ಆದಿತ್ಯನಾಥ್‌ ಸರಕಾರಕ್ಕೆ ಮುಳ್ಳಾಗಿರುವ ಮಾಜಿ ಐಪಿಎಸ್‌ ಅಧಿಕಾರಿಯ ಮೇಲೆ 12 ತಿಂಗಳಲ್ಲಿ 6 ಪ್ರಕರಣಗಳು ದಾಖಲು

Update: 2021-06-06 14:10 GMT
Photo: Twitter 

ಲಕ್ನೋ: ಮಾಜಿ ಐಎಎಸ್‌ ಅಧಿಕಾರಿಯಾಗಿದ್ದ ಸೂರ್ಯಪ್ರತಾಪ್‌ ಸಿಂಗ್‌ ಸದ್ಯ ಉತ್ತರಪ್ರದೇಶದ ಆದಿತ್ಯನಾಥ್‌ ಸರಕಾರಕ್ಕೆ ಅಕ್ಷರಶಃ ಮುಳ್ಳಾಗಿ ಪರಿಣಮಿಸಿದ್ದು, ಸರಕಾರದ ವಿರುದ್ಧ ಮಾಡಿದ್ದ ಟ್ವೀಟ್‌ ಕುರಿತಾದಂತೆ ಅವರ ವಿರುದ್ಧ 12 ತಿಂಗಳಿನಲ್ಲಿ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿ ಮಾಡಿದೆ. 

ಟ್ವಿಟರ್‌ ನಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿಯನ್ನು ಬೆಂಬಲಿಸುವ ಸಲುವಾಗಿ ಹಣದ ಬೇಡಿಕೆಯಿಡುತ್ತಿರುವ ಆಡಿಯೋವೊಂದನ್ನು ಅವರು ಟ್ವೀಟ್‌ ಮಾಡಿದ್ದು ಸದ್ಯ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಆಡಿಯೋ ತಿರುಚಲ್ಪಟ್ಟಿದೆ ಎಂದು ಸರಕಾರದ ಮೂಲಗಳು ಹೇಳಿಕೆ ನೀಡಿದ್ದು, ತಮ್ಮ ಟ್ವೀಟ್‌ ನಲ್ಲಿ "ಯೋಗಿ ಕಾ ಟೂಲ್‌ ಕಿಟ್‌" ಎಂದು ಅವರು ಬಣ್ಣಿಸಿದ್ದರು.

ಅತುಲ್ ಕುಶ್ವಾಹಾ ಅವರ ದೂರಿನ ಮೇರೆಗೆ ಕಾನ್ಪುರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ, ಸಿಂಗ್ ಮತ್ತು ಇತರ ಇಬ್ಬರು ತಮ್ಮನ್ನು ಮತ್ತು ಯೋಗಿ ಆದಿತ್ಯನಾಥ್ ಅವರನ್ನು ದೂಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (ಸಾರ್ವಜನಿಕ ಕ್ಷೋಭೆಗೆ ಕಾರಣವಾದ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ಸಿಂಗ್‌ ರನ್ನು ಲಕ್ನೋದ ನೀವಾಸದಲ್ಲಿ ಪೊಲೀಸ್‌ ಅಧಿಕಾರಿಗಳ ತಂಡವು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, "ಇದು ನನ್ನನ್ನು ಬೆದರಿಸುವ ಮತ್ತು ಸಮಸ್ಯೆಗಳನ್ನು ಎತ್ತದಂತೆ ಮೌನವಾಗಿಸುವ ಪ್ರಯತ್ನವಾಗಿದೆ" ಎಂದು ಈ ಕುರಿತು ಸಿಂಗ್‌ ಹೇಳಿಕೆ ನೀಡಿದ್ದರು. ಆದರೆ 66ರ ಹರೆಯದ ಸಿಂಗ್‌ ರವರಿಗೆ ಇಂತಹಾ ಪ್ರಕರಣಗಳು ಹೊಸದೇನಲ್ಲ. ಕಳೆದ ಹನ್ನೆರಡು ತಿಂಗಳುಗಳಲ್ಲಿ ತಪ್ಪು ಮಾಹಿತಿ ಹರಡಿದ್ದಾರೆಂದು ಅವರು ವಿರುದ್ಧ ಒಟ್ಟು ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಅವುಗಳಲ್ಲಿ ಎರಡು ಪ್ರಕರಣಗಳು 2021 ರಲ್ಲಿ ದಾಖಲಾಗಿವೆ.

ಅವರಿಗೆ ಟ್ವಿಟರ್‌ ನಲ್ಲಿ 1,59,000 ಫಾಲೋವರ್ಸ್‌ ಗಳಿದ್ದು, ತಮ್ಮ ಪ್ರೊಫೈಲ್‌ ನಲ್ಲಿ "ಯೋಗಿ ಸರಕಾರವನ್ನು ಪ್ರಶ್ನಿಸಿದ್ದಕ್ಕೆ 6 ಪ್ರಕರಣಗಳ ಪ್ರಶಸ್ತಿ ನೀಡಲಾಗಿದೆ" ಎಂದು ಬರೆದುಕೊಂಡಿದ್ದಾರೆ. "ನಾನು ಎಲ್ಲಾ ಸರಕಾರಗಳ ತಪ್ಪಿನ ವಿರುದ್ಧವೂ ಧ್ವನಿಯೆತ್ತಿದ್ದೇನೆ. ನಾನು ಯಾರಿಗೂ ಹೆದರಿಲ್ಲ. ನಾನು ನನ್ನ ಧ್ವನಿಯನ್ನು ನಿಲ್ಲಿಸುವುದಿಲ್ಲ" ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ. 

"ನಾನ ಹಲವಾರು ಪ್ರಕರಣಗಳ ಕುರಿತಾದಂತೆ ಜನರ ಗಮನ ಸೆಳೆದಿದ್ದೇನೆ. ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ, ಔಷಧಿಗಳ ಕೊರತೆ, ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು ಮುಂತಾದವುಗಳ ಕುರಿತು ಮಾತನಾಡಿದ್ದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. 

ಸಿಂಗ್‌ ರವರು ಬುಲಂದ್‌ ಶಹರ್‌ ನಿವಾಸಿಯಾಗಿದ್ದು, 1982ರ ಐಎಎಸ್‌ ಬ್ಯಾಚ್‌ ನವರಾಗಿದ್ದಾರೆ. 2015ರಲ್ಲಿ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದರು. 25 ವರ್ಷಗಳ ಅವರ ಸೇವಾವಧಿಯಲಿ ಒಟ್ಟು 54 ಬಾರಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅಲ್ಲದೇ ಐಎಎಸ್‌ ಅಧಿಕಾರಿಯಾಗಿ ಸೇವೆಗೆ ಸೇರುವ ಮುಂಚೆ ಅವರು ಐಪಿಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News