ನೀರು ಕೇಳಿದರೆ, ಗೇಟ್ ತಟ್ಟಬೇಡ ಹೋಗು ಆ ಕಡೆ ಅಂತಾರೆ: ಪೌರಕಾರ್ಮಿಕ ಮಹಿಳೆಯರ ಅಳಲು

Update: 2021-05-18 17:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 18: ಬೀದಿಯಲ್ಲಿರುವ ಕಸವನ್ನು ಸ್ವಚ್ಛ ಮಾಡುತ್ತೇವೆ. ಆ ಮೂಲಕ ನಾಗರಿಕರ ಆರೋಗ್ಯವನ್ನು ಕಾಪಾಡುತ್ತೇವೆ. ಆದರೆ, ನಮಗೆ ಬಾಯಾರಿದಾಗ ನೀರು ಕೇಳಲು ಮನೆಗಳ ಗೇಟ್ ತಟ್ಟಿದರೆ, ಗೇಟ್ ತಟ್ಟಬೇಡ, ಹೋಗು ಆ ಕಡೆ ಅಂತಾರೆ. ಇಂತಹ ಕೋವಿಡ್ ಸಮಯದಲ್ಲೂ ಜಾತಿ ನೋಡುವುದು ತಪ್ಪಿಲ್ಲವೆಂದು ಪೌರಕಾರ್ಮಿಕ ಮಹಿಳೆ ರತ್ನಾ ಕಣ್ಣೀರು ಹಾಕುತ್ತಾರೆ.

ಎಐಸಿಸಿಟಿಯು ವತಿಯಿಂದ ಆಯೋಜಿಸಿದ್ದ ಕೋವಿಡ್‍ನಿಂದಾಗಿ ಪೌರಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಒಂದು ವಾರ ಕೆಲಸ ನಿಲ್ಲಿಸಿದರೆ ನಾಗರಿಕರು ತಮ್ಮ ಮನೆಯಲ್ಲಿ ಶೇಖರಣೆಯಾಗಿರುವ ಕಸದಿಂದಲೇ ಸಾವನ್ನಪ್ಪುತ್ತಾರೆ. ಆದರೂ ಜನರು ಜಾತಿ ನೋಡುವುದು ಬಿಟ್ಟಿಲ್ಲ. ನಮಗೆ ಬಾಯಾರಿಕೆ ಆದಾಗ ನೀರಿನ ವ್ಯವಸ್ಥೆಯಿಲ್ಲ. ಬಿಬಿಎಂಪಿ ಕನಿಷ್ಠ ನೀರಿನ ವ್ಯವಸ್ಥೆ ಮಾಡಿಲ್ಲವೆಂದು ತಮ್ಮ ನೋವನ್ನು ಹಂಚಿಕೊಂಡರು.

ಸಂಬಳ ಇನ್ನೂ ಆಗಿಲ್ಲ: 18ನೇ ತಾರೀಖು ಕಳೆಯುತ್ತಾ ಬಂದರೂ ಇನ್ನೂ ಸಂಬಳ ಆಗಿಲ್ಲ. ಬಹುತೇಕ ಪೌರಕಾರ್ಮಿಕರು ಬಾಡಿಗೆ ಮನೆಯಲ್ಲಿರುವುದು. ಸರಿಯಾದ ಸಮಯಕ್ಕೆ ಬಾಡಿಗೆ ಕಟ್ಟಿಲ್ಲವೆಂದರೆ ಮನೆ ಮಾಲಕರು ಮನೆ ಖಾಲಿ ಮಾಡಿ ಅಂತಾರೆ. ನಮ್ಮ ಕಷ್ಟವನ್ನು ಬಂಗಲೆಗಳಲ್ಲಿರುವ ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಾರೆಯೇ ಎಂದು ಅವರು ಪ್ರಶ್ನಿಸುತ್ತಾರೆ.

ಯಾವುದೇ ಸೌಲಭ್ಯವಿಲ್ಲ: ಪೌರಕಾರ್ಮಿಕರಿಗೆ ಶೂ ಕೊಟ್ಟಿದ್ದೇವೆ, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಎಲ್ಲವನ್ನು ನೀಡಿದ್ದೇವೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಯಾವುದೂ ಕೊಟ್ಟಿಲ್ಲ. ಯಾವತ್ತೋ ನೀಡಿದ್ದನ್ನು ಕೆಲವರು ಬಳಸುತ್ತಿದ್ದಾರೆ. ಬಹುತೇಕರು ಬರೀ ಕೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮನೆಕೆಲಸದ ಮಹಿಳೆ ವಾನಮ್ಮ ಮಾತನಾಡಿ, ಕೋವಿಡ್ ಪ್ರಾರಂಭವಾದಾಗಿನಿಂದ ಮನೆ ಕೆಲಸ ಮಾಡುತ್ತಿದ್ದ ಬಹುತೇಕರು ನಿರುದ್ಯೋಗಿಗಳಾಗಿದ್ದಾರೆ. ನಮ್ಮನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಹತ್ತಾರು ವರ್ಷಗಳ ಕಾಲ ಅವರ ಸೇವೆ ಮಾಡಿದ್ದೇವೆ. ಅದರ ಪ್ರತಿಫಲವಾಗಿ ನಮಗೆ ಸಿಕ್ಕಿದ್ದು ಬರಿಗೈ ಮಾತ್ರ. ಸಂಬಳ ಕೇಳಿದರೆ ಕೆಲಸ ಮಾಡದೆ ಸಂಬಳ ಕೇಳುತ್ತೀರಲ್ಲ ಎಂದು ಮನೆ ಮಾಲಕರು ನಮ್ಮನ್ನೇ ಪ್ರಶ್ನಿಸುತ್ತಾರೆ. ಸರಕಾರ, ಮಾಧ್ಯಮ, ಸಂಘ, ಸಂಸ್ಥೆಗಳು ಯಾರು ಕೂಡ ನಮ್ಮ ಸಮಸ್ಯೆಯ ಕುರಿತು ಮಾತನಾಡುತ್ತಿಲ್ಲ. ನಾವು ಇದೇ ಕೆಲಸವನ್ನು ಮಾಡಿ ಜೀವನ ನಡೆಸುವವರು. ಈಗ ನಾವು ಎಲ್ಲಿಗೆ ಹೋಗಬೇಕು. ಸರಕಾರ ನಮಗೆ ಆರ್ಥಿಕ ಸೌಲಭ್ಯ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ವಿನಾಯಿತಿ ಅವಧಿ ವಿಸ್ತರಿಸಲಿ

ಲಾಕ್‍ಡೌನ್‍ನಿಂದಾಗಿ ಬೀದಿ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳಗ್ಗೆ 6ರಿಂದ 10ರವರೆಗೆ ಇರುವ ಲಾಕ್‍ಡೌನ್ ವಿನಾಯಿತಿಯಿಂದ ಏನೂ ಉಪಯೋಗ ಆಗುತ್ತಿಲ್ಲ. ಬೀದಿ ವ್ಯಾಪಾರಿಗಳು ಮಾರುಕಟ್ಟೆಗೆ ಬಂದು ತರಕಾರಿ, ಹೂಗಳನ್ನು ಕೊಂಡು ತಾವು ಮಾರಾಟ ಮಾಡುವ ಸ್ಥಳಕ್ಕೆ ಹೋಗುವಷ್ಟರಲ್ಲಿ 9ಗಂಟೆ ಆಗುತ್ತದೆ. ಇನ್ನೇನು ಎಲ್ಲ ಬಿಚ್ಚಿಟ್ಟು ಮಾರಾಟ ಮಾಡುವಷ್ಟೊತ್ತಿಗೆ ಪೊಲೀಸರು ವ್ಯಾಪಾರ ನಿಲ್ಲಿಸಿ ಅಂತಾರೆ. ನಾವು ಸಾಲ ಮಾಡಿ ತಂದಿದ್ದ ತರಕಾರಿ ವ್ಯಾಪಾರ ಆಗದೆ ರಸ್ತೆಯಲ್ಲಿಯೇ ಸುರಿಯಬೇಕು. ಹೀಗಾಗಿ ಲಾಕ್‍ಡೌನ್ ವಿನಾಯಿತಿ ಅವಧಿ ವಿಸ್ತರಿಸಬೇಕು. ಹಾಗೂ ಬೀದಿ ವ್ಯಾಪಾರಿಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು, ಕೋವಿಡ್ ಸೋಂಕಿಗೆ ಉಚಿತ ಚಿಕಿತ್ಸೆ ನೀಡಬೇಕು.

-ಸೈಯದ್ ಝಮೀರ್, ಬೀದಿ ವ್ಯಾಪಾರಿ

ಜನತೆ ರೋಗ ರುಜಿನಗಳಿಂದ ಸಾವಿನ ಹತ್ತಿರಕ್ಕೆ ಬಂದಿದ್ದಾರೆ. ಈಗಲಾದರು ಸರಕಾರ ಬಡವರ ಕಷ್ಟಕ್ಕೆ ಸ್ಪಂದಿಸಬೇಕು. ಮೆಟ್ರೋ, ರಸ್ತೆ ಕಾಮಗಾರಿಯನ್ನು ಅಲ್ಲಿಗೆ ನಿಲ್ಲಿಸಿ, ಅಲ್ಲಿನ ಹಣವನ್ನು ಬಡವರನ್ನು ಉಳಿಸಲು ವಿನಿಯೋಗ ಮಾಡಲಿ. ಇಂತಹ ಸಂಕಷ್ಟದ ಸಮಯದಲ್ಲಾದರು ಅಧಿಕಾರಿಗಳು, ರಾಜಕಾರಣಿಗಳ ಕಣ್ಣು ತೆರೆಯಲಿ.

-ರತ್ನಾ, ಪೌರಕಾರ್ಮಿಕ ಮಹಿಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News