ರಾಜ್ಯದಲ್ಲಿ ಮುಂಗಾರು ಚುರುಕು: ಕೃಷಿ ಚಟುವಟಿಕೆ ಬಿರುಸು

Update: 2021-06-06 13:04 GMT

ಬೆಂಗಳೂರು, ಜೂ.6: ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮುಂಗಾರು ಮಳೆ ಸುರಿಯುತ್ತಿರುವ ಬೆನ್ನಲ್ಲೇ ರೈತರ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಜಮೀನು ಸಮ ಮಾಡಿ ಉಳುಮೆ ಮಾಡಿ ಬಿತ್ತನೆಗೆ ಹದಗೊಳಿಸುವ ಕೃಷಿ ಚಟುವಟಿಕೆಗಳು ಹಲವೆಡೆ ಕಂಡು ಬಂದಿದೆ ಹಾಗೂ ರೈತರು ಜಮೀನುಗಳ ಕಡೆ ಮುಖ ಮಾಡಿದ್ದಾರೆ. 

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಧಾರಾಕಾರ ಮಳೆಯಾಗತೊಡಗಿದೆ. ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಯಾದಗಿರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುತ್ತಿದೆ. 

ಕುಂದಾಪುರದಲ್ಲಿ 9 ಸೆಂ.ಮೀ., ಪಣಂಬೂರು 7, ಬೀದರ್ 5, ಬೆಂಗಳೂರು ಮತ್ತು ಮಂಡ್ಯದಲ್ಲಿ 4 ಸೆಂ.ಮೀ. ಮಳೆಯಾಗಿದೆ. ನೆಲಮಂಗಲ, ಚಿಂತಾಮಣಿ, ಮೂಡುಬಿದರೆಯಲ್ಲಿ 3 ಸೆಂ.ಮೀ., ಮಳೆಯಾಗಿದೆ. ಕಮಾಲಪುರ, ಕಡೂರು, ಚಿತ್ರದುರ್ಗ, ಚನ್ನಗಿರಿ ಮತ್ತು ಭಾಗಮಂಡಲದಲ್ಲಿ 1 ಸೆಂ.ಮೀ., ಮಳೆಯಾಗಿದೆ.

ಮುಂಗಾರು ಮಳೆಯ ಆಗಮನದಿಂದ ರೈತರು ಖುಷಿಗೊಂಡಿದ್ದಾರೆ. ಇದರ ಜೊತೆಗೆ ಎಲ್ಲೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ.

ನೈಋತ್ಯ ಮುಂಗಾರು ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರವೇಶಿಸಿದ್ದು, ಆ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಅಂತೆಯೇ ಉತ್ತರ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಮಳೆಯಾಗಿದೆ. ರಾಜ್ಯಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News