ನೂತನ ನಿಯಮಾವಳಿಗಳ ಪ್ರಕಾರ ಸರಕಾರಕ್ಕೆ ನಿಮ್ಮ ವಾಟ್ಸಪ್‌ ಚಾಟ್‌ ಗಳನ್ನು ನೋಡಲು ಸಾಧ್ಯವೇ?

Update: 2021-05-27 15:16 GMT

ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಹಲವು ರಾಜ್ಯಗಳಲ್ಲಿ ಲಾಕ್‌ ಡೌನ್‌ ಹೇರಲಾಗಿದ್ದು, ಹಲವಾರು ಮಂದಿ ತಮ್ಮ ಮನೆಯಲ್ಲೇ ಇದ್ದಾರೆ. ಈ ಕಾರಣದಿಂದಾಗಿ ಈಗ ಹಲವಾರು ನಕಲಿ ಸಂದೇಶಗಳು ವಾಟ್ಸಪ್‌ ನಲ್ಲಿ ವೈರಲ್‌ ಆಗುತ್ತಿದ್ದು, ಹೊಸ ನಿಯಮಾವಳಿಯ ಪ್ರಕಾರ ಸರಕಾರಕ್ಕೆ ನಿಮ್ಮ ಚಾಟ್‌ ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂಬ ಸಂದೇಶವೂ ಹರಿದಾಡುತ್ತಿದೆ. ಆದರೆ ಇವುಗಳೆಲ್ಲ ನಕಲಿ ಸಂದೇಶಗಳು ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಪಟ್ಟಂತೆ ಹಲವಾರು ನಕಲಿ ಸಂದೇಶಗಳು ಕೆಲ ದಿನಗಳಿಂದ ಹರಿದಾಡುತ್ತಿದೆ. "ನೀವು ಸಂದೇಶ ಕಳುಹಿಸುವಾಗ ಒಂದು ಟಿಕ್‌ ಬಿದ್ದರೆ ಮೆಸೇಜ್‌ ಕಳುಹಿಸಲಾಗಿದೆ ಎಂದರ್ಥ, ಎರಡು ಟಿಕ್‌ ಬಿದ್ದರೆ ಮೆಸೇಜ್‌ ತಲುಪಿದೆ ಎಂದರ್ಥ, ಮೂರು ಟಿಕ್‌ಗಳು ನೀಲಿ ಬಣ್ಣದಲ್ಲಿ ಕಂಡರೆ ಸರಕಾರವು ನಿಮ್ಮ ಮೆಸೇಜ್‌ ಅನ್ನು ಗಮನಿಸುತ್ತಿದೆ ಎಂದರ್ಥ. ಎರಡು ನೀಲಿ ಬಣ್ಣ ಮತ್ತು ಒಂದು ಟಿಕ್‌ ಕೆಂಪು ಬಣ್ಣದಲ್ಲಿದ್ದರೆ ಸರಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರ್ಥ" ಎಂಬ ಸಂದೇಶ ಹರಿದಾಡುತ್ತಿದೆ.

ಈ ಸಂದೇಶವು ಕಳೆದ ಎರಡು ವರ್ಷಗಳಿಂದಲೇ ಹರಿದಾಡಲು ಪ್ರಾರಂಭವಾಗಿತ್ತು. ಇದೀಗ ಲಾಕ್‌ ಡೌನ್‌ ಅವಧಿಯಲ್ಲಿ ಮತ್ತೆ ವೈರಲ್‌ ಆಗಲು ಪ್ರಾರಂಭವಾಗಿದೆ. "ಸರಕಾರವು ಇಂತಹಾ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಎಲ್ಲರ ವಾಟ್ಸಪ್‌ ಮೆಸೇಜ್‌ ಗಳನ್ನು ಸರಕಾರ ಗಮನಿಸುತ್ತಿಲ್ಲ. ಇದು ವದಂತಿ ಮಾತ್ರವಾಗಿದೆ" ಎಂದು 2020ರಲ್ಲಿ ಪಿಐಬಿ ಫ್ಯಾಕ್ಟ್‌ ಚೆಕ್‌ ತಿಳಿಸಿತ್ತು. ಮತ್ತೆ ಇಂತಹ ನಕಲಿ ಮೆಸೇಜ್‌ ಗಳು ಹರಿದಾಡಲು ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಮುಖ ಮಾಧ್ಯಮಗಳು ಈ ಕುರಿತಾದಂತೆ ವರದಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News