ಏಳು ವರ್ಷಗಳ ಬೀಳು: ಹತಾಶೆಯಲ್ಲಿ ಸರಕಾರ

Update: 2021-05-31 06:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಏಳು ವರ್ಷ ಮುಗಿಸಿದೆ. ಆದರೆ ಮೋದಿ ತಂಡ ಈ ವರ್ಷಾಚರಣೆಯನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಈ ದೇಶವನ್ನು ಅಭಿವೃದ್ಧಿಯ ತುತ್ತ ತುದಿಗೇರಿಸುವುದಾಗಿ ಜನರಿಗೆ ಎನ್‌ಡಿಎ ನೀಡಿದ್ದ ಭರವಸೆಗಳೆಲ್ಲ ನೆಲಕಚ್ಚಿ ಕೂತಿವೆ. ಸರಕಾರ ತೆಗೆದುಕೊಂಡ ಬೃಹತ್ ನಿರ್ಧಾರಗಳೆಲ್ಲವೂ ಇಂದು ಈ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹಿಂದಕ್ಕೆ ತಳ್ಳಿದವು ಮಾತ್ರವಲ್ಲ, ಜನರನ್ನು ಇನ್ನಷ್ಟು ಸಂಕಟಕ್ಕೀಡು ಮಾಡಿದವು. ಕೊರೋನ ಈ ದೇಶಕ್ಕೆ ಅಪ್ಪಳಿಸುವುದೂ ಆರ್ಥಿಕತೆಯ ಕೊಂಬೆ ಮುರಿದು ಬೀಳುವುದು ಜೊತೆಯಾಗಿ ನಡೆಯಿತು. ಇಂದು ಎಲ್ಲ ಆರ್ಥಿಕ ಸಂಕಟಗಳಿಗೂ ಕೊರೋನವನ್ನೇ ಸರಕಾರ ಹೊಣೆ ಮಾಡುತ್ತಿದೆಯಾದರೂ, ನೋಟು ನಿಷೇಧ ಮಾಡಿದ ಸಂದರ್ಭದಲ್ಲೇ ಭಾರತ ಆರ್ಥಿಕವಾಗಿ ಸರ್ವನಾಶವಾಗಿತ್ತು. ಯಾವ ಗುರಿಯಿಟ್ಟು ಮೋದಿಯವರು ನೋಟು ನಿಷೇಧವನ್ನು ಮಾಡಿದರೋ, ಆ ಗುರಿ ಈಡೇರಲಿಲ್ಲ. ಬದಲಿಗೆ ಅದು ವ್ಯತಿರಿಕ್ತ ಪರಿಣಾಮವನ್ನು ಬೀರಿತು. ಆ ಬಳಿಕ ಜಾರಿಗೆ ತಂದ ಜಿಎಸ್‌ಟಿ ವ್ಯಾಪಾರವನ್ನು ಇನ್ನಷ್ಟು ಬಿಗಡಾಯಿಸಿತು. ತನ್ನ ನಿರಂತರ ವೈಫಲ್ಯಗಳನ್ನು ಮುಚ್ಚಿ ಹಾಕಲು ಸಿಎಎ, ದಿಲ್ಲಿ ಗಲಭೆ ಇತ್ಯಾದಿಗಳನ್ನು ಸರಕಾರದ ನೇತೃತ್ವದಲ್ಲಿ ಪ್ರಾಯೋಜಿಸಲಾಯಿತಾದರೂ, ಜನರ ಅತೃಪ್ತಿ ತಣಿಸುವಲ್ಲಿ ಸರಕಾರ ಯಶಸ್ವಿಯಾಗಲಿಲ್ಲ. ಸರಕಾರದ ಬೇಜವಾಬ್ದಾರಿಯ ಕಾರಣದಿಂದ ಭಾರತಕ್ಕೆ ಕೊರೋನ ಕಾಲಿಟ್ಟಿತು. ಆದರೂ ಮೊದಲನೆಯ ಅಲೆಯನ್ನು ಜನರು ಸಹಿಸಿದರು, ಕೊರೋನ ಎದುರಿಸಲು ಸರಕಾರಕ್ಕೆ ಸಮಯವನ್ನು ನೀಡಿದರು.

ವಿಪರ್ಯಾಸವೆಂದರೆ, ಎರಡನೆಯ ಅಲೆಯ ಕುರಿತಂತೆ ಮುನ್ನೆಚ್ಚರಿಕೆಯಿದ್ದರೂ ಅದನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿತು. ಪಶ್ಚಿಮಬಂಗಾಳದ ಚುನಾವಣೆಯನ್ನು ಗೆಲ್ಲಲೇಬೇಕು ಎನ್ನುವ ಹಠದಿಂದ ಪ್ರಧಾನಿ ಮೋದಿ ನೇತೃತ್ವದಲ್ಲೇ ಕೊರೋನ ನಿರ್ಬಂಧಗಳು ಉಲ್ಲಂಘಿಸಲ್ಪಟ್ಟವು. ಪರಿಣಾಮವಾಗಿ, ಒಂದೆಡೆ ದೇಶಾದ್ಯಂತ ಕೊರೋನ ಉಲ್ಬಣಿಸಿತು. ಇನ್ನೊಂದೆಡೆ ಪಶ್ಚಿಮಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಸಂಪೂರ್ಣ ವಿಫಲವಾಯಿತು. ಚುನಾವಣೆ ಮುಗಿದ ಬಳಿಕವಾದರೂ, ಸರಕಾರ ಕೊರೋನ ನಿರ್ವಹಣೆಯ ಬಗ್ಗೆ ಗಂಭೀರವಾದ ಯೋಜನೆಗಳನ್ನು ರೂಪಿಸುತ್ತದೆ ಎಂದು ಭಾವಿಸಿದ ಜನರಿಗೆ ನಿರಾಶೆಯಾಗಿದೆ. ಕೊರೋನ ನಿರ್ವಹಣೆಯ ಹೊಣೆಯನ್ನು ಸಂಪೂರ್ಣವಾಗಿ ರಾಜ್ಯಗಳ ತಲೆಗೆ ಕಟ್ಟಿರುವ ಕೇಂದ್ರ ಸರಕಾರ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯನ್ನು ಎದುರಿಸುವ ಕುರಿತಂತೆ ಸಭೆಗಳನ್ನು ನಡೆಸುತ್ತಿದೆ. ಕೊರೋನ ಹರಡುವ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ, ಹಠ ಹಿಡಿದು ಕುಂಭಮೇಳವನ್ನು ನಡೆಸುವುದಕ್ಕೆ ಕಾರಣ, ಭವಿಷ್ಯದ ಉತ್ತರ ಪ್ರದೇಶ ಚುನಾವಣೆಯೇ ಆಗಿತ್ತು. ಆದರೆ ಈ ಮೇಳಕ್ಕೆ ದೇಶ ತೆತ್ತ ಬೆಲೆ ಅತಿ ಭೀಕರವಾದುದು. ಭಕ್ತರು ಮಿಂದೆದ್ದ ಅದೇ ಗಂಗಾನದಿಯಲ್ಲಿ ಕೊರೋನದಿಂದ ಮೃತಪಟ್ಟವರ ಮೃತದೇಹಗಳು ಸಾಲು ಸಾಲಾಗಿ ತೇಲತೊಡಗಿವೆ. ಇವುಗಳ ನಡುವೆಯೇ ಕೇಂದ್ರ ಸರಕಾರ ಆರೆಸ್ಸೆಸ್‌ನ ಮುಖಂಡರ ಜೊತೆಗೆ ಉತ್ತರ ಪ್ರದೇಶ ಚುನಾವಣೆಯನ್ನು ಗೆಲ್ಲುವ ಕುರಿತಂತೆ ಯೋಜನೆಗಳನ್ನು ರೂಪಿಸಲು ಮುಂದಾಗಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಪ್ರದೇಶದ ಚುನಾವಣೆಯನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅವರಿಗೆ ಪಶ್ಚಿಮಬಂಗಾಳ ಚುನಾವಣೆ ಸ್ಪಷ್ಟವಾಗಿ ತಿಳಿಸಿದೆ. ಇತ್ತ, ಉತ್ತರ ಪ್ರದೇಶಕ್ಕೆ ಆದಿತ್ಯನಾಥ್ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಉತ್ತರ ಪ್ರದೇಶ ದೇಶದಲ್ಲೇ ಮುಂಚೂಣಿಯಲ್ಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರೀ ಹಿನ್ನಡೆಯನ್ನು ಕಂಡಿದೆ. ಕೊರೋನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಸರಕಾರ, ಜನರ ಮೇಲೆ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದೆ. ಹೀಗಿರುವಾಗ, ಉತ್ತರ ಪ್ರದೇಶದ ಚುನಾವಣೆಯಲ್ಲಿ ಜನರಿಗೆ ಹೇಗೆ ಮುಖ ತೋರಿಸುವುದು ಬಿಜೆಪಿಗೆ ಸುಲಭವಿಲ್ಲ. ಈ ಕಾರಣದಿಂದಲೇ, ಅದು ಆರೆಸ್ಸೆಸ್ ಮೊರೆ ಹೋಗಿದೆ.

ಕೊರೋನ ಸಾವು-ನೋವುಗಳ ಕುರಿತಂತೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅದು ಮತ್ತೆ ಕೋಮುದ್ರುವೀಕರಣದಂತಹ ಭಾವನಾತ್ಮಕ ವಿಷಯಗಳಿಗೆ ಮೊರೆ ಹೋಗಲು ನಿರ್ಧರಿಸಿದಂತಿದೆ. ಜನರು ಆಕ್ಸಿಜನ್, ವೆಂಟಿಲೇಟರ್, ಲಸಿಕೆಗಳಿಗಾಗಿ ಒದ್ದಾಡುತ್ತಿರುವಾಗ ಸರಕಾರ ಪಾಕಿಸ್ತಾನ, ಬಾಂಗ್ಲಾದಿಂದ ಬಂದ ಪ್ರಜೆಗಳ ಕುರಿತಂತೆ ಕಾಳಜಿ ತೋರಿಸುತ್ತಿದೆ. ಅವರಿಗೆ ಪೌರತ್ವವನ್ನು ನೀಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುವುದಕ್ಕೆ ಮುಂದಾಗಿದೆ. ಸಿಎಎ ಕಾಯ್ದೆಯ ನಿಯಮಗಳನ್ನು ಇನ್ನಷ್ಟೇ ರೂಪಿಸಬೇಕಾಗಿರುವುದರಿಂದ, 2009ರ ಪೌರತ್ವ ನಿಯಮಗಳಡಿ ಅರ್ಜಿಯನ್ನು ಆಹ್ವಾನಿಸಿದೆ. ಇಲ್ಲಿ ಪೌರತ್ವ ನೀಡುವುದಕ್ಕಿಂತಲೂ, ಮತ್ತೆ ಜನರ ಮನಸ್ಸನ್ನು ಪೌರತ್ವದ ಹೆಸರಿನಲ್ಲಿ ಒಡೆಯುವುದು ಸರಕಾರಕ್ಕೆ ಮುಖ್ಯವಾಗಿದೆ. ಇದರ ಜೊತೆಗೆ ಲಕ್ಷದ್ವೀಪದಲ್ಲಿ ನಡೆಸುತ್ತಿರುವ ಅವಾಂತರಗಳ ಹಿಂದೆಯೂ ಕೋಮುದ್ರುವೀಕರಣದ ದುರುದ್ದೇಶ ಎದ್ದು ಕಾಣುತ್ತಿದೆ. ಲಕ್ಷದ್ವೀಪವನ್ನು ಪ್ರವಾಸೋದ್ಯಮ ಕೇಂದ್ರವಾಗಿಸಿ ಅಭಿವೃದ್ಧಿಗೊಳಿಸುವುದು ಮಾತ್ರ ಕೇಂದ್ರ ಸರಕಾರದ ಉದ್ದೇಶವಾಗಿದ್ದರೆ ಅಲ್ಲಿ ಗೋಮಾಂಸ ನಿಷೇಧ, ಇಬ್ಬರಿಗಿಂತ ಅಧಿಕ ಮಕ್ಕಳನ್ನು ಹೊಂದಿದವರಿಗೆ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹತೆಯಂತಹ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗುತ್ತಿರಲಿಲ್ಲ. ಪ್ರವಾಸೋದ್ಯಮಕ್ಕಾಗಿ ಹೆಸರು ಪಡೆದಿರುವ ಗೋವಾದಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿಲ್ಲ. ಮಾತ್ರವಲ್ಲ, ಪ್ರವಾಸಿಗರಿಗೆ ಅನಾನುಕೂಲವಾಗುತ್ತದೆ ಎನ್ನುವ ಕಾರಣಕ್ಕಾಗಿ ಕರ್ನಾಟಕದಿಂದ ಗೋಮಾಂಸವನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಕೇರಳದಲ್ಲೂ ಗೋಮಾಂಸ ನಿಷೇಧಕ್ಕೆ ಬಿಜೆಪಿ ಸಿದ್ಧವಿಲ್ಲ. ಹೀಗಿರುವಾಗ ಲಕ್ಷದ್ವೀಪದಲ್ಲಿ ಅವಸರವಸರವಾಗಿ ಗೋಮಾಂಸ ನಿಷೇಧವನ್ನು ಮಾಡುವುದರ ಉದ್ದೇಶವಾದರೂ ಏನು? ಇದರಿಂದ ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ಯಾವ ರೀತಿಯಲ್ಲಿ ಅನುಕೂಲವಾಗುತ್ತದೆ? ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಲಕ್ಷದ್ವೀಪದಲ್ಲಿ ಅವರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ಪ್ರಚೋದಿಸುವ ಕೆಲಸಕ್ಕೆ ಸರಕಾರ ಮುಂದಾಗುತ್ತಿದೆ.

ಕೊರೋನ ಕಾಲದಲ್ಲಿ ದೇಶಾದ್ಯಂತ ಮುಸ್ಲಿಮರು ನಡೆಸಿರುವ ಸಮಾಜ ಸೇವೆ ಹಿಂದೂ-ಮುಸ್ಲಿಮರ ನಡುವಿನ ಗೋಡೆಗಳನ್ನು ದುರ್ಬಲಗೊಳಿಸಿದೆ. ಕೊರೋನದಿಂದ ಮೃತರಾಗಿರುವವರ ಅಂತ್ಯ ಸಂಸ್ಕಾರದಲ್ಲಿ ಮುಸ್ಲಿಮರು ನೆರವಾಗುತ್ತಿರುವುದು ವ್ಯಾಪಕ ಶ್ಲಾಘನೆಗೆ ಒಳಗಾಗುತ್ತಿದೆ. ಇದು ಆರೆಸ್ಸೆಸ್ ಮತ್ತು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಕಾರಣದಿಂದಲೇ, ಮುಸ್ಲಿಮರನ್ನು ಪ್ರತ್ಯೇಕಿಸುವುದಕ್ಕಾಗಿ ಅವುಗಳು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಿವೆ. ಕೊರೋನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರುವ ವಿಫಲ ಪ್ರಯತ್ನದ ಬಳಿಕ ಅತ್ಯಂತ ಹತಾಶೆ ಸ್ಥಿತಿಯಲ್ಲಿರುವ ಬಿಜೆಪಿ ಉತ್ತರ ಪ್ರದೇಶದಲ್ಲಿ ತನ್ನ ಮಾನವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದುದರಿಂದ ಅದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಲು ಆರೆಸ್ಸೆಸ್ ಜೊತೆ ಸೇರಿ ಯಾವ ಮಟ್ಟಕ್ಕೂ ಇಳಿಯುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದಲ್ಲಿ ಸಂಸದ ತೇಜಸ್ವಿ ಸೂರ್ಯ ನಾರಾಯಣ ರಾವ್ ಅವರು ಕೊರೋನ ವಾರ್ ರೂಂಗೆ ನುಗ್ಗಿ, ಸಿಬ್ಬಂದಿಯ ನಡುವೆ ಕೋಮು ವೈಷಮ್ಯಗಳನ್ನು ಬಿತ್ತಲು ವಿಫಲ ಪ್ರಯತ್ನ ನಡೆಸಿರುವುದು ನಮ್ಮ ಮುಂದೆ ಹಸಿಯಾಗಿದೆ. ಉತ್ತರ ಪ್ರದೇಶದಲ್ಲಿ ಜನಸಾಮಾನ್ಯರ ನಡುವೆ ದ್ವೇಷ ಬಿತ್ತುವುದು ಆದಿತ್ಯ ನಾಥ್‌ರಂತಹ ನಾಯಕರಿಗೆ ಕಷ್ಟವೇನಿಲ್ಲ. ಯಾಕೆಂದರೆ ಅವರು ದ್ವೇಷ ರಾಜಕಾರಣದ ಮೂಲಕವೇ ಜನಪ್ರಿಯರಾಗಿ, ಮುಖ್ಯಮಂತ್ರಿ ಸ್ಥಾನಕ್ಕೇರಿದವರು. ಈ ಹಿನ್ನೆಲೆಯಲ್ಲಿ, ಕೊರೋನ ವೈರಸ್‌ಗಳಿಗೆ ಮುಂಜಾಗ್ರತೆಯನ್ನು ಮಾಡಿಕೊಂಡಂತೆಯೇ ದೇಶದ ಜನತೆ ಈ ಕೋಮು ವೈರಸ್‌ಗಳ ಬಗ್ಗೆಯೂ ಮುಂಜಾಗ್ರತೆಯನ್ನು ವಹಿಸುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಕೊರೋನ ವೈರಸ್‌ಗೆ ಲಸಿಕೆಯನ್ನು ಕಂಡು ಹಿಡಿಯಲಾಗಿದೆ. ಆದರೆ ಈ ಕೋಮುವೈರಸ್‌ಗಳಿಗೆ ಈವರೆಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿಯಲಾಗಿಲ್ಲ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News