ಪಡಿತರ ಮಾಫಿಯಾ ಪ್ರಭಾವದಿಂದ ಮನೆ ಬಾಗಿಲಿಗೆ ರೇಶನ್ ವಿತರಣೆಗೆ ಕೇಂದ್ರ ತಡೆ: ಕೇಜ್ರಿವಾಲ್ ಆರೋಪ

Update: 2021-06-06 09:37 GMT

ಹೊಸದಿಲ್ಲಿ: ಕೇಂದ್ರ ಸರಕಾರವು ದಿಲ್ಲಿಯಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣೆಯನ್ನು ಪ್ರಾರಂಭಿಸುವ ಯೋಜನೆಯನ್ನು ನಿರ್ಬಂಧಿಸಿದ ಮರುದಿನ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರವು ಪಡಿತರ ಮಾಫಿಯಾದ "ಪ್ರಭಾವ" ದ ಅಡಿಯಲ್ಲಿ ಹೆಜ್ಜೆ ಇಡುತ್ತಿದೆ ಎಂದು ಆರೋಪಿಸಿದರು, ಈ ಮೂಲಕ  ಬಡವರ ಪರ ಹಾಗೂ ಕ್ರಾಂತಿಕಾರಿ ಯೋಜನೆ ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೆ ಬರುವುದಿಲ್ಲ ಎನ್ನುವುದನ್ನು ಖಚಿತಪಡಿಸಲಾಗಿದೆ ಎಂದು ಹೇಳಿದರು.

"ದಿಲ್ಲಿಯಲ್ಲಿ ಮನೆಬಾಗಿಲಿಗೆ ರೇಶನ್ ವಿತರಣೆ ಯೋಜನೆ ಜಾರಿಗೆ ಬರುವ ಎರಡು ದಿನಗಳ ಮೊದಲು ಕೇಂದ್ರ ಸರಕಾರ ಅದನ್ನು ನಿಲ್ಲಿಸಿತು. ಪಿಜ್ಜಾ, ಬರ್ಗರ್‌ಗಳು, ಸ್ಮಾರ್ಟ್‌ಫೋನ್‌ಗಳು ಹಾಗೂ  ಬಟ್ಟೆಗಳನ್ನು ಮನೆ ಬಾಗಿಲಿಗೆ ತಲುಪಿಸಬಹುದಾದರೆ, ಪಡಿತರವನ್ನು ಜನರ  ಮನೆ ಬಾಗಿಲಿಗೆ ಏಕೆ ತಲುಪಿಸಲಾಗುವುದಿಲ್ಲ?" ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

"ಮೊದಲ ಬಾರಿಗೆ, ಪಡಿತರ ಮಾಫಿಯಾವನ್ನು ಲಗಾಮು ಹಾಕಲು ಸರಕಾರ  ಹೆಜ್ಜೆ ಇಟ್ಟಿತ್ತು. ಆದರೆ ಅವರು (ಪಡಿತರ ಮಾಫಿಯಾ) ಎಷ್ಟು ಪ್ರಬಲರಾಗಿದ್ದಾರೆಂದು ನೋಡಿ, ಈ ಯೋಜನೆ ಜಾರಿಗೆ ಬರುವ ಒಂದು ವಾರದ ಮುಂಚೆಯೇ ರದ್ದುಗೊಂಡಿದೆ" ಎಂದು ಅವರು ಹೇಳಿದರು.

ಡಿಜಿಟಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಈ ಯೋಜನೆಯ ಅನುಷ್ಠಾನಕ್ಕೆ ತಮ್ಮ ಸರಕಾರ ಅನುಮತಿ ಪಡೆದಿಲ್ಲ ಎಂಬ ಕೇಂದ್ರದ ಹೇಳಿಕೆಗೆ ಪ್ರತಿಕ್ರಿಯಿಸಿದರು.

"ಯೋಜನೆ ಅನುಷ್ಠಾನಕ್ಕೆ ದಿಲ್ಲಿ ಸರಕಾರಕ್ಕೆ ಕೇಂದ್ರದ ಅನುಮೋದನೆ ಅಗತ್ಯವಿರಲಿಲ್ಲ, ಆದರೆ ಯಾವುದೇ ವಿವಾದವನ್ನು ತಪ್ಪಿಸಲು ಐದು ಬಾರಿ ಅನುಮತಿ ಕೋರಿದೆ" ಎಂದು ಅವರು ಹೇಳಿದರು.

ಮನೆ  ಬಾಗಿಲಿಗೆ ಪಡಿತರ ವಿತರಣೆ ಯೋಜನೆಯಿಂದ ರಾಜಧಾನಿಯಲ್ಲಿ 72 ಲಕ್ಷ ಪಡಿತರ ಕಾರ್ಡುದಾರರಿಗೆ ಅನುಕೂಲವಾಗಬಹುದೆಂದು ಕೇಜ್ರಿವಾಲ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News