ಆದಿತ್ಯನಾಥ್‌ ಸರಕಾರಿ ಆಸ್ಪತ್ರೆ ಭೇಟಿ ವೇಳೆ ಇದ್ದ ವೈದ್ಯರು, ನರ್ಸ್‌ ಗಳು, ಲಸಿಕಾ ಅಭಿಯಾನ ಯಾವುದೂ ಈಗಿಲ್ಲ !

Update: 2021-05-28 11:05 GMT

ಲಕ್ನೋ: ದೇಶದಾದ್ಯಂತ ಕೋವಿಡ್‌ ಪ್ರಕರಣಗಳ ಸಂಖ್ಯೆಯ ವರದಿಯಲ್ಲಿ ಇಳಿಕೆ ಕಂಡು ಬರುತ್ತಿದ್ದರೂ, ಸೋಂಕಿನ ತೀವ್ರತೆ ಹಲವು ರಾಜ್ಯಗಳಲ್ಲಿ ಹಾಗೆಯೇ ಇದೆ. ಉತ್ತರಪ್ರದೇಶದಲ್ಲಿ ದೈನಂದಿನ ಹಲವಾರು ಮಂದಿ ಮೃತಪಡುತ್ತಿದ್ದಾರೆ. ಈ ನಡುವೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ರ ಸರಕಾರಿ ಆಸ್ಪತ್ರೆ ಭೇಟಿ ವೇಳೆಯ ಅಸಲಿಯತ್ತನ್ನು indiatoday.in ವಾಹಿನಿಯು ಬಯಲಿಗೆಳೆದಿದೆ. 

ಮೇ೨೧ರಂದು ಆದಿತ್ಯನಾಥ್‌ ಉತ್ತರಪ್ರದೇಶದ ಲಕ್ನೋ ಸಮೀಪದ ಕತ್ವಾರ ಎಂಬ ಪ್ರದೇಶದಲ್ಲಿರುವ ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ಆ ಸಂದರ್ಭ ಅಲ್ಲಿ ಹಲವಾರು ವೈದ್ಯರು ಹಾಜರಿದ್ದರು. ಅಲ್ಲಿ ರೋಗಿಗಳಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗುತ್ತಿತ್ತು. ಪಾಳಿಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯರೂ ಇದ್ದರು. ವ್ಯವಸ್ಥೆಗಳೆಲ್ಲಾ ಅಚ್ಚುಕಟ್ಟಾಗಿತ್ತು. ರೋಗಿಗಳನ್ನು ವೈದ್ಯರು ಪರಿಶೀಲಿಸುತ್ತಿದ್ದರು. ಮಾಧ್ಯಮಗಳಲ್ಲೂ ಈ ಕುರಿತಾದಂತೆ ವರದಿಯಾಗಿತ್ತು.

ಆದರೆ ಇದಾದ ನಾಲ್ಕು ದಿನಗಳ ನಂತರ ಕತ್ವಾರದಲ್ಲಿರುವ ಅದೇ ಆಸ್ಪತ್ರೆಗೆ indiatoday.in ನ ಪತ್ರಕರ್ತರು ತೆರಳಿದಾಗ ಅಲ್ಲಿ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು ಎಂದು ತಿಳಿದು ಬಂದಿದೆ. ಅಲ್ಲಿ ೮ ಕರ್ತವ್ಯನಿರತ ವೈದ್ಯರಿರಬೇಕಿತ್ತು. ಆದರೆ ಯಾವುದೇ ವೈದ್ಯರಿರಲಿಲ್ಲ. ನರ್ಸಗಳಿರಬೇಕಿತ್ತು. ನರ್ಸ್‌ ಗಳೂ ಇರಲಿಲ್ಲ. ಜೊತೆಗೆ ಯಾವುದೇ ವ್ಯವಸ್ಥೆಗಳಿಲ್ಲದೇ ಮಾಧ್ಯಮದವರಿಗೆ ಕಂಡದ್ದು ಕತ್ತಲು ಮಾತ್ರ ಎನ್ನಲಾಗಿದೆ.

ಆದಿತ್ಯನಾಥ್‌ ಆಗಮನದ ವೇಳೆ ಅಲ್ಲಿನ ಗ್ರಾಮಸ್ಥರೊಂದಿಗೂ ಅವರು ಮಾತನಾಡಿದ್ದರು. ಅದೇ ಗ್ರಾಮಸ್ಥರೊಂದಿಗೆ ಮಾಧ್ಯಮದವರು ಮಾತನಾಡಿಸಿದಾಗ, "ಇಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ವೈದ್ಯರೂ ಇಲ್ಲಿಗೆ ಸರಿಯಾಗಿ ಬರುವುದಿಲ್ಲ. ಮುಖ್ಯಮಂತ್ರಿ ಭೇಟಿ ನೀಡುವ ಮುಂಚಿನ ರಾತ್ರಿ ಇಲ್ಲಿ ಎಲ್ಲ ವ್ಯವಸ್ಥೆಗಳನ್ನು ನಡೆಸಲಾಯಿತು. ಮುಖ್ಯಮಂತ್ರಿ ಇಲ್ಲಿಂದ ತೆರಳಿದ ತಕ್ಷಣವೇ ವೈದ್ಯರೂ ಸೇರಿದಂತೆ ಎಲ್ಲ ಅಧಿಕಾರಿಗಳು ಆಸ್ಪತ್ರೆಯಿಂದ ತೆರಳಿದ್ದಾರೆ. ಅವತ್ತಿನಿಂದ ಇದು ಹೀಗೆಯೇ ಇದೆ" ಎಂದು ಸ್ಥಳೀಯರು ಹೇಳಿದ್ದಾಗಿ ವರದಿ ತಿಳಿಸಿದೆ.

ಈ ವೀಡಿಯೋವನ್ನು ಈ ಲಿಂಕ್‌ ಮುಖಾಂತರ ವೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News