ಖಾಸಗಿ ಅನುದಾನರಹಿತ ಶಿಕ್ಷಕರಿಗೆ ಯಾವುದೇ ಸೌಲಭ್ಯ ನೀಡದ ಸಿಎಂ, ಸಚಿವರು ರಾಜೀನಾಮೆ ನೀಡಲಿ: ಶಶಿಕುಮಾರ್

Update: 2021-05-19 15:35 GMT

ಬೆಂಗಳೂರು, ಮೇ 19: ಖಾಸಗಿ ಅನುದಾನರಹಿತ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗೆ ಯಾವುದೇ ಸೌಲಭ್ಯ ನೀಡದೆ ವಂಚಿತರನ್ನಾಗಿ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಶಶಿಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲವೊಂದು ಸಮುದಾಯಕ್ಕೆ ಆರ್ಥಿಕ ಸೌಲಭ್ಯ ಘೋಷಿಸಿದೆ. ಆದರೆ, ಇದರಲ್ಲಿ ಖಾಸಗಿ ಶಿಕ್ಷಕರನ್ನು ಪರಿಗಣಿಸದೆ ಮತ್ತೊಮ್ಮೆ ವಂಚನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ಶಿಕ್ಷಕರಿಗೆ ಆರ್ಥಿಕ ಸೌಲಭ್ಯ ಕಲ್ಪಿಸಿಯೆಂದು ರಾಜ್ಯ ಸರಕಾರಕ್ಕೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಾ ಬರಲಾಗಿದೆ. ಆದರೆ, ರಾಜ್ಯ ಸರಕಾರ ಹಾಗೂ ಶಿಕ್ಷಣ ಸಚಿವರು ಮಾತ್ರ ಕೇವಲ ಆಶ್ವಾಸನೆ ನೀಡುತ್ತಾ ಬಂದಿದ್ದರು. ಇವತ್ತು ಸರಕಾರ ಖಾಸಗಿ ಶಿಕ್ಷಕರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಬಹಿರಂಗವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯ ಸರಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ. ಬದಲಿಗೆ, ಆರ್‍ಟಿಇ ಬಾಕಿ ಇರುವ ಹಣವನ್ನಾದರು ಕೊಡಿಯೆಂದು ಬೇಡಿಕೆ ಸಲ್ಲಿಸುತ್ತಾ ಬಂದಿದ್ದೇವೆ. ಇಲ್ಲಿಯವರೆಗೆ ಸುಮಾರು 600 ಕೋಟಿ ರೂ.ಆರ್‍ಟಿಇ ಹಣ ಮರುಪಾವತಿಯಾಗಿಲ್ಲವೆಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಶಿಕ್ಷಕರು ಹಾಗೂ ಶಿಕ್ಷಕೇತರರ ಬದುಕಿಗೆ ಆಸರೆಯನ್ನು ಕಲ್ಪಿಸದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಯಾರಿಗೂ ನ್ಯಾಯವನ್ನು ಒದಗಿಸಲಾರರು. ಹೀಗಾಗಿ ಇವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡುವುದು ಸೂಕ್ತವೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News