ಬುರ್ಕಿನಾ ಫಾಸೊದಲ್ಲಿ ಭೀಕರ ಹತ್ಯಾಕಾಂಡ: ಕನಿಷ್ಠ 132 ಗ್ರಾಮಸ್ಥರು ಸಾವು

Update: 2021-06-06 17:06 GMT

ವಾಗಡೂಗೂ (ಬುರ್ಕಿನಾ ಫಾಸೊ), ಜೂ. 6: ಪಶ್ಚಿಮ ಆಫ್ರಿಕದ ದೇಶ ಬುರ್ಕಿನಾ ಫಾಸೊದ ಉತ್ತರ ಭಾಗದಲ್ಲಿ ಬಂದೂಕುಧಾರಿಗಳು ಕನಿಷ್ಠ 132 ಜನರನ್ನು ಕೊಂದಿದ್ದಾರೆ ಎಂದು ಸರಕಾರ ತಿಳಿಸಿದೆ.

ನೆರೆಯ ನೈಜರ್ ದೇಶದ ಗಡಿಗೆ ಹೊಂದಿಕೊಂಡಿರುವ ಯಾಗ ರಾಜ್ಯದ ಸೊಲ್ಹಾನ್ ಎಂಬ ಗ್ರಾಮದ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಹಂತಕರು, ಅಲ್ಲಿನ ನಿವಾಸಿಗಳ ನರಮೇಧ ನಡೆಸಿದರು. ಅವರು ಮನೆಗಳು ಮತ್ತು ಗ್ರಾಮದ ಮಾರುಕಟ್ಟೆಯನ್ನು ಸುಟ್ಟು ಹಾಕಿದರು ಎಂದು ಸರಕಾರ ಶನಿವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೃತರಲ್ಲಿ ಏಳು ಮಕ್ಕಳೂ ಸೇರಿದ್ದಾರೆ. 40 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸರಕಾರದ ವಕ್ತಾರ ಉಸೇನಿ ತಂಬೂರ ತಿಳಿಸಿದರು.

ಈ ದಾಳಿಗೆ ಯಾವುದೇ ಗುಂಪು ಹೊಣೆ ಹೊತ್ತುಕೊಂಡಿಲ್ಲ.
ಶುಕ್ರವಾರ ರಾತ್ರಿ ನಡೆದ ದಾಳಿಯು ಬುರ್ಕಿನಾ ಫಾಸೊದಲ್ಲಿ ಹಲವು ವರ್ಷಗಳಲ್ಲಿ ನಡೆದ ದಾಳಿಗಳಲ್ಲೇ ಭೀಕರವಾಗಿದೆ.
ಹತ್ಯಾಕಾಂಡವು ಅಮಾನುಷವಾಗಿದೆ ಎಂದು ದೇಶದ ಅಧ್ಯಕ್ಷ ರಾಕ್ ಮಾರ್ಕ್ ಬಣ್ಣಿಸಿದ್ದಾರೆ ಹಾಗೂ ಈ ಅನಾಮಧೇಯ ಶಕ್ತಿಗಳ ವಿರುದ್ಧ ಬುರ್ಕಿನಾಬೆ ಜನರು ಒಗ್ಗಟ್ಟಿನಿಂದ ಇರಬೇಕು ಎಂಬುದಾಗಿ ಕರೆ ನೀಡಿದ್ದಾರೆ.

ಆಕ್ರೋಶ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಮುಖ್ಯಸ್ಥ

 ಬುರ್ಕಿನಾ ಫಾಸೊದಲ್ಲಿ ನಡೆದ ಗ್ರಾಮಸ್ಥರ ಹತ್ಯಾಕಾಂಡದಿಂದ ನಾನು ಆಕ್ರೋಶಗೊಂಡಿದ್ದೇನೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ ಹಾಗೂ ಈ ಬಿಕ್ಕಟ್ಟನ್ನು ಎದುರಿಸುವಲ್ಲಿ ದೇಶದ ಜನರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
‘‘ಈ ಅಮಾನುಷ ದಾಳಿಯನ್ನು ಗುಟೆರಸ್ ಬಲವಾಗಿ ಖಂಡಿಸಿದ್ದಾರೆ ಹಾಗೂ ಹಿಂಸಾತ್ಮಕ ತೀವ್ರವಾದದ ವಿರುದ್ಧದ ಹೋರಾಟದಲ್ಲಿ ಸದಸ್ಯ ದೇಶಗಳಿಗೆ ನೀಡಲಾಗುತ್ತಿರುವ ಬೆಂಬಲವನ್ನು ಅಂತರ್ರಾಷ್ಟ್ರೀಯ ಸಮುದಾಯವು ದುಪ್ಪಟ್ಟುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ’’ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News