18-44 ವಯೋಮಾನದವರಿಗೆ ಲಸಿಕೆ ಪಡೆಯಲು ಸ್ಥಳದಲ್ಲೇ ನೋಂದಣಿಗೆ ವ್ಯವಸ್ಥೆ

Update: 2021-05-24 18:20 GMT

ಹೊಸದಿಲ್ಲಿ, ಮೇ 24: ಇಂಟರ್ನೆಟ್ ಅಥವಾ ಸ್ಮಾರ್ಟ್ಫೋನ್ ಸೌಲಭ್ಯವಿಲ್ಲದ 18ರಿಂದ -44 ವರ್ಷದ ವಯೋಮಾನದವರು ಕೊರೋನ ಸೋಂಕಿನ ವಿರುದ್ಧ ಲಸಿಕೆ ಪಡೆಯಲು ಕೊವಿನ್ ಡಿಜಿಟಲ್ ವೇದಿಕೆಯಲ್ಲಿ ತಮ್ಮ ಹೆಸರನ್ನು ಸ್ಥಳದಲ್ಲೇ ನೋಂದಾಯಿಸಬಹುದು ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.

ನಿರ್ಧಿಷ್ಟ ದಿನದಂದು ಲಸಿಕೆ ಪಡೆಯಲು ಹೆಸರು ನೋಂದಾಯಿಸಿದ್ದರೂ ಲಸಿಕೆ ಪಡೆಯಲು ಬಾರದ ಪ್ರಕರಣಗಳಲ್ಲಿ ಲಸಿಕೆ ವ್ಯರ್ಥವಾಗುವುದನ್ನು ತಡೆಯಲು, ಸ್ಥಳದಲ್ಲೇ ನೋಂದಾಯಿಸಿಕೊಳ್ಳುವ ಕೆಲವು ಫಲಾನುಭವಿಗಳಿಗೆ ಆ ದಿನವೇ ಲಸಿಕೆ ಹಾಕಬಹುದು ಎಂದು ಕೇಂದ್ರ ಸರಕಾರ ಸಲಹೆ ನೀಡಿದೆ.

ಆದರೆ ಈ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂತಿಮ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಸ್ಥಳದಲ್ಲೇ ನೋಂದಣಿಗೆ ಅವಕಾಶ ನೀಡಲು ನಿರ್ಧರಿಸಿದರೆ, ಇದಕ್ಕೆ ಸರಕಾರಿ ಕೇಂದ್ರಗಳಲ್ಲಿ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ತಿಳಿಸಿದೆ.

ಇದೇ ವ್ಯವಸ್ಥೆ ಈಗ 45 ವರ್ಷಕ್ಕಿಂತ ಹೆಚ್ಚಿನ ವರ್ಗದವರಿಗೆ ಚಾಲ್ತಿಯಲ್ಲಿದೆ. 18-45 ವಯೋಮಾನದವರಿಗೂ ಈ ವ್ಯವಸ್ಥೆ ಜಾರಿಗೊಳಿಸಿದರೆ ಜನದಟ್ಟಣೆ ತಡೆಯಬಹುದು ಎಂದು ಕೇಂದ್ರ ಸರಕಾರ ಸಲಹೆ ನೀಡಿದೆ. ಕೇಂದ್ರದ ಈ ಘೋಷಣೆಗೆ ವಿಪಕ್ಷಗಳು ವ್ಯಂಗ್ಯವಾಗಿ ಪ್ರತಿಕ್ರಿಯಿಸಿವೆ. `ಲಸಿಕೆ ಎಲ್ಲಿದೆ? ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. 18-44 ವರ್ಷದವರಿಗೆ ಲಸಿಕೆ ಪಡೆಯಲು ಹೆಸರು ನೋಂದಾಯಿಸುವ ನಿಯಮ ದೊಡ್ಡ ತಪ್ಪು ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News