ಮೇ 28ರಿಂದ ಅಫ್ಘಾನ್ ರಾಯಭಾರ ಕಚೇರಿ ಮುಚ್ಚುಗಡೆ: ಆಸ್ಟ್ರೇಲಿಯ

Update: 2021-05-25 14:59 GMT

ಕ್ಯಾನ್ಬೆರ (ಆಸ್ಟ್ರೇಲಿಯ) ಮೇ 25: ಅಫ್ಘಾನಿಸ್ತಾನದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಈ ವಾರ ಮುಚ್ಚುವುದಾಗಿ ಆಸ್ಟ್ರೇಲಿಯ ಮಂಗಳವಾರ ಪ್ರಕಟಿಸಿದೆ. ಅಫ್ಘಾನಿಸ್ತಾನದಲ್ಲಿರುವ ವಿದೇಶಿ ಸೈನಿಕರು ತಮ್ಮ ದೇಶಗಳಿಗೆ ಮರಳುತ್ತಿದ್ದು ಅಲ್ಲಿನ ಅನಿಶ್ಚಿತ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅದು ಹೇಳಿದೆ.

ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮೇ 28ರಂದು ಮುಚ್ಚುವುದಾಗಿ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಹೇಳಿದರು. ಅಫ್ಘಾನಿಸ್ತಾನದಿಂದ ವಿದೇಶಿ ಸೇನೆ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ವಿವರಣೆಯನ್ನು ಅವರು ನೀಡಿದ್ದಾರೆ.

ಅಮೆರಿಕದ ಮೇಲೆ ಅಲ್ ಕೈದಾ ನಡೆಸಿದ ದಾಳಿಯ 20ನೇ ವಾರ್ಷಿಕ ದಿನವಾದ ಸೆಪ್ಟಂಬರ್ 11ರ ವೇಳೆಗೆ ಅಮೆರಿಕದ ಎಲ್ಲ ಸೈನಿಕರು ಅಫ್ಘಾನಿಸ್ತಾನದಿಂದ ವಾಪಸಾಗಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. 2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದ ವಿರುದ್ಧ ಅಮೆರಿಕ ಯುದ್ಧ ಆರಂಭಿಸಿತ್ತು. ಈ ಸುದೀರ್ಘಾವಧಿ ಯುದ್ಧವು ಈ ವರ್ಷದ ಸೆಪ್ಟಂಬರ್ 11ರಂದು ಕೊನೆಗೊಳ್ಳಲಿದೆ. ಆದರೆ, ಈ ನಡುವೆ, ಉಗ್ರಗಾಮಿ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯವನ್ನು ಗಳಿಸುತ್ತಿದ್ದು ಅಫ್ಘಾನ್ ಮತ್ತು ಅಮೆರಿಕ ಸೈನಿಕರ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದೆ.

ಅಂತರ್ರಾಷ್ಟ್ರೀಯ ಪಡೆಗಳು ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ಬಳಿಕ ಮರುಸಂಘಟಿತ ತಾಲಿಬಾನ್ ಪ್ರಾಬಲ್ಯದ ದೇಶದಲ್ಲಿ ಹೇಗೆ ಇರುವುದು ಎಂಬ ಚಿಂತೆ ಅಂತರ್ರಾಷ್ಟೀಯ ಸಮುದಾಯವನ್ನು ಕಾಡುತ್ತಿದೆ. ಈ ನಡುವೆ, ಆಸ್ಟ್ರೇಲಿಯ ಒಂದು ಹೆಜ್ಜೆ ಮುಂದೆ ಹೋಗಿ ಈ ವಾರ ತನ್ನ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News