"ಕೆಲವು ವೈದ್ಯರು ಸೈತಾನರಂತೆ ವರ್ತಿಸುತ್ತಿದ್ದಾರೆ": ರಾಮ್ ದೇವ್ ಹೇಳಿಕೆಯನ್ನು ಬೆಂಬಲಿಸಿದ ಉತ್ತರ ಪ್ರದೇಶ ಶಾಸಕ

Update: 2021-05-28 18:48 GMT

ಲಕ್ನೊ, ಮೇ 28: ಅಲೋಪಥಿ ವೈದ್ಯರು ಹಾಗೂ ಯೋಗಗುರು ರಾಮ್ ದೇವ್ ನಡುವಿನ ವಿವಾದದಲ್ಲಿ ಈಗ ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮಧ್ಯಪ್ರವೇಶಿಸಿದ್ದು ಕೆಲವು ವೈದ್ಯರು ಸೈತಾನರಂತೆ ವರ್ತಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಗುರುವಾರ ಸುದ್ಧಿಗಾರರ ಜತೆ ಮಾತನಾಡುತ್ತಿದ್ದ ಸಿಂಗ್, ತೀವ್ರನಿಗಾ ಘಟಕದಲ್ಲಿ ದಾಖಲಾದ ರೋಗಿಗಳು ಸತ್ತಿದ್ದರೂ ಇನ್ನೂ ಬದುಕಿದ್ದಾರೆ ಎಂದು ಬಿಂಬಿಸಿ ರೋಗಿಯ ಕುಟುಂಬದವರಿಂದ ಹಣ ಪಡೆಯುವ ವೈದ್ಯರನ್ನು ಸೈತಾನರೆಂದೇ ಕರೆಯಬೇಕು ಎಂದಿದ್ದಾರೆ. ಅಲೋಪಥಿ ವೈದ್ಯಪದ್ಧತಿಯ ವಿರುದ್ಧ ರಾಮ್ದೇವ್ ನೀಡಿರುವ ಹೇಳಿಕೆಯನ್ನು ಬೆಂಬಲಿಸಿದ ಅವರು, ರಾಮ್ದೇವ್ ಭಾರತದ ವೈದ್ಯಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿದ್ದಾರೆ, ಅವರು ಸನಾತನ ಧರ್ಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದಿದ್ದಾರೆ. ರಾಜಕೀಯದಿಂದ ನಿವೃತ್ತಿಯಾದ ಬಳಿಕ ಸನಾತನ ಧರ್ಮದ ಪ್ರಚಾರದ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದಿದ್ದಾರೆ.

ಸಮಾಜವನ್ನು ದರೋಡೆ ಮಾಡುವ ಮೂಲಕ ಈಗಿನ ವೈದ್ಯಕೀಯ ವ್ಯವಸ್ಥೆಯನ್ನು ದುಬಾರಿಯನ್ನಾಗಿಸಿದವರು ನೈತಿಕತೆಯ ಬಗ್ಗೆ ಪಾಠ ಹೇಳುತ್ತಿದ್ದಾರೆ. ಅಲೋಪಥಿ ಕ್ಷೇತ್ರದಲ್ಲಿ 10 ರೂ. ಬೆಲೆಯ ಮಾತ್ರೆಯನ್ನು 100 ರೂ.ಗೆ ಮಾರುವವರು ಬಿಳಿಬಟ್ಟೆ ಧರಿಸಿರುವ ಕ್ರಿಮಿನಲ್ಗಳಾಗಿದ್ದಾರೆ, ಸಮಾಜದ ಹಿತಚಿಂತಕರಲ್ಲ ಎಂದು ಸಿಂಗ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲೋಪಥಿಯೂ ಉಪಯುಕ್ತವಾಗಿದೆ, ಆದರೆ ಆಯುರ್ವೇದವೂ ಕಡಿಮೆಯೇನಲ್ಲ. ಇದನ್ನು ತಿಳಿದುಕೊಂಡು ವೈದ್ಯರು ರೋಗಿಗಳಿಗೆ ಚಿಕಿತ್ಸೆ ಮಾಡಬೇಕು. ಭಾರತೀಯ ವೈದ್ಯಪದ್ಧತಿಯ ಪ್ರತಿನಿಧಿಯಾಗಿರುವ ರಾಮ್ದೇವ್ ರನ್ನು ಅಭಿನಂದಿಸುತ್ತೇನೆ. ಅವರು ಆಯುರ್ವೇದದ ಮೂಲಕ ಸ್ವಸ್ಥ್ ಭಾರತ್, ಸಮರ್ಥ ಭಾರತ್' ಅಭಿಯಾನಕ್ಕೆ ಚಾಲನೆ ನೀಡಿದವರು ಎಂದು ಸಿಂಗ್ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News