ಗಂಗೆಯಲ್ಲಿ ತೇಲುತ್ತಿರುವ ಭಾರತ

Update: 2021-05-20 08:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

   ‘ಇಂದು ದೇಶ ಹಣವನ್ನು ನೀರಿನಂತೆ ಪೋಲು ಮಾಡುವ ಹಾಗೂ ಅದರ ಫಲಿತಾಂಶಗಳು ಕಾಣದಿರುವ ಯುಗದಿಂದ ಹೊರ ಬಂದಿದೆ. ಇಂದು ಹಣ ನೀರಿನಲ್ಲಿ ಹರಿದು ಹೋಗುತ್ತಿಲ್ಲ ಮತ್ತು ನೀರಿನಲ್ಲೇ ಉಳಿಯುತ್ತಲೂ ಇಲ್ಲ. ಗಂಗಾನದಿಗೆ ಸಂಬಂಧಿಸಿ ಖರ್ಚಾಗುತ್ತಿರುವ ಪ್ರತಿ ಪೈಸೆಯೂ ವಿನಿಯೋಗವಾಗುತ್ತಿದೆ’ಉತ್ತರಾಖಂಡದಲ್ಲಿ ನಮಾಮಿ ಗಂಗೆಗೆ ಸಂಬಂಧಿಸಿದ ಆರು ಬೃಹತ್ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಡಿದ ಮಾತುಗಳು ಇವು. ಅಧಿಕಾರಕ್ಕೇರಿದ ಬೆನ್ನಿಗೇ ಗಂಗಾ ನದಿಯ ಶುದ್ಧೀಕರಣವನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಕ್ಕೆ ರೂಪಕ ರೀತಿಯಲ್ಲಿ ಬಳಸಿಕೊಂಡಿತು. ಅದಕ್ಕಾಗಿಯೇ ಒಂದು ಖಾತೆಯನ್ನು ರಚಿಸಿ, ಅದರ ನೇತೃತ್ವವನ್ನು ಬಿಜೆಪಿಯ ಮುಖಂಡರಾಗಿರುವ ಉಮಾಭಾರತಿಯವರಿಗೆ ನೀಡಿತು. ಗಂಗೆಯ ಶುದ್ಧೀಕರಣವನ್ನು, ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಸಮೀಕರಿಸಿತು. ಇಂದು ಉಮಾಭಾರತಿ ರಾಜಕೀಯವಾಗಿ ಹೇಳ ಹೆಸರಿಲ್ಲದಂತಾಗಿದ್ದಾರೆ ಮಾತ್ರವಲ್ಲ, ನಮಾಮಿ ಗಂಗಾ ಯೋಜನೆಗೆ ಸುರಿದ ಹಣವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸುಮಾರು 20,000 ಕೋಟಿ ರೂ.ಗೂ ಅಧಿಕ ವೆಚ್ಚದ ಬೃಹತ್ ನಮಾಮಿ ಗಂಗಾ ಯೋಜನೆಯನ್ನು ಅಣಕಿಸುವಂತೆ, ಗಂಗಾನದಿಯಲ್ಲಿ ಸಾಲು ಸಾಲಾಗಿ ಮನುಷ್ಯರ ಹೆಣಗಳು ತೇಲಿ ಬರುತ್ತಿವೆ. ‘ಗಂಗೆಯಲ್ಲಿ ಉಗಿದರೆ ಜೈಲು, ತ್ಯಾಜ್ಯ ಸುರಿದರೆ ದಂಡ’ ಎಂಬಿತ್ಯಾದಿ ಕಾನೂನುಗಳು, ಗಂಗಾನದಿಯ ತಟದಲ್ಲಿ ಹೆಣಗಳ ರೂಪದಲ್ಲಿ ಕೊಳೆತು ನಾರುತ್ತಿವೆ. ಕೊರೋನ ಸೋಂಕಿತರ ಸಾವಿರಾರು ಹೆಣಗಳು ಇಂದು ಗಂಗಾ ನದಿಯಲ್ಲಿ ತೇಲುತ್ತಿರುವುದು, ಭವಿಷ್ಯದಲ್ಲಿ ಗಂಗಾ ನದಿಯ ಸ್ಥಿತಿಯನ್ನು ಇನ್ನಷ್ಟು ಚಿಂತಾಜನಕವಾಗಿಸಿದೆ. ಗಂಗೆಯನ್ನು ಭಾರತದ ಅಸ್ಮಿತೆಯಾಗಿ ಜಗತ್ತಿನ ಮುಂದಿಡುವುದಕ್ಕೆ ಸರಕಾರ ನಡೆಸಿದ ಪ್ರಯತ್ನಗಳು ಈ ಕೊರೋನ ಕಾಲಘಟ್ಟದಲ್ಲಿ ನಗೆಪಾಟಲಿಗೀಡಾಗಿದೆ. ಗಂಗೆಯಲ್ಲಿ ತೇಲುತ್ತಿರುವುದು ಭಾರತದ ಘನತೆ ಮತ್ತು ಸಾಂಸ್ಕೃತಿಕ ಹಿರಿಮೆಗಳಾಗಿವೆ. ಸರಕಾರ ಮುಚ್ಚಿಟ್ಟಷ್ಟೂ ಗಂಗಾ ನದಿಯ ತಟದಿಂದ ಹೆಣಗಳು ಕಣ್ಣು ಪಿಳುಕಿಸುತ್ತಿವೆ. ಗಂಗಾನದಿಯಲ್ಲಿ ಇಂದು ನಾವು ಏನನ್ನು ನೋಡುತ್ತಿದ್ದೇವೆಯೋ ಅದು ಕೇವಲ ಕೊರೋನ ನಿರ್ವಹಣೆಯ ವೈಫಲ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಈ ದೇಶದ ಆರ್ಥಿಕ, ಸಾಮಾಜಿಕ ದುರಂತಗಳಿಗೂ ಗಂಗಾ ನದಿ ಕನ್ನಡಿ ಹಿಡಿದಿದೆ.

 ಗಂಗಾನದಿಗೆ ಅತಿ ದೊಡ್ಡ ಶತ್ರುಗಳು ಅದರ ಭಕ್ತರೇ ಆಗಿದ್ದಾರೆ. ಗಂಗೆಯಲ್ಲಿ ಹೆಣಗಳು ತೇಲುತ್ತಿರುವುದು ಇಂದು ನಿನ್ನೆಯೇನೂ ಅಲ್ಲ. ನಮಾಮಿ ಗಂಗಾ ಯೋಜನೆಯ ಸಂದರ್ಭದಲ್ಲಿ ನದಿ ಶುದ್ಧೀಕರಣಗೊಳಿಸುತ್ತಿರುವಾಗ ಮನುಷ್ಯರ ನೂರಾರು ಅಸ್ಥಿ ಪಂಜರಗಳು, ತಲೆಬುರುಡೆಗಳು ಪತ್ತೆಯಾಗಿದ್ದವು. ಇವೆಲ್ಲವನ್ನು ಈ ನದಿಗೆ ಎಸೆದವರು ಪಾಕಿಸ್ತಾನಿಗಳೋ, ಚೀನಾದವರೋ ಅಲ್ಲ. ಗಂಗೆಯಲ್ಲಿ ಹೆಣವನ್ನು ತೇಲಿ ಬಿಟ್ಟರೆ, ಅದಕ್ಕೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆಯೇ ಇದಕ್ಕೆ ಕಾರಣ. ಗಂಗಾ ನದಿಯ ತಟದಲ್ಲಿ ಪ್ರತಿ ದಿನ ನೂರಾರು ಅಂತ್ಯ ಸಂಸ್ಕಾರಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಅರೆ ಬೆಂದ ಹೆಣಗಳನ್ನು ಗಂಗಾ ನದಿಗೆ ಎಸೆಯುತ್ತಾ ಬಂದಿದ್ದಾರೆ. ಕಾರ್ಖಾನೆಗಳ ತ್ಯಾಜ್ಯದ ಜೊತೆಗೆ ಈ ಭಕ್ತರ ತ್ಯಾಜ್ಯಗಳು ಹಲವು ದಶಕಗಳಿಂದ ಸ್ಪರ್ಧಿಸುತ್ತಾ ಬಂದಿವೆ. ಗಂಗಾ ನದಿಯ ನೀರು ಕುಡಿಯುವುದಕ್ಕೆ ಅಯೋಗ್ಯ ಎಂದು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಇವೆಲ್ಲದರ ನಡುವೆ, ಕೇಂದ್ರ ಸರಕಾರ ನಮಾಮಿ ಗಂಗಾ ಯೋಜನೆಯನ್ನು ಹಮ್ಮಿಕೊಂಡಾಗ, ರೈತರ ಜೀವದ್ರವ್ಯವಾಗಿರುವ, ಈ ದೇಶದ ನಾಗರಿಕತೆಯೊಂದಿಗೆ ಆಳವಾದ ಸಂಬಂಧವಿರುವ ಗಂಗಾನದಿ ಚೇತರಿಸಿಕೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ 20,000 ಕೋಟಿ ರೂಪಾಯಿಯ ಈ ಯೋಜನೆ ಸಂಪೂರ್ಣ ವಿಫಲಗೊಂಡಿರುವುದು ಈಗ ಬೆಳಕಿಗೆ ಬಂದಿದೆ. ಮಾಲಿನ್ಯದಿಂದ ಗಂಗೆಯನ್ನು ರಕ್ಷಿಸುವ ಸರಕಾರದ ಎಲ್ಲಾ ಕ್ರಮಗಳೂ ಕೇವಲ ಕಡತಕ್ಕೆ ಸೀಮಿತವಾಗಿದೆ. ಇದೀಗ ಗಂಗೆಯಲ್ಲಿ ತೇಲುತ್ತಿರುವ ಸಾಲು ಸಾಲು ಹೆಣಗಳು, ನಮಾಮಿ ಗಂಗಾ ಯೋಜನೆಯ ಭವಿಷ್ಯವನ್ನು ದೇಶಕ್ಕೆ ಸ್ಪಷ್ಟ ಪಡಿಸಿವೆ.

    ನದಿಗಳನ್ನಾಗಲಿ, ಮನುಷ್ಯರನ್ನಾಗಲಿ ನಾವು ದೇವರಾಗಿ ಗೌರವಿಸದೇ ಇದ್ದರೂ, ನದಿಗಳನ್ನು ನದಿಗಳಾಗಿಯೂ, ಮನುಷ್ಯರನ್ನು ಮನುಷ್ಯರಾಗಿಯೂ ಗುರುತಿಸಿ ಅವುಗಳ ಘನತೆ ಕಾಪಾಡುವುದನ್ನು ಈ ದೇಶ ಕಲಿಯಬೇಕಾಗಿದೆ. ಕೊರೋನ ವೈರಸ್ ಜೊತೆಗಿನ ಯುದ್ಧದಲ್ಲಿ ನಾವು ಗೆಲ್ಲುತ್ತೇವೆಯೋ, ಸೋಲುತ್ತೇವೆಯೋ ಆನಂತರದ ಮಾತು. ಆದರೆ, ಕೊರೋನ ಕಾಲದಲ್ಲಿ ನಮ್ಮ ಮನುಷ್ಯತ್ವಕ್ಕೆ ಎದುರಾದ ಸವಾಲನ್ನು ಗೆಲ್ಲುವುದರಲ್ಲಿ ನಾವು ಈಗಾಗಲೇ ಅರ್ಧ ವಿಫಲರಾಗಿದ್ದೇವೆ. ಆಸ್ಪತ್ರೆಗಳ ಅವ್ಯವಸ್ಥೆಗಳಿಂದಾಗಿ ಸಾಲು ಸಾಲು ಹೆಣಗಳು ಹೊರ ಬರುತ್ತಿವೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯ ಒಳ ಹೋದ ರೋಗಿಗಳು ಗುಣಮುಖರಾಗಿ ಹೊರ ಬಂದ ಉದಾಹರಣೆಗಳು ಅತ್ಯಲ್ಪ. ಕೊರೋನ ಯುದ್ಧಕಾಲದಲ್ಲಿ ಸರಕಾರ ಆಯುಧಗಳಿಗೆ ಆದೇಶ ನೀಡಿದೆ. ಪರಿಸ್ಥಿತಿ ಕೈಮೀರಿದ ಬಳಿಕ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಸರಕಾರ ಯೋಜನೆಗಳನ್ನು ರೂಪಿಸುತ್ತಿದೆ. ಕನಿಷ್ಠ ಮೃತಪಟ್ಟ ರೋಗಿಗಳ ಅಂತ್ಯ ಸಂಸ್ಕಾರಗಳನ್ನು ಘನತೆಯಿಂದ ನೆರವೇರಿಸುವಲ್ಲೂ ಸರಕಾರ ವಿಫಲವಾಗಿದೆ. ಇಂತಹ ಸಂದರ್ಭದಲ್ಲೇ ಗಂಗಾನದಿಯಲ್ಲಿ ಸಾವಿರಾರು ಹೆಣಗಳು ತೇಲುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾದವು. ಈ ಕೃತ್ಯದ ವಿರುದ್ಧ ಮಾನವ ಹಕ್ಕು ಆಯೋಗವೂ ಮಾತನಾಡಿದೆ. ಮೃತರ ಘನತೆ ಎತ್ತಿ ಹಿಡಿಯುವ ವಿಶೇಷ ಕಾನೂನು ರಚನೆಗಾಗಿ ಸರಕಾರವನ್ನು ಒತ್ತಾಯಿಸಿದೆ.

ಗಂಗಾ ನದಿಗೆ ಮೃತದೇಹಗಳನ್ನು ಎಸೆದವರು ಕೊರೋನಕ್ಕಿಂತಲೂ ಭೀಕರವಾದ ವೈರಸ್‌ನಿಂದ ನರಳುತ್ತಿದ್ದಾರೆ. ಕೊರೋನ ಪೀಡಿತರು ಆಕ್ಸಿಜನ್ ಕೊರತೆಯಿಂದ ನರಳಿದರೆ, ಇವರು ಮಾನವೀಯತೆಯ ಜೀವದ್ರವ್ಯದ ಕೊರತೆಯಿಂದ ನರಳುತ್ತಿದ್ದಾರೆ. ಅವರಿಗೆ ಕೊರೋನದಿಂದ ಸತ್ತ ಮನುಷ್ಯರ ಕುರಿತಂತೆ ಏನೂ ಅನ್ನಿಸುವುದಿಲ್ಲ. ಈ ಸಂದರ್ಭವನ್ನೂ ಅವರು ಕೋಮುದ್ವೇಷಕ್ಕೆ ಬಳಸಬಲ್ಲರು. ಸತ್ತವರನ್ನು ಧರ್ಮದ ಆಧಾರದಿಂದ ಗುರುತಿಸಬಲ್ಲರು. ನೆರವುಗಳಲ್ಲೂ ಜಾತಿ, ಧರ್ಮಗಳನ್ನು ಹುಡುಕಬಲ್ಲರು. ನೆರವು ನೀಡುವವರ ಹಣೆಗೂ ಧರ್ಮದ ಮುದ್ರೆಯೊತ್ತಿ ಅವರ ವಿರುದ್ಧ ಅಪಪ್ರಚಾರ ಮಾಡಬಲ್ಲರು. ಕೊರೋನ ಯೋಧರನ್ನು ನಿರ್ದಿಷ್ಟ ಧರ್ಮದ ಹೆಸರಲ್ಲಿ ಗುರುತಿಸಿ ಅವರ ವಿರುದ್ಧ ವದಂತಿಗಳನ್ನು ಹರಡಬಲ್ಲರು. ಮೃತದೇಹ ಕೊಳೆತು ನಾರುತ್ತಿದ್ದರೂ ಅದರ ಬಳಿ ಸಾಗದೆಯೇ, ದೂರದಲ್ಲೇ ನಿಂತು ಅಂತ್ಯಸಂಸ್ಕಾರಕ್ಕೆ ನೆರವಾಗುವವರ ವಿರುದ್ಧ ದ್ವೇಷಗಳನ್ನು ಕಾರಬಲ್ಲರು. ಲಸಿಕೆಯಿಂದ ಕೊರೋನ ವೈರಸ್‌ನ್ನು ಇಲ್ಲವಾಗಿಸಬಹುದು. ಆದರೆ ಈ ದ್ವೇಷ ಕಾರುವ, ಕ್ರೌರ್ಯಗಳನ್ನು ಮೆರೆಯುತ್ತಿರುವ ವೈರಸ್‌ಗಳಿಗೆ ಬಳಸಬಲ್ಲ ಲಸಿಕೆಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.

  ಕೊರೋನ ಕಾಲದಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ ಸಂಪೂರ್ಣ ವಿನಾಶದ ಕಡೆಗೆ ಸಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಷ್ಟೇ ಅಲ್ಲ, ಪ್ರಾಚೀನ ಕಾಲದಿಂದ ಈ ದೇಶವನ್ನು ಪೊರೆದುಕೊಂಡ ಬಂದ ಮಾನವೀಯ ಪರಂಪರೆ ಗಂಗಾನದಿಯಲ್ಲಿ ತೇಲುತ್ತಿರುವುದನ್ನು ಜಗತ್ತು ವಿಷಾದದಿಂದ ನೋಡುತ್ತಿದೆ. ಕೊಳೆತ ಗಂಗೆಯ ಮೂಲಕ ಪರಿಸರದಲ್ಲಿ ಕೊರೋನಕ್ಕಿಂತಲೂ ಭೀಕರ ಕಾಯಿಲೆಗಳು ಹರಡುವ ಬಗ್ಗೆ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಆ ಕಾಯಿಲೆ ಕೇವಲ ದೇಹಕ್ಕಷ್ಟೇ ಸಂಬಂಧಿಸಿದ್ದಲ್ಲ, ಮನಸ್ಸಿಗೂ ಸಂಬಂಧಿಸಿದ್ದು. ಗಂಗೆಯಲ್ಲಿ ತೇಲುತ್ತಿರುವ ಭಾರತವನ್ನು ಉಳಿಸಲು ನಮ್ಮ ಅಳಿದುಳಿದ ಮಾನವೀಯ ಮನಸ್ಸುಗಳನ್ನು ಸಮರ್ಥವಾಗಿ ಬಳಸಲು ಮುಂದಾಗಬೇಕಾಗಿದೆ. ಬೆರಳೆಣಿಕೆಯ ಸಂಖ್ಯೆಯಲ್ಲಾದರೂ, ಜಾತಿ ಧರ್ಮವನ್ನು ಮೀರಿ ಪರಸ್ಪರ ನೆರವಾಗುತ್ತಿರುವ ಜೀವಗಳೇ ಭಾರತದ ಕಟ್ಟ ಕಡೆಯ ಭರವಸೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News