ಅಪಾರ ಕೋವಿಡ್ ಸಾವಿನ ಲೆಕ್ಕ ಮುಚ್ಚಿಟ್ಟ ಉತ್ತರಾಖಂಡ: ತನಿಖಾ ವರದಿ

Update: 2021-05-18 06:20 GMT

ಡೆಹ್ರಾಡೂನ್: ಹರಿದ್ವಾರದ ಬಾಬಾ ಬರ್ಫಾನಿ ಆಸ್ಪತ್ರೆಯಲ್ಲಿ 65 ಕೋವಿಡ್ ಸಾವಿನ ಲೆಕ್ಕವನ್ನು ಮುಚ್ಚಿಟ್ಟ ಪ್ರಕರಣಗಳ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯಾದ್ಯಂತ ಹಲವು ಆಸ್ಪತ್ರೆಗಳಲ್ಲಿ ಹೀಗೆ ಕೋವಿಡ್-19 ಸೋಂಕಿತರ ಸಾವಿನ ಲೆಕ್ಕವನ್ನು ಮುಚ್ಚಿಟ್ಟ ಪ್ರಕರಣಗಳು ವರದಿಯಾಗಿವೆ.

ರೂರ್ಕಿ, ಡೆಹ್ರಾಡೂನ್ ಮತ್ತು ರುದ್ರಾಪುರ ಆಸ್ಪತ್ರೆಗಳಲ್ಲೂ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೆಹ್ರಾಡೂನ್ ನಗರ ಹೊರವಲಯದ ರಾಯಪುರದ ಸಿಸಿಸಿ ಆಸ್ಪತ್ರೆಯಲ್ಲಿ ಎ. 26ರಿಂದ ಮೇ 16ರ ನಡುವೆ ಸಂಭವಿಸಿದ 27 ಸಾವಿನ ಲೆಕ್ಕ ನೀಡಿಲ್ಲ. ಅಂತೆಯೇ ರೂರ್ಕಿ ಸೇನಾ ಆಸ್ಪತ್ರೆಯಲ್ಲಿ ಕೂಡಾ ಈ ಅವಧಿಯಲ್ಲಿ ಸಂಭವಿಸಿದ 28 ಸಾವು ಕೂಡಾ ದಾಖಲೆಗಳಲ್ಲಿ ಸೇರಿಲ್ಲ. ರುದ್ರಾಪುರ ಜೆಎಲ್‌ಎನ್ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ 65 ಮಂದಿ ಮೃತಪಟ್ಟ ಬಗ್ಗೆ ದಾಖಲೆಗೆ ಸೇರಿಸಲಾಗಿತ್ತು. ಈ ಎಲ್ಲರೂ ಎ. 28ರಿಂದ ಮೇ 7ರ ನಡುವೆ ಮೃತಪಟ್ಟವರು ಎಂದು ಹೇಳಲಾಗಿದೆ.

ಹರಿದ್ವಾರದ ಬಿಎಚ್‌ಇಎಲ್ ಆಸ್ಪತ್ರೆ ಕೂಡಾ ಎ. 29ರಿಂದ ಮೇ 12ರ ಅವಧಿಯಲ್ಲಿ ಆಸ್ಪತ್ರೆಯಲ್ಲಿ 15 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದೆ.

"ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದಾಗ, ಈ ಸಾವಿನ ಲೆಕ್ಕಗಳನ್ನು ಅರೋಗ್ಯ ಇಲಾಖೆಗೆ ನೇರವಾಗಿ ನೀಡಿದ್ದರೂ, ಇಲಾಖೆ ಈ ಸಂಖ್ಯೆಯನ್ನು ಕೋವಿಡ್ ಪೋರ್ಟೆಲ್‌ಗೆ ಅಪ್‌ಲೋಡ್ ಮಾಡಿಲ್ಲ ಎಂದು ಆಸ್ಪತ್ರೆಗಳು ಸ್ಪಷ್ಟಪಡಿಸಿವೆ. ಈ ಕಾರಣದಿಂದ ಸಾವಿನ ಸಂಖ್ಯೆ ವರದಿಯಾಗುತ್ತಿರಲಿಲ್ಲ" ಎಂದು ರೂರ್ಕಿ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಎಚ್.ಡಿ.ಶಕ್ಯ ತಿಳಿಸಿದ್ದಾರೆ.

ಆಸ್ಪತ್ರೆಯ ಡಾಟಾ ಎಂಟ್ರಿ ಸಿಬ್ಬಂದಿಗೆ ಸಾವಿನ ದಾಖಲೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ತಿಳಿಯದ ಕಾರಣದಿಂದ ಈ ಮೊದಲು ಸಾವಿನ ಸಂಖ್ಯೆ ಬಹಿರಂಗಪಡಿಸಿರಲಿಲ್ಲ ಎಂದು ರುದ್ರಾಪುರ ಸಿಸಿಸಿ ವೈದ್ಯಕೀಯ ಅಧೀಕ್ಷಕ ಡಾ.ಆನಂದ ಶುಕ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News