ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2021-05-17 07:24 GMT

ಬೆಂಗಳೂರು, ಮೇ 17: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ ರೆಸ್ ಕೋರ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಭವನದ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.

'ಕೊರೋನದಿಂದ ಜನರು ಸಾವನ್ನಪ್ಪಲು ಕಾಂಗ್ರೆಸ್ ಪಕ್ಷದ ಹಿಂದಿನ ಆಡಳಿತವೇ ಕಾರಣ, ಕಾಂಗ್ರೆಸ್ ಕೊಲೆಗಡುಕ ಪಕ್ಷ' ಎಂದು ನಳಿನ್ ಕುಮಾರ್ ಕಟೀಲು ನೀಡಿದ್ದರೆನ್ನಲಾದ ಹೇಳಿಕೆಯನು ಖಂಡಿಸಿ ಈ ಪ್ರತಿಭಟನೆ ನಡೆಯಿತು.

ನಳಿನ್ ಅವರ ಭಾವಚಿತ್ರ ದಹಿಸಿದ ಪ್ರತಿಭಟನಾಕಾರರು, ದೇಶದ ಜನರನ್ನು ಇಂದು ಕೊಲ್ಲುತ್ತಿರುವುದ ಬಿಜೆಪಿಯ ದುರಾಡಳಿತ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಮೊದಲು ನಳಿನ್ ಕುಮಾರ್ ಹಾಗೂ ಕೊರೋನ ಸಂಕಷ್ಟವನ್ನು ನಿವಾರಿಸಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ನೈತಿಕ ಹೊಣೆ ಹೊತ್ತು ತೊಲಗಬೇಕು ಎಂದು ಒತ್ತಾಯಿಸಿದರು.

 ನಳಿನ್ ಕುಮಾರ್ ಓರ್ವ ಅನಾಗರಿಕ ರಾಜಕಾರಣಿ. ದೇಶದ ಜನರು ಕೊರೋನ ಸಂಕಷ್ಟದಲ್ಲಿ ನರಳಿ ಸಾಯುತ್ತಿರುವ ಸಂದರ್ಭದಲ್ಲಿ ಮತ್ತೊಂದು ಪಕ್ಷವನ್ನು ಟೀಕಿಸುವ ಅರ್ಹತೆ, ಯೋಗ್ಯತೆ ಅವರಿಗೆ ಇದೆಯೇ ಎಂದು ಪ್ರಶ್ನಿಸಿರುವ ಪ್ರತಿಭಟನಾಕಾರರು,  ದೇಶದಲ್ಲೇ ಕೊರೋನ ತಡೆಗಟ್ಟಲು ವಿಫಲವಾಗಿರುವ  ಭಾರತದ ಮೋದಿಯ  ದುರಾಡಳಿತ  ಈಗ ವಿಶ್ವಕ್ಕೆ  ಬಹಿರಂಗವಾಗಿದೆ.  ಇಂಥ ದುರಾಡಳಿತ ನೀಡಿ ಜನರನ್ನ ನಿತ್ಯ ಸಾಯುವ ಪರಿಸ್ಥಿತಿಗೆ ತಂದು ನಿಲ್ಲಿಸಿರುವುದು ಬಿಜೆಪಿ ಪಕ್ಷ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರುಗಳಾದ ಎಸ್. ಮನೋಹರ್. ಜಿ.ಜನಾರ್ದನ್ ಎ. ಆನಂದ್, ಎಂ.ಎ.ಸಲೀಂ. ಚಂದ್ರಶೇಖರ್. ಮಹೇಶ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News