'ಟೂಲ್ ಕಿಟ್' ಬಳಸಿ ಭಾರತ, ಮೋದಿ ವರ್ಚಸ್ಸಿಗೆ ಕಾಂಗ್ರೆಸ್‍ನಿಂದ ಧಕ್ಕೆಗೆ ಯತ್ನ: ಬಿಜೆಪಿ ಆರೋಪ

Update: 2021-05-18 13:29 GMT

ಹೊಸದಿಲ್ಲಿ: ಹೊಸ ರೂಪಾಂತರಿ ಕೊರೋನಾವನ್ನು ಭಾರತದ ರೂಪಾಂತರಿ ಅಥವಾ 'ಮೋದಿ ರೂಪಾಂತರಿ' ಎಂದು ಕರೆಯುವ ಮೂಲಕ ಕಾಂಗ್ರೆಸ್ ಪಕ್ಷ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸಿಗೆ ಧಕ್ಕೆಗೆ 'ಟೂಲ್ ಕಿಟ್' ಒಂದರ ಮುಖಾಂತರ ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

“ಕಾಂಗ್ರೆಸ್ ಪಕ್ಷ ಕಷ್ಟದಲ್ಲಿರುವವರಿಗೆ ನೀಡಿದ ಸಹಾಯ ಹಸ್ತದ ಹಿಂದೆ ನೈಜ ಕಾಳಜಿ ಹೊಂದಿರದೆ ಹೆಚ್ಚಾಗಿ ಸ್ನೇಹಿತ ಪತ್ರಕರ್ತರು ಹಾಗೂ ಇನ್ಫ್ಲೂಯೆನ್ಸರ್‍ಗಳ ಮೂಲಕ ನಡೆಸುತ್ತಿರುವ ಪ್ರಚಾರ ತಂತ್ರವಾಗಿದೆ,'' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.

“ಟೂಲ್ ಕಿಟ್‍ಗಳು ಕಾಂಗ್ರೆಸ್ ಪಕ್ಷಕ್ಕೆ ಪರಕೀಯವೇನಲ್ಲ. ಅವರ ಹೆಚ್ಚಿನ ಶಕ್ತಿ ಅದನ್ನು ತಯಾರಿಸುವಲ್ಲಿ ಹೋಗುತ್ತದೆ. ಸೆಂಟ್ರಲ್ ವಿಸ್ತಾದ ಟೂಲ್ ಕಿಟ್ ಇಲ್ಲಿದೆ. ಅವರು ಪ್ರತಿ ವಾರ ಒಂದಲ್ಲ ಒಂದು ಟೂಲ್ ಕಿಟ್ ಮಾಡುತ್ತಾ ಇರುತ್ತಾರೆ ಹಾಗೂ ಅದನ್ನು ಬಯಲಿಗೆಳೆದಾಗ ನಿರಾಕರಿಸುತ್ತಾರೆ,'' ಎಂದೂ ಸಂಬಿತ್ ಬರೆದಿದ್ದಾರೆ.

“ರಾಹುಲ್ ಗಾಂಧಿ ಈ ಸಾಂಕ್ರಾಮಿಕದ ಸಂದರ್ಭವನ್ನು ಬಳಸಿಕೊಂಡು ಪ್ರಧಾನಿ ಮೋದಿಯ ವರ್ಚಸ್ಸಿಗೆ ಹಾನಿಯೆಸಗುತ್ತಿದ್ದಾರೆಂದು ಹೇಳಲು ಆಕ್ರೋಶ ಮೂಡುತ್ತಿದೆ. ರೂಪಾಂತರಿ ಕೊರೋನಾವನ್ನು ಮೋದಿ ಸ್ಟ್ರೈನ್ ಎಂದು ಕರೆಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಲಾಗಿದೆ,''ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ.

“ವಿದೇಶಿ ಪತ್ರಕರ್ತರ ಸಹಾಯದೊಂದಿಗೆ ಭಾರತದ ವರ್ಚಸ್ಸಿಗೆ ಧಕ್ಕೆ ತರಲು ಎಲ್ಲಾ ಯತ್ನಗಳನ್ನು ನಡೆಸಲಾಗಿದೆ. ಕುಂಭ ಮೇಳವನ್ನು `ಸೂಪರ್ ಸ್ಪ್ರೆಡ್ಡರ್ ಕುಂಭ್' ಎಂದು ಕರೆಯಲು ಕಾಂಗ್ರೆಸ್ ಟೂಲ್ ಕಿಟ್ ಸಲಹೆ ನೀಡಿದೆ,'' ಎಂದೂ ಅವರು ದೂರಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಟ್ವೀಟ್ ಮಾಡಿ “ಸಮಾಜವನ್ನು ಒಡೆದು ಇತರರ ವಿರುದ್ಧ ದ್ವೇಷ ಕಾರುವುದರಲ್ಲಿ ಕಾಂಗ್ರೆಸ್ ನಿಸ್ಸೀಮ. ದೇಶ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ `ಟೂಲ್ ಕಿಟ್' ಮಾಡೆಲ್‍ಗಳಾಚೆಗೆ ಏನಾದರೂ ಉತ್ತಮವಾದುದನ್ನು ಮಾಡಬೇಕು,''ಎಂದು ಬರೆದಿದ್ದಾರೆ.

ರಾಹುಲ್ ಗಾಂಧಿ ಅವರು “ಶೇಮ್ ಹಿಂದು, ಬ್ಲೇಮ್ ಹಿಂದು'' ತಂತ್ರಗಾರಿಕೆ ಹೊಂದಿದ್ದಾರೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಬಿಜೆಪಿಯ ಎಲ್ಲಾ ಆರೋಪಗಳನ್ನು ಕಾಂಗ್ರೆಸ್ ನಿರಾಕರಿಸಿದೆಯಲ್ಲದೆ ‘ನಕಲಿ ಟೂಲ್ ಕಿಟ್' ಹಿಡಿದುಕೊಂಡು ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸಲಾಗುತ್ತಿದೆ ಎಂದು ದೂರಿದೆ.

“ನಾವು ಜೆಪಿ ನಡ್ಡಾ ಹಾಗೂ ಸಂಬಿತ್ ಪಾತ್ರ ವಿರುದ್ಧ ಫೋರ್ಜರಿಗಾಗಿ ಎಫ್‍ಐಆರ್ ದಾಖಲಿಸುತ್ತೇವೆ. ದೇಶ ಕೋವಿಡ್‍ನಿಂದ ತತ್ತರಿಸಿರುವಾಗ ಸಹಾಯ ಮಾಡುವ ಬದಲು ಬಿಜೆಪಿ ನಿರ್ಲಜ್ಜೆಯಿಂದ ಇಂತಹ ಫೋರ್ಜರಿಗಳನ್ನು ಸೃಷ್ಟಿಸುತ್ತದೆ,'' ಎಂದು ಕಾಂಗ್ರೆಸ್ ಪಕ್ಷದ ಸಂಶೋಧನಾ ವಿಭಾಗದ ಮುಖ್ಯಸ್ಥ ರಾಜೀವ್ ಗೌಡ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News