ಸ್ಟಾನ್ ಸ್ವಾಮಿಯವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಆದೇಶ

Update: 2021-05-28 18:49 GMT

ಮುಂಬೈ, ಮೇ 28: ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ 84 ವರ್ಷದ ಬುಡಕಟ್ಟು ಹೋರಾಟಗಾರ ಸ್ಟ್ಯಾನ್ ಸ್ವಾಮಿಯನ್ನು ಮುಂಬೈಯ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿರುವುದಾಗಿ `ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ. 

ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸ್ವಾಮಿಯ ಆರೋಗ್ಯ ಇತ್ತೀಚಿನ ದಿನಗಳಲ್ಲಿ ತೀವ್ರ ಹದಗೆಟ್ಟಿರುವುದರಿಂದ ಅವರಿಗೆ ಸೂಕ್ತ ವೈದ್ಯಕೀಯ ನೆರವು ಒದಗಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ತನಗೆ ಮಧ್ಯಂತರ ಜಾಮೀನು ನೀಡಬೇಕೆಂದು ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸ್ವಾಮಿಯನ್ನು 15 ದಿನದ ಮಟ್ಟಿಗೆ ಮುಂಬೈಯ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಬೇಕು. ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯ ಹಗಲಿನಲ್ಲೇ ನಡೆದರೆ ಉತ್ತಮ ಎಂದು ಸೂಚಿಸಿದೆ.

ಈ ಹಿಂದೆ ಸ್ವಾಮಿಗೆ ನಡೆಸಿದ್ದ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಜೆಜೆ ಆಸ್ಪತ್ರೆ ಮೇ 21ರಂದು ಹೈಕೋರ್ಟ್ ಗೆ ಸಲ್ಲಿಸಿದೆ. ಸ್ವಾಮಿಯ ಎರಡೂ ಕಿವಿಗಳು ಕೇಳಿಸುತ್ತಿಲ್ಲ, ಮೈ ನಡುಗುತ್ತಿರುವುದರಿಂದ ನಡೆಯುವಾಗ ಊರುಗೋಲು ಅಥವಾ ಗಾಲಿಕುರ್ಚಿಯ ಅಗತ್ಯವಿದೆ. ಆದರೆ ಅವರ ಒಟ್ಟಾರೆ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ತನ್ನನ್ನು ಆಸ್ಪತ್ರೆಗೆ ದಾಖಲಿಸುವುದು ಬೇಡ, ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿ ಎಂದು ಸ್ವಾಮಿ ಕೋರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News