇಳಿ, ಈ ದೇಶದಲ್ಲಿ ಜಾತಿ ಇಲ್ಲವೇ ಇಲ್ಲ ಎನ್ನುವ ವಾದವೊಂದನ್ನು ಹುಟ್ಟಿಸಿ ಹಾಕಲು ಪ್ರಯತ್ನಿಸುತ್ತಿರುತ್ತಾರೆ. ವಿದ್ಯಾವಂತರಲ್ಲಿ, ಸಾಹಿತಿಗಳಲ್ಲಿ, ಬರಹಗಾರರಲ್ಲಿ, ಉಪನ್ಯಾಸಕರಲ್ಲಿ ಜಾತೀಯತೆ ಮತ್ತು ಕೋಮುವಾದ ಹೊಸ ಪರಿಭಾಷೆಯನ್ನು ಪಡೆಯುತ್ತಿರುವುದು ಮತ್ತು ಅದಕ್ಕೆ ಮಾನವೀಯ ಮುಖವನ್ನು ತೊಡಿಸಿ ಆಕರ್ಷಕ ಭಾಷೆಯಲ್ಲಿ ಮಾರುಕಟ್ಟೆಗಳಿಗೆ ಬಿಡುತ್ತಿರುವುದು ಅತ್ಯಂತ ಅಪಾಯಕಾರಿ ವಿದ್ಯಮಾನವಾಗಿದೆ.

ಉತ್ತರಪ್ರದೇಶದ ಖರಗಪುರ ಐಐಟಿಯಲ್ಲಿ ಇತ್ತೀಚೆಗೆ ನಡೆದ ಜಾತಿನಿಂದನೆಯ ಘಟನೆಯೊಂದು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಮಾನವಿಕ ಹಾಗೂ ಸಮಾಜ ಶಾಸ್ತ್ರ ವಿಭಾಗದ ಪ್ರೊಫೆಸರ್ ಸೀಮಾ ಸಿಂಗ್ ಅವರು ಪರಿಶಿಷ್ಟ ಜಾತಿ/ಬುಡಕಟ್ಟುಗಳ ವಿದ್ಯಾರ್ಥಿಗಳು ಮತ್ತು ಭಿನ್ನಸಾಮರ್ಥ್ಯದವರಿಗಾಗಿ ಆಯೋಜಿಸಲಾಗಿದ್ದ ವಿಶೇಷ ತರಗತಿಯೊಂದರಲ್ಲಿ ಜಾತಿ ನಿಂದನೆಯನ್ನು ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೊಳಗಾಯಿತು. ಐಐಟಿ ಅತ್ಯುನ್ನತ ವಿದ್ಯಾವಂತರ ನೆಲೆಯಾದರೂ, ಇಲ್ಲಿ ಜಾತಿ ‘ಸಜ್ಜನರ’ ‘ಪ್ರತಿಭಾವಂತರ’ ಮುಖವಾಡದಲ್ಲಿ ಆಳವಾಗಿ ಬೇರು ಬಿಟ್ಟಿರುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಕಡೆಗಣಿಸಲ್ಪಟ್ಟ ಜಾತಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಪ್ರತ್ಯೇಕವಾಗಿಡುವಂತಹ ದೀರ್ಘಕಾಲೀನ ಇತಿಹಾಸ ಐಐಟಿಗಳಿಗಿದೆ. ಖರಗಪುರ ಐಐಟಿಯಲ್ಲಿ ಜಾತಿನಿಂದನೆ ಘಟನೆಯು ಬೆಳಕಿಗೆ ಬಂದ ಬಳಿಕ ಹಾಲಿ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತಮಗಾದ ತಾರತಮ್ಯದ ಸ್ವತಃ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದು ದೇಶಾದ್ಯಂತ ಐಐಟಿ ಕ್ಯಾಂಪಸ್‌ಗಳಲ್ಲಿ ಜಾತಿವಾದ ವ್ಯಾಪಕವಾಗಿ ಪ್ರಚಲಿತದಲ್ಲಿರುವುದು ಬೆಳಕಿಗೆ ತಂದಿದೆ. ಶಿಕ್ಷಣವು ಸಾಮಾಜಿಕ ಸಮಾನತೆಗೆ ಕೊಟ್ಟ ಕೊಡುಗೆ ಬಹುದೊಡ್ಡದು. ಶಿಕ್ಷಣದ ಹಂಚಿಕೆಯಲ್ಲೇ ತಾರತಮ್ಯವಿದ್ದ ನೆಲದಲ್ಲಿ ಅಂತಿಮವಾಗಿ, ಶಿಕ್ಷಣವೇ ತಾರತಮ್ಯಕ್ಕೆ ಭಾಗಶಃ ಲಗಾಮು ಹಾಕಿತ್ತು. ಆದಾಗ್ಯೂ ಉನ್ನತ ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ಜಾತಿ ಶ್ರೇಣೀಕರಣದ ಪಿಡುಗನ್ನು ಮರೆ ಮಾಚಲಾಗುತ್ತಿದೆ. ಐತಿಹಾಸಿಕವಾಗಿ ಒಂದು ಜಾತಿ, ಸಮುದಾಯವು ಪಡೆದುಕೊಂಡು ಬಂದ ಸೌಲಭ್ಯಗಳೇ, ಆಧುನಿಕ ಯುಗದಲ್ಲಿ ‘ಅರ್ಹತೆ’ ಎಂಬ ಹಣೆಪಟ್ಟಿಯನ್ನು ಧರಿಸಿಕೊಂಡಿದೆ ಮಾತ್ರವಲ್ಲ, ಹೋರಾಟದ ಮೂಲಕ ಶಿಕ್ಷಣವನ್ನು ತಮ್ಮದಾಗಿಸಿಕೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುತ್ತಿರುವ ದುರ್ಬಲ ಜಾತಿಯನ್ನು ‘ತಮ್ಮ ಅರ್ಹತೆಯನ್ನು ಕಿತ್ತುಕೊಂಡವರು’ ಎಂಬ ರೀತಿಯಲ್ಲಿ ಉಪಚರಿಸಲಾಗುತ್ತಿದೆ. ಅರ್ಹತೆ ಅಥವಾ ಮೆರಿಟ್ ಅನ್ನು ಇಂಜು ವಿವಿಧ ಪರೀಕ್ಷೆಗಳ ಮೂಲಕ ಅಳೆಯಲಾಗುತ್ತದೆ. ನಾವೆಲ್ಲಾ ಮಾತನಾಡುವ ಮೆರಿಟ್ ಎಂಬುದು ಜಾತಿ ತಾರತಮ್ಯದ ಪ್ರತಿಪಾದನೆಗೆ ಒಂದು ಪರ್ಯಾಯ ಪದವಾಗಿದೆ.

ಜೆಇಇಯಂತಹ ಉನ್ನತ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಯು ಅವರಿಗೆ ವಿವಿಧ ಸಂಪನ್ಮೂಲಗಳ ಲಭ್ಯತೆಯನ್ನು ಬಹುತೇಕವಾಗಿ ಆಧರಿಸಿದೆ. ಈ ಸಂಪನ್ಮೂಲಗಳ ಲಭ್ಯತೆಯು ವಿದ್ಯಾರ್ಥಿಗಳ ಜಾತಿ, ಸಾಮಾಜಿಕ-ಆರ್ಥಿಕ ಸ್ಥಾನಮಾನ, ಶಾಲಾಶಿಕ್ಷಣ ಹಾಗೂ ಅವರಿಗೆ ದೊರೆತ ಪೋಷಣೆಯಿಂದ ರೂಪುಗೊಳ್ಳುತ್ತದೆ. ಮೇಲ್ಜಾತಿಗಳ ಜನರಿಗೆ ಸಂಪನ್ಮೂಲಗಳು ಯಥೇಚ್ಛವಾಗಿ ಲಭ್ಯವಾಗುವುದರಿಂದ ಅವರು ತಮಗೆ ವಂಶಪಾರಂಪರ್ಯವಾಗಿ ಬಂದಿರುವ ಆರ್ಥಿಕ ಸಬಲತೆಯನ್ನು ಅರ್ಹತೆಯ ಹಕ್ಕಿನ ಪ್ರತಿಪಾದನೆಗಾಗಿ ಬಳಸಿಕೊಳ್ಳುತ್ತಾರೆ ಹಾಗೂ ಅವರು ತಮ್ಮನ್ನು ಸಮಕಾಲೀನ ಯುಗದ ಮೆರಿಟೊಕ್ರಾಟಿಕ್ (ಅರ್ಹತಾವಾದಿ) ಪ್ರಜೆಗಳೆಂದು ಬಿಂಬಿಸಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಅವರು ಐಐಟಿಯಂತಹ ಉನ್ನತ ವಲಯಗಳಲ್ಲಿ ಪ್ರಾಬಲ್ಯತೆಯನ್ನು ಸ್ಥಾಪಿಸಲು ಆರಂಭಿಸುತ್ತಾರೆ. ಈ ಮೇಲ್ಜಾತಿ ಗುಂಪುಗಳ ಪ್ರಾಬಲ್ಯವನ್ನು ಪ್ರಶ್ನಿಸುವಂತಹ ಪರೀಕ್ಷಾ ಕೋಚಿಂಗ್ ಸೌಲಭ್ಯ ಮತ್ತು ಮೀಸಲಾತಿಯ ವಿಷಯ ಬಂದಾಗ, ಅವರು ಮೆರಿಟ್ ಎಂಬ ಪದದ ಮೂಲಕ ಉನ್ನತ ಶಿಕ್ಷಣದ ಮೇಲೆ ತಮ್ಮ ಹಕ್ಕು ಸ್ಥಾಪನೆಗೆ ಮುಂದಾಗುತ್ತಾರೆ.

ಐಟಿಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋಟಾದ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಕಳಂಕಿತರಾಗಿಸುವ ಪ್ರವೃತ್ತಿ ಬೆಳೆಯಿತು. ಇದೇ ಸಂದರ್ಭದಲ್ಲಿ, ಡೊನೇಷನ್ ಮೂಲಕ ಪ್ರವೇಶ ಪಡೆಯುವುದೂ ‘ಆರ್ಥಿಕವಾಗಿ ಸಬಲರಾದವರಿಗೆ ನೀಡುವ ಮೀಸಲಾತಿ’ ಎನ್ನುವ ಅರಿವು ಯಾರಿಗೂ ಬಂದಿಲ್ಲ. ಹಣವೂ ಪ್ರತಿಭೆಯ ಭಾಗವಾಗಿಯೇ ಗುರುತಿಸಲ್ಪಡುತ್ತಿದೆ. ಈ ಪ್ರತಿಭೆಗಳನ್ನು ಪೋಷಿಸುವ ಭಾಗವಾಗಿಯೇ ಕೆಳ ಜಾತಿಗಳ ಗುಂಪುಗಳನ್ನು ಜಾತಿವಾದಿ ನಿಂದನೆಗಳು ಹಾಗೂ ಅಪಮಾನಗಳಿಗೆ ಬಲಿಪಶುಗಳನ್ನಾಗಿ ಮಾಡಲಾಯಿತು.ಐಐಟಿ ಖರಗಪುರದಲ್ಲಿ ಇತ್ತೀಚೆಗೆ ನಡೆದ ಘಟನೆಯು ಇದರ ಮುಂದುವರಿದ ಭಾಗವಾಗಿದೆ. ಇತ್ತೀಚಿನ ಕಾಲಘಟ್ಟದಲ್ಲಿ ದಮನಿತ ಜಾತಿಗಳ ವಿದ್ಯಾರ್ಥಿಗಳು ಐಐಟಿಗಳಲ್ಲಿ ಅಂಬೇಡ್ಕರ್, ಪೆರಿಯಾರ್, ಫುಲೆ ಹೆಸರುಗಳಲ್ಲಿ ಸಂಘಟಿತರಾಗುತ್ತಿದ್ದಾರೆ. ಆ ಮೂಲಕ ದಮನಿತ ಜಾತಿಗಳ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.

ಆದರೆ ದುರದೃಷ್ಟಕ್ಕೆ ಸಮಾನತೆಗಾಗಿ ಆಗ್ರಹಿಸುವ ಇಂತಹ ಸಂಘಟನೆಗಳಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಿ ದಮನಿಸುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಣ ಸಂಸ್ಥೆಯೊಳಗೆ ಜಾತಿ ಸಂಘಟನೆಗಳ ರಾಜಕೀಯ ಸಲ್ಲ ಎಂಬ ‘ಜಾತ್ಯತೀತ ಕೂಗು’ ಜಾತಿವಾದಿಗಳಿಂದಲೇ ಕೇಳಿ ಬರುತ್ತದೆ. ಆದರೆ ದಮನಿತ ಸಮುದಾಯ ಉನ್ನತ ಶಿಕ್ಷಣ ಸಂಸ್ಥೆಗಳ ಒಳಗೆ ಕೊನೆಯವರೆಗೂ ಉಸಿರು ಹಿಡಿದು ಬದುಕುತ್ತಿರುವುದು ಇಂತಹ ಸಂಘಟಿತ ಹೋರಾಟಗಳಿಂದಲೇ ಆಗಿದೆ. ‘ಯಾವುದೇ ದಿಕ್ಕಿನಡೆಗೆ ನೀವು ತಿರುಗಿದರೂ ಜಾತಿಯು ನಿಮ್ಮ ದಾರಿಗೆ ಅಡ್ಡ ಬರುವ ದೆವ್ವವಾಗಿದೆ’ ಎಂದು ಅಂಬೇಡ್ಕರ್ ಬರೆದಿದ್ದರು. ಇದು ಭಾರತಕ್ಕೆ ಸ್ವಾತಂತ್ರ ದೊರೆತು 75 ವರ್ಷಗಳಾದ ಆನಂತರವೂ ನಿಜವಾಗಿಯೇ ಉಳಿದುಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಜಾತಿವಾದದ ಜನಿವಾರ ಕಳಚಿ ಎಲ್ಲರನ್ನೂ ಒಳಗೊಂಡಂತಹ ಸೌಹಾರ್ದಪೂರ್ಣ ವಾತಾವರಣವನ್ನು ನಿರ್ಮಿಸುವ ತುರ್ತು ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News