ಚಾರ್ಟರ್ಡ್ ವಿಮಾನದಲ್ಲಿ ನಡೆದ ಮದುವೆ : ಡಿಜಿಸಿಎಯಿಂದ ತನಿಖೆ, ಸಿಬ್ಬಂದಿ ವಿರುದ್ಧ ಕ್ರಮ

Update: 2021-05-24 12:44 GMT

ಮಧುರೈ: ಚಾರ್ಟರ್ಡ್ ವಿಮಾನವೊಂದರಲ್ಲಿ  ನಡೆದ ವಿನೂತನ ಮದುವೆ ಸಮಾರಂಭ ಸಾಮಾಜಿಕ ಜಾಲತಾಣಿಗರ ಪ್ರಶಂಸೆ ಗಿಟ್ಟಿಸಿದೆಯಾದರೂ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಎದುರಿಸುತ್ತಿದೆ. ವಿಮಾನ ಆಗಸದಲ್ಲಿ ಹಾರುತ್ತಿರುವಾಗ ನಡೆದ ಈ ಮದುವೆ ಕುರಿತು ವಿಮಾನಯಾನ ಮಹಾನಿರ್ದೇಶನಾಲಯ ವರದಿ ಕೇಳಿದೆಯಲ್ಲದೆ ಈ ಸ್ಪೈಸ್‍ಜೆಟ್ ವಿಮಾನದ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. 

ಸತತ ಮನವಿಗಳ ಹೊರತಾಗಿಯೂ ವಧು-ವರ ಹಾಗೂ ಅವರ ಕುಟುಂಬಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಸ್ಪೈಸ್ ಜೆಟ್ ಸಂಸ್ಥೆ ಹೇಳಿರುವುದರಿಂದ ಅವರೆಲ್ಲರೂ ಕ್ರಮ ಎದುರಿಸುವ ಸಾಧ್ಯತೆಯಿದೆ.

ಮಧುರೈ ಮೂಲದ ಯುವಕ-ಯುವತಿ ತಮ್ಮ ವಿವಾಹಕ್ಕಾಗಿ ಮಧುರೈಯಿಂದ ಬೆಂಗಳೂರಿಗೆ ಚಾರ್ಟರ್ಡ್ ವಿಮಾನ ಕಾದಿರಿಸಿದ್ದರು. ಅವರ ಕುಟುಂಬವರ್ಗ, ಸಂಬಂಧಿಗಳು ಹಾಗೂ ಹಲವು ಅತಿಥಿಗಳು ಈ ಬೋಯಿಂಗ್ 737 ವಿಮಾನದಲ್ಲಿದ್ದರೆಂಬುದು ವೈರಲ್ ವೀಡಿಯೋ ಹಾಗೂ ಫೋಟೋಗಳಿಂದ ತಿಳಿಯುತ್ತದೆ.

ಒಂದು ವೈರಲ್ ವೀಡಿಯೋದಲ್ಲಿ ವರ ವಧುವಿಗೆ ಮಂಗಲಸೂತ್ರ ಕಟ್ಟುತ್ತಿರುವುದು ಕಾಣಿಸುತ್ತದೆ ಹಾಗೂ ಅಲ್ಲಿರುವ ಅತಿಥಿಗಳೂ ಕಾಣಿಸುತ್ತಾರೆ. ವಿಮಾನದಲ್ಲಿ ತಮ್ಮ ಸೀಟುಗಳಲ್ಲಿ ಆಸೀನರಾಗಿದ್ದ ಹಾಗೂ ನಿಂತುಕೊಂಡಿದ್ದ ಹೆಚ್ಚಿನ ಅತಿಥಿಗಳು ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರವನ್ನೂ ಯಾರೂ ಕಾಪಾಡಿರಲಿಲ್ಲ.

ಆಗಸದಲ್ಲಿ ನಡೆದ ಈ ವಿವಾಹ ಕುರಿತು ಡಿಜಿಸಿಎ ತನಿಖೆ ಆರಂಭಿಸಿದೆಯಲ್ಲದೆ ಸ್ಪೈಸ್ ಜೆಟ್ ಸಂಸ್ಥೆ ಹಾಗೂ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ವರದಿ ಕೇಳಿದೆ. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸುವಂತೆಯೂ ಸ್ಪೈಸ್ ಜೆಟ್ ಸಂಸ್ಥೆಗೆ ಸೂಚಿಸಲಾಗಿದೆ.

ವಿವಾಹ ನಂತರದ ಜಾಯ್ ರೈಡ್‍ಗಾಗಿ ಟ್ರಾವೆಲ್ ಏಜಂಟ್ ಒಬ್ಬರು ಮೇ 23ರಂದು ವಿಮಾನ ಬುಕ್ ಮಾಡಿದ್ದರು ಎಂದು ಸ್ಪೈಸ್ ಜೆಟ್ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News