ರಾಮ್‌ದೇವ್‌ಗೆ 1,000 ಕೋಟಿ ರೂ.ಗಳ ಮಾನಹಾನಿ ನೋಟಿಸ್ ಕಳುಹಿಸಿದ ಐಎಂಎ ಉತ್ತರಾಖಂಡ

Update: 2021-05-26 07:19 GMT
ರಾಮ್‌ದೇವ್‌ (File Photo: PTI)

ಹೊಸದಿಲ್ಲಿ: ಅಲೋಪತಿ ಔಷಧದ ಕುರಿತು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರಾಖಂಡ ವಿಭಾಗದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯೋಗ ಗುರು ರಾಮ್‌ದೇವ್‌ ಅವರಿಗೆ 1,000 ಕೋಟಿ ರೂ. ಮಾನಹಾನಿ ನೋಟಿಸ್ ನೀಡಿದೆ.

ಅಲೋಪತಿ ವೈದ್ಯರ ಬಗ್ಗೆ ರಾಮ್‌ದೇವ್‌ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ರಾಮ್‌ದೇವ್‌ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸೋಮವಾರ, ಉತ್ತರಾಖಂಡ ವಿಭಾಗದ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಅಜಯ್ ಖನ್ನಾ ಅವರು ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದರು. ರಾಮ್ ದೇವ್ ಅವರ ಹೇಳಿಕೆಯ ವಿರುದ್ಧ ಐಎಂಎ ವೈದ್ಯರಲ್ಲಿ ತೀವ್ರ ಅಸಮಾಧಾನವಿದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ತಾನು ನೀಡಿದ ಹೇಳಿಕೆಗೆ ಪ್ರತಿಯಾಗಿ ವೀಡಿಯೊವನ್ನು ಪೋಸ್ಟ್ ಮಾಡದಿದ್ದರೆ ಹಾಗೂ ಮುಂದಿನ 15 ದಿನಗಳಲ್ಲಿ ಲಿಖಿತ ಕ್ಷಮೆಯಾಚನೆಯನ್ನು ನೀಡದಿದ್ದರೆ, ರಾಮ್‌ದೇವ್‌ ಅವರಿಂದ 1,000 ಕೋಟಿ ರೂ.ಮಾನನಷ್ಟ ಪರಿಹಾರಕ್ಕಾಗಿ ಬೇಡಿಕೆ ಇಡಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಐಎಂಎ ಪರವಾಗಿ ರಾಮ್‌ದೇವ್‌ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಡಾ.ಅಜಯ್ ಖನ್ನಾ ಹೇಳಿದ್ದಾರೆ.

ಆರೋಗ್ಯ ಸಚಿವ ಹರ್ಷ ವರ್ಧನ್ ಅವರ ಪತ್ರದ ನಂತರ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡ ನಂತರ ರಾಮ್‌ದೇವ್‌ ಸೋಮವಾರ ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News