ದೇಶದಲ್ಲಿ 2.5 ಕೋಟಿ ದಾಟಿದ ಕೊರೋನ ಸೋಂಕು ಪ್ರಕರಣ

Update: 2021-05-18 03:42 GMT

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಎರಡನೇ ಅಲೆಯ ಅಬ್ಬರ ಇಳಿಮುಖವಾಗುತ್ತಿರುವ ನಡುವೆಯೇ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.5 ಕೋಟಿ ದಾಟಿದೆ.

ವಿಶ್ವದಲ್ಲೇ ಅಮೆರಿಕ ಹೊರತುಪಡಿಸಿದರೆ ಭಾರತದಲ್ಲಿ ಮಾತ್ರ ಇಷ್ಟೊಂದು ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಮೂರನೇ ಸ್ಥಾನದಲ್ಲಿರುವ ಬ್ರೆಝಿಲ್‌ನಲ್ಲಿ 1.56 ಕೋಟಿ ಪ್ರಕರಣಗಳು ವರದಿಯಾಗಿವೆ.

ಹಿಂದಿನ ಅಂಕಿ ಅಂಶಗಳ ಜತೆ ಹೋಲಿಸಿದರೆ ಭಾರತದಲ್ಲಿ ಕೊನೆ 50 ಲಕ್ಷ ಪ್ರಕರಣಗಳು ಕೇವಲ 14 ದಿನಗಳಲ್ಲಿ ವರದಿಯಾಗಿವೆ. ಅದಕ್ಕೂ ಹಿಂದೆ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಎರಡು ಕೋಟಿಯ ಗಡಿ ದಾಟಿದ ಸಂದರ್ಭದಲ್ಲಿ 50 ಲಕ್ಷ ಪ್ರಕರಣಗಳು ದಾಖಲಾಗಲು 15 ದಿನ ತೆಗೆದುಕೊಂಡಿತ್ತು. ಒಂದು ಕೋಟಿಯಿಂದ ಒಂದೂವರೆ ಕೋಟಿ ಅಂತರ ತಲುಪಲು 121 ದಿನಗಳಾಗಿದ್ದವು.

ಇದರ ನಡುವೆಯೂ ದೇಶದಲ್ಲಿ ಸತತ ಎರಡನೇ ದಿನ ಹೊಸ ಪ್ರಕರಣಗಳ ಸಂಖ್ಯೆ 3 ಲಕ್ಷದ ಒಳಗಿದೆ ಹಾಗೂ ಸಾವಿನ ಸಂಖ್ಯೆ 4 ಸಾವಿರಕ್ಕಿಂತ ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2.6 ಲಕ್ಷ ಪ್ರಕರಣಗಳು ಹಾಗೂ 3719 ಸಾವಿನ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ 1.5 ಲಕ್ಷದಷ್ಟು ಕಡಿಮೆಯಾಗಿ 30 ಲಕ್ಷದ ಆಸುಪಾಸಿನಲ್ಲಿದೆ.

ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಅತ್ಯಧಿಕ (38 ಸಾವಿರ) ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡು (33 ಸಾವಿರ), ಮಹಾರಾಷ್ಟ್ರ (26,616) ಮತ್ತು ಕೇರಳ (21402) ನಂತರದ ಸ್ಥಾನಗಳಲ್ಲಿವೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲೂ 10 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News