ಉತ್ತರ ಪ್ರದೇಶ: ಪೊಲೀಸರ ಎದುರೇ ಟಯರ್, ಪೆಟ್ರೋಲ್ ಬಳಸಿ ಮೃತದೇಹಗಳ ಅಂತ್ಯಕ್ರಿಯೆ; ತನಿಖೆಗೆ ಆದೇಶ

Update: 2021-05-18 12:31 GMT
Twitter/@alok_pandey

ಲಕ್ನೋ: ಪೊಲೀಸರ ಸಮ್ಮುಖದಲ್ಲಿ ಮೃತದೇಹಗಳನ್ನು ಟಯರ್ ಹಾಗೂ ಪೆಟ್ರೋಲ್ ಬಳಸಿ ಅಂತ್ಯಕ್ರಿಯೆ ಮಾಡುತ್ತಿರುವ ವೀಡಿಯೊ ವೈರಲ್ ಆದ ಬಳಿಕ ಕರ್ತವ್ಯಲೋಪ ಎಸಗಿರುವ ಐವರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಲಾಗಿದೆ.

ಈ ಘಟನೆ ಸೋಮವಾರ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಫೆಫ್ನಾದ ಮಡೆಘಾಟ್‌ನಲ್ಲಿ ನಡೆದಿದೆ. ಗಂಗಾನದಿ ತೀರದಲ್ಲಿ ಪತ್ತೆಯಾಗುತ್ತಿರುವ ಅನಾಥ ಮೃತದೇಹಗಳಿಗೆ ಅಂತ್ಯಕ್ರಿಯೆ ಮೇಲ್ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು.

ವಿಡಿಯೋ ವೈರಲ್ ಆದ ನಂತರ, ಬಲಿಯಾ ಜಿಲ್ಲಾ ಎಸ್ಪಿ ವಿಪಿನ್ ತಾಡಾ ಅವರು ಅನಾಥ ಮೃತದೇಹಗಳನ್ನು ದಹನ ಮಾಡುವ ಕೆಲಸದ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಐವರು ಪೊಲೀಸರನ್ನು ಅಮಾನತುಗೊಳಿಸಿದರು. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಹೆಚ್ಚುವರಿ ಎಸ್‌ಪಿ ಶ್ರೇಣಿಯ ಅಧಿಕಾರಿಯಿಂದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮೃತದೇಹಗಳು ಕೊಳೆಯುವ ಹಂತದಲ್ಲಿದ್ದು, ಹತ್ತಿರದಲ್ಲಿ ಉರುವಲು ಲಭ್ಯವಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಮೃತದೇಹಗಳಿಗೆ ಗೌರವಾನ್ವಿತ ದಹನ / ಸಮಾಧಿ ಮಾಡಬೇಕು ಎಂಬ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿರ್ದೇಶನವನ್ನು ಉಲ್ಲಂಘಿಸಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News