ವೈದ್ಯನಿಗೆ ಹಲ್ಲೆ ನಡೆಸಿ ಲಂಚಕ್ಕೆ ಬೇಡಿಕೆ ಆರೋಪ: ಇನ್‍ಸ್ಪೆಕ್ಟರ್ ಸೇರಿ ಮೂವರ ವರ್ಗಾವಣೆ

Update: 2021-05-18 12:42 GMT

ಬೆಂಗಳೂರು, ಮೇ 18: ರೆಮ್‍ಡೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಆರೋಪ ಸಂಬಂಧ ವೈದ್ಯರೊಬ್ಬರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿರುವ ಆರೋಪದ ಬೆನ್ನಲ್ಲೇ ಸಂಜಯ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಕಾತ್ಯಾಯಿನಿ ಸೇರಿ ಮೂವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಈ ಸಂಬಂಧ ಸೂಚನೆ ನೀಡಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಪ್ರಕರಣ ತನಿಖೆ ಮುಗಿಯುವವರೆಗೂ ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಜತೆಗೆ, ಪ್ರಕರಣ ತನಿಖೆಯನ್ನು ಜೆ.ಸಿ.ನಗರ ಎಸಿಪಿ ರೀನಾ ಸುವರ್ಣ ಅವರಿಗೆ ವಹಿಸಿರುವುದಾಗಿ ತಿಳಿಸಿದ್ದಾರೆ.

ಇತ್ತೀಚಿಗೆ ರೆಮ್‍ಡೆಸಿವಿರ್ ನಕಲಿ ಮಾರಾಟ ಪ್ರಕರಣದಲ್ಲಿ ವೈದ್ಯ ಸೇರಿ ನಾಲ್ವರನ್ನು ಸಂಜಯ ನಗರ ಪೊಲೀಸರು ಬಂಧಿಸಿ ಅಕ್ರಮ ಜಾಲವನ್ನು ಬಯಲಿಗೆಳೆದಿದ್ದರು. ಪ್ರಕರಣ ಸಂಬಂಧ ಕೆಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿ ಕೆಲ ವೈದ್ಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ಇದೇ ಪ್ರಕರಣದಲ್ಲಿ ಡಾ.ನಾಗರಾಜ್ ಎಂಬವರನ್ನು ಠಾಣೆಗೆ ಕರೆಸಿದ ಪೊಲೀಸರು ಉದ್ದೇಶಪೂರ್ವಕವಾಗಿ ಥಳಿಸಿ ಐದೂವರೆ ಲಕ್ಷ ರೂ. ಲಂಚ ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ವೈದ್ಯರು ಆರೋಪಿಸಿದ್ದರು. ಇದರ ಬೆನ್ನಲೇ ಇನ್‍ಸ್ಪೆಕ್ಟರ್ ಕಾತ್ಯಾಯಿನಿ ಸೇರಿ ಮೂವರನ್ನು ಡಿಸಿಪಿ ವರ್ಗಾವಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News