ಅಸ್ಸಾಂ: ಪೋಕ್ಸೊ ಪ್ರಕರಣದ ಆರೋಪಿಯಾಗಿರುವ ಐಪಿಎಸ್‌ ಅಧಿಕಾರಿ ಜಿಲ್ಲಾ ಎಸ್ಪಿ ಆಗಿ ನೇಮಕ

Update: 2021-05-20 12:24 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಗೌರವ್ ಉಪಾಧ್ಯಾಯ ಎಂಬವರನ್ನು ಅಸ್ಸಾಂ ಜಿಲ್ಲೆಯೊಂದರ  ಎಸ್‍ಪಿ ಆಗಿ ನೇಮಕಗೊಳಿಸಲಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಲೈಂಗಿಕ  ದೌರ್ಜನ್ಯ ಪ್ರಕರಣ ಕುರಿತಾದ ಚಾರ್ಜ್ ಶೀಟ್ ಅನ್ನು ಮಾರ್ಚ್ 31, 2020ರಂದು  ಈ ನಿರ್ದಿಷ್ಟ ಅಧಿಕಾರಿ ವಿರುದ್ಧ  ಐಪಿಸಿಯ ಸೆಕ್ಷನ್ 354 ಹಾಗೂ 354ಅ ಅನ್ವಯ ಹಾಗೂ ಪೋಕ್ಸೋ ಅನ್ವಯ ದಾಖಲಿಸಲಾಗಿತ್ತು.

ಜನವರಿ 3, 2020ರಂದು ದಾಖಲಾದ ಈ ಪ್ರಕರಣವನ್ನು ಅಸ್ಸಾಂ ಸಿಐಡಿ ತನಿಖೆ ನಡೆಸಿ ನಂತರ ಅಸ್ಸಾಂನ ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಧೀಶರಿಗೆ ಸಲ್ಲಿಸಲಾಗಿತ್ತು.

ಘಟನೆ ಡಿಸೆಂಬರ್ 31, 2019ರಂದು  ಆರೋಪಿಯ ನಿವಾಸದಲ್ಲಿ ಆಯೋಜಿಸಲಾಗಿದ್ದ ಪಾರ್ಟಿ ವೇಳೆ ನಡೆದಿತ್ತೆನ್ನಲಾಗಿದೆ. ಅಸ್ಸಾಂನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ  ಗಂಭೀರ ಲೈಂಗಿಕ ದೌರ್ಜನ್ಯ ನಡೆಸಿರುವುದಕ್ಕೆ  ಸಾಕಷ್ಟು ಪುರಾವೆಗಳಿರುವುದಾಗಿ ಚಾರ್ಜ್ ಶೀಟ್‍ನಲ್ಲಿ ಬರೆಯಲಾಗಿತ್ತು.

ಉತ್ತರ ಪ್ರದೇಶದ 2012 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಉಪಾಧ್ಯಾಯ ಅವರು ಕರ್ಬಿ ಅಂಗ್ಲೊಂಗ್ ಎಂಬಲ್ಲಿನ ಎಸ್‍ಪಿ ಆಗಿದ್ದ ವೇಳೆ  ಪ್ರಕರಣ ನಡೆದಿತ್ತು. ಅಸ್ಸಾಂನಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸರ ಸಾಮೂಹಿಕ ವರ್ಗಾವರ್ಗಿ ವೇಳೆ ಉಪಾಧ್ಯಾಯ ಅವರನ್ನು ಕಳೆದ ವಾರ ಚಿರಾಂಗ್ ಎಂಬಲ್ಲಿಗೆ ವರ್ಗಾಯಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ, "ಪ್ರಕರಣ ನ್ಯಾಯಾಲಯದ ಮುಂದಿದೆ. ನ್ಯಾಯಾಲಯದ ಆದೇಶ ಬಂದರೆ  ಅವರನ್ನು (ಆರೋಪಿ) ಬಂಧಿಸಲಾಗುವುದು.  ನ್ಯಾಯಾಲಯ ತನ್ನ ತೀರ್ಪು ನೀಡುವ ತನಕ ಅವರ ಸೇವೆಯನ್ನು ನಾವು ಬಳಸಬೇಕಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News