ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ನ್ಯಾಯಾಲಯ

Update: 2021-05-18 15:20 GMT

ಹೊಸದಿಲ್ಲಿ: ಕುಸ್ತಿಪಟು ಹತ್ಯೆ ಪ್ರಕರಣದಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಅವರು ಮುಖ್ಯ ಪಿತೂರಿಗಾರ ಹಾಗೂ ಅವರ ವಿರುದ್ಧ ಆರೋಪಗಳು ಗಂಭೀರ ಸ್ವರೂಪದಲ್ಲಿವೆ ಎಂದು ಹೇಳಿದೆ.

ಕೊಲೆ, ಅಪಹರಣ ಹಾಗೂ ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ಎದುರಿಸುತ್ತಿರುವ ಸುಶೀಲ್ ಕುಮಾರ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ಅವರು ಜಾಮೀನು ನಿರಾಕರಿಸಿದರು.

ರಾಷ್ಟ್ರದ ರಾಜಧಾನಿಯ ಕ್ರೀಡಾಂಗಣ ಆವರಣದಲ್ಲಿ ಮೇ 4 ರ ರಾತ್ರಿ ಸುಶೀಲ್ ಕುಮಾರ್ ಹಾಗೂ  ಇತರ ಕುಸ್ತಿಪಟುಗಳು ಹಲ್ಲೆ ನಡೆಸಿದ ಘಟನೆಯ ನಂತರ ಕುಸ್ತಿಪಟು ಸಾಗರ್ ರಾಣಾ ಸಾವನ್ನಪ್ಪಿದ್ದರು, ಅವರ ಇಬ್ಬರು ಸ್ನೇಹಿತರು ಸೋನು ಹಾಗೂ  ಅಮಿತ್ ಕುಮಾರ್ಗೋಟ್ ಗಾಯಗೊಂಡಿದ್ದರು.

ಸುಶೀಲ್ ಕುಮಾರ್ ಅವರ ಬಂಧನಪೂರ್ವ ಜಾಮೀನು ವಜಾಗೊಳಿಸಿದಾಗ ನ್ಯಾಯಾಧೀಶರು, “ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದಲ್ಲಿವೆ. ಇದುವರೆಗಿನ ತನಿಖೆಯ ದಾಖಲೆಯ ಪರಿಶೀಲನೆಯಿಂದ, ಆರೋಪಿಯು ಮುಖ್ಯ ಪಿತೂರಿಗಾರ ಎಂದು ಅದು ಬಹಿರಂಗಪಡಿಸುತ್ತದೆ. ತನಿಖೆ ಇನ್ನೂ ನಡೆಯುತ್ತಿದೆ ಹಾಗೂ  ಕೆಲವು ಆರೋಪಿಗಳನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ. ಆರೋಪಿಗಳ ವಿರುದ್ದ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News