ಕೊರೋನ ಔಷಧ ಸಂಗ್ರಹ: ಗೌತಮ್ ಗಂಭೀರ್, ಇತರರ ವಿರುದ್ಧ ತನಿಖೆಗೆ ಔಷಧ ನಿಯಂತ್ರಕರಿಗೆ ದಿಲ್ಲಿ ಹೈಕೋರ್ಟ್ ಆದೇಶ

Update: 2021-05-25 18:37 GMT

ಕೋಲ್ಕತಾ, ಮೇ 25: ಬಿಜೆಪಿ ಸಂಸದ ಗೌತಮ್ ಗಂಭೀರ್, ಆಪ್ನ ಶಾಸಕರಾದ ಪ್ರೀತಿ ತೋಮರ್ ಹಾಗೂ ಪ್ರವೀಣ್ ಕುಮಾರ್ ವೈದ್ಯಕೀಯ ಪೂರೈಕೆಗಳನ್ನು ಕಾನೂನು ಬಾಹಿರವಾಗಿ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಹೊಸದಿಲ್ಲಿ ಸರಕಾರದ ಔಷಧ ನಿಯಂತ್ರಕರಿಗೆ ಸೋಮವಾರ ನಿರ್ದೇಶಿಸಿದೆ. ‌

ಆರೋಗ್ಯ ಕ್ಷೇತ್ರದ ಬಿಕ್ಕಟ್ಟಿನ ನಡುವೆ ಕೊರೋನ ಔಷಧವನ್ನು ಸಂಗ್ರಹಿಸುವುದರಲ್ಲಿ ತೊಡಗಿರುವ ಹಾಗೂ ಕಾನೂನು ಬಾಹಿರವಾಗಿ ವಿತರಿಸುತ್ತಿರುವ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಹಾಗೂ ಜಸ್ಮೀತ್ ಸಿಂಗ್ ಅವರು ವಿಚಾರಣೆ ನಡೆಸಿದರು. ಕೋವಿಡ್ ಚಿಕಿತ್ಸೆಗೆ ಬಳಸುವ ಫೆಬಿಫ್ಲೂವನ್ನು ಗೌತಮ್ ಗಂಭೀರ್ ಅವರು ಸಂಗ್ರಹಿಸಿದ್ದಾರೆ ಹಾಗೂ ವಿತರಿಸುತ್ತಿದ್ದಾರೆ. ಆಮ್ಲಜನಕದ ಸಿಲಿಂಡರ್ಗಳನ್ನು ತೋಮರ್ ಹಾಗೂ ಕುಮಾರ್ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ದೂರುದಾರರನ್ನು ಪ್ರತಿನಿಧಿಸಿದ ನ್ಯಾಯವಾದಿ ವಿರಾಗ್ ಗುಪ್ತಾ, ವೈದ್ಯಕೀಯ ಶಿಬಿರ ಆರಂಭಿಸದೆ ಔಷಧ ವಿತರಿಸುತ್ತಿರುವ ಗಂಭೀರ್ ಅವರ ನಡೆ ಅವರು, ಔಷಧ ತಜ್ಞರು ಹಾಗೂ ವೈದ್ಯರ ನಡುವೆ ಜಾಲ ಇದೆ ಎಂಬುದನ್ನು ತೋರಿಸಿದೆ ಎಂದು ವಾದಿಸಿದರು. ಗೌತಮ್ ಗಂಭೀರ್ ಅವರು ಔಷಧವನ್ನು ವಿತರಿಸುವಾಗ ಕೊರತೆ ಇತ್ತು ಎಂದು ಉಚ್ಚ ನ್ಯಾಯಾಲಯ ಗಮನಿಸಿದೆ. ಬಿಜೆಪಿ ನಾಯಕನ ಉದ್ದೇಶವನ್ನು ನಾವು ಅನುಮಾನಿಸುತ್ತಿಲ್ಲ. ಆದರೆ, ಅವರ ನಡೆ ಕೆಡುಕಂಟು ಮಾಡಿದೆ. ಇದು ಖಂಡಿತವಾಗಿ ಸರಿಯಾದ ದಾರಿಯಲ್ಲ. ಒಳ್ಳೆಯ ಉದ್ದೇಶ ಹೊಂದಿದ್ದರೂ ಅಕ್ರಮವಾಗಿದೆ. ನಮ್ಮ ಸಮಾಜದಲ್ಲಿ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟನೆ ನೀಡಿದ್ದಾರೆ.

ಏಕೈಕ ಶಿಫಾರಸಿನ ಆಧಾರದಲ್ಲಿ ಹೇಗೆ ಇಷ್ಟೊಂದು ದೊಡ್ಡ ಪ್ರಮಾಣದ ಔಷಧವನ್ನು ಖರೀದಿಸಲಾಯಿತು ಹಾಗೂ ಅನಂತರ ಹಲವು ಜನರಿಗೆ ವಿತರಿಸಲಾಯಿತು ಎಂಬ ಬಗ್ಗೆ ವಿಸ್ತೃತ ಯಥಾಸ್ಥಿತಿ ವರದಿಯನ್ನು ಉಚ್ಚ ನ್ಯಾಯಾಲಯ ಔಷಧ ನಿಯಂತ್ರಕರಿಂದ ಕೋರಿದೆ. ಈ ಹಿಂದೆ ಮೇಯಲ್ಲಿ ಪೊಲೀಸರು ಗೌತಮ್ ಗಂಭೀರ್, ಆಪ್ ಶಾಸಕ ಹಾಗೂ ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅನ್ನು ವಿಚಾರಣೆಗೆ ಒಳಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News