ವೈದ್ಯರು- ರೋಗಿಗಳ ನಡುವೆ ಸಮನ್ವಯ ಅಗತ್ಯ

Update: 2021-06-07 07:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವೈದ್ಯರನ್ನು ದೇವರಿಗೆ ಸಮಾನ ಎಂದು ಬಣ್ಣಿಸುವವರಿದ್ದಾರೆ. ಆದರೆ ಅದು ನಿಜವಲ್ಲ ಎನ್ನುವುದು ಕೆಲವರಿಗೆ ತಡವಾಗಿ ಹೊಳೆದಾಗ ಭ್ರಮನಿರಸನಗೊಂಡು ‘ದೇವರ ಮೇಲೆ ಹಲ್ಲೆ’ ನಡೆೆಯುತ್ತದೆ. ವೈದ್ಯರ ಕುರಿತ ಅತಿ ನಿರೀಕ್ಷೆಗಳೇ ಈ ಹಲ್ಲೆಗಳಿಗೆ ಕಾರಣ. ವೈದ್ಯರಿಗೂ ಮಿತಿಗಳಿವೆ. ಮನುಷ್ಯರ ಸೃಷ್ಟಿಯಲ್ಲಿ ಈ ವೈದ್ಯ ದೇವರುಗಳ ಯಾವ ಪಾತ್ರವೂ ಇಲ್ಲ. ಹೆರಿಗೆ ಸಂದರ್ಭದಲ್ಲಷ್ಟೇ ಅವರು ಮನುಷ್ಯರಿಗೆ ನೆರವಾಗುತ್ತಾರೆ. ಹಾಗೆಯೇ ಹತ್ತು ಹಲವು ರೋಗಗಳನ್ನು ನಿವಾರಿಸುವ ಪ್ರಯತ್ನ ಪಡುತ್ತಾರೆಯೇ ಹೊರತು, ಆ ರೋಗ ನಿವಾರಣೆಯ ಪೂರ್ಣ ಭರವಸೆಯನ್ನು ಈವರೆಗೆ ಯಾವುದೇ ವೈದ್ಯರು ರೋಗಿಗಳಿಗಾಗಲಿ, ರೋಗಿಗಳ ಕುಟುಂಬಕ್ಕಾಗಲಿ ನೀಡಿದ್ದಿಲ್ಲ. ಆದುದರಿಂದ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಂಭವಿಸುವ ದುರಂತಗಳಿಗೆ ವೈದ್ಯರನ್ನು ಸಂಪೂರ್ಣ ಹೊಣೆಗಾರರನ್ನಾಗಿಸುವಂತಿಲ್ಲ. ಹಾಗೆಂದು ವೈದ್ಯರೆಲ್ಲ ಅಮಾಯಕರೂ ಅಲ್ಲ. ಒಂದು ಕಾಲದಲ್ಲಿ ‘ಸೇವೆ’ ಎಂದು ಮಾನ್ಯತೆ ಪಡೆದಿದ್ದ ಮತ್ತು ಈಗಲೂ ಸೇವೆಯ ಹೆಸರಿನಲ್ಲಿ ಸರಕಾರದ ಸಕಲ ಸೌಲಭ್ಯಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ವೈದ್ಯಕೀಯ ವೃತ್ತಿಯ ಅವಲಂಬಿತರು ಅದನ್ನು ಸಂಪೂರ್ಣ ಉದ್ಯಮವಾಗಿ ಪರಿವರ್ತಿಸಿಕೊಂಡಿದ್ದಾರೆ. ಆಸ್ಪತ್ರೆಗಳು ಪಂಚತಾರಾ ಹೊಟೇಲ್‌ಗಳ ರೂಪದಲ್ಲಿ ಕಂಗೊಳಿಸುತ್ತಿವೆ. ರೋಗಿಗಳನ್ನು ದೋಚುವುದಕ್ಕಾಗಿಯೇ ಆಸ್ಪತ್ರೆಗಳು ಹೊಂಚು ಹಾಕಿ ಕುಳಿತಿರುತ್ತವೆ. ಬೃಹತ್ ಆಸ್ಪತ್ರೆಗಳಲ್ಲಿ ರೋಗಿ ಮತ್ತು ಅವರ ಕುಟುಂಬದ ಮೇಲೆ ದಿನ ನಿತ್ಯ ಬೇರೆ ಬೇರೆ ರೂಪಗಳಲ್ಲಿ ಹಲ್ಲೆಗಳು ನಡೆಯುತ್ತಿರುತ್ತವೆ. ಆಸ್ಪತ್ರೆಯೊಳಗೆ ನಡೆಯುತ್ತಿರುವ ಹಗಲು ದರೋಡೆಗಳನ್ನು, ದಾಳಿಗಳನ್ನು ವೌನವಾಗಿ ಜನಸಾಮಾನ್ಯರು ಸಹಿಸುತ್ತಾ ಬರುತ್ತಿದ್ದಾರೆ. ವೈದ್ಯರ ಮೇಲೆ ನಡೆಯುವ ಹಲ್ಲೆಗಳು ಅಪರೂಪವಾಗಿದ್ದರೆ, ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳ ಕುಟುಂಬಸ್ಥರ ಮೇಲೆ ನಡೆಸುವ ದಾಳಿ ದಿನನಿತ್ಯದ್ದು. ವೈದ್ಯರ ಮೇಲೆ ರೋಗಿಗಳ ಆಕ್ರೋಶದ ಕಟ್ಟೆ ಒಡೆದಾಗ ಹಲ್ಲೆ ನಡೆಯುತ್ತವೆ. ಅವರೇನೂ ಗೂಂಡಾಗಳಲ್ಲ, ರೌಡಿಗಳಲ್ಲ. ತಮ್ಮವರ ಸಾವಿಗೆ ವೈದ್ಯರ ಬೇಜವಾಬ್ದಾರಿ ಕಾರಣ ಎಂದು ನಂಬಿ ಕೆಲವೊಮ್ಮೆ ಹಲ್ಲೆ ನಡೆಸಬಹುದು. ಆದರೆ ಇಂದು ಸರಕಾರ ವೈದ್ಯರ ರಕ್ಷಣೆಗಾಗಿ ಕಾಳಜಿ ವಹಿಸಿದಷ್ಟು, ವೈದ್ಯರಿಂದ ಶೋಷಣೆಗೊಳಗಾಗುತ್ತಿರುವ ರೋಗಿಗಳ ರಕ್ಷಣೆಗೆ ಕಾಳಜಿವಹಿಸಿಲ್ಲ.

ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅವರ ವಿರುದ್ಧ ಅತ್ಯಂತ ಕಠಿಣ ಕಾನೂನುಗಳನ್ನು ಬಳಸುವ ಕಾಯ್ದೆಗಳನ್ನು ರೂಪಿಸಲಾಗಿದೆ. ಇಂದು ವೈದ್ಯರ ಅಕ್ರಮಗಳನ್ನು ರೋಗಿಗಳು ಪ್ರಶ್ನಿಸುವುದು ಕೂಡ ವೈದ್ಯರಿಗೆ ಒಡ್ಡುವ ಬೆದರಿಕೆ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆಸ್ಪತ್ರೆಗಳ ದುಬಾರಿ ಶುಲ್ಕಗಳನ್ನು ಪ್ರಶ್ನಿಸಿದರೆ ಅವರ ಬಾಯಿ ಮುಚ್ಚಿಸುವುದಕ್ಕೋಸ್ಕರ ಈ ಕಾಯ್ದೆಗಳನ್ನು ಬಳಸುವ ನೀಚ ಮಟ್ಟಕ್ಕೆ ಕೆಲವು ವೈದ್ಯರು ಇಳಿಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೊರೋನದ ಈ ಸಂಕಟ ಕಾಲದಲ್ಲಿ ಒಂದೆಡೆ ವೈದ್ಯರು ‘ಕೊರೋನ ಯೋಧ’ರಾಗಿ ಬಣ್ಣಿಸಲ್ಪಡುತ್ತಿದ್ದರೆ ಇನ್ನೊಂದೆಡೆ ‘ಯಮ ಭಯಂಕರ’ರಾಗಿ ಜನಸಾಮಾನ್ಯರ ಟೀಕೆಗಳಿಗೆ ಈಡಾಗುತ್ತಿದ್ದಾರೆ. ಒಂದೆಡೆ ನೂರಾರು ಆರೋಗ್ಯ ಸಿಬ್ಬಂದಿ ಕೊರೋನ ಚಿಕಿತ್ಸೆ ನೀಡುತ್ತಾ ಪ್ರಾಣ ಕೊಡುತ್ತಿದ್ದರೆ, ಮಗದೊಂದೆಡೆ ಬೃಹತ್ ಖಾಸಗಿ ಆಸ್ಪತ್ರೆಗಳು ರೋಗಿಗಳ ಅಸಹಾಯಕತೆಯನ್ನು ಬಳಸಿಕೊಂಡು ತಮ್ಮ ಖಜಾನೆಗಳನ್ನು ತುಂಬಿಸುತ್ತಿವೆ. 14 ದಿನ ಕ್ವಾರಂಟೈನ್ ವ್ಯವಸ್ಥೆ ಮಾಡಿ ರೋಗಿಯಿಂದ ಲಕ್ಷಾಂತರ ರೂಪಾಯಿ ಕಕ್ಕಿಸುತ್ತಿವೆ. ಇವುಗಳ ವಿರುದ್ಧ ಪ್ರಶ್ನಿಸಿದವರನ್ನು, ತಮ್ಮ ಪರವಾಗಿರುವ ಕಾಯ್ದೆಗಳನ್ನು ತೋರಿಸಿ ಆಸ್ಪತ್ರೆಗಳು ಬೆದರಿಸುತ್ತಿವೆ. ರೋಗಿಗಳು ಮತ್ತು ಆಸ್ಪತ್ರೆಗಳ ನಡುವೆ ಹಲವೆಡೆ ತೀವ್ರತರವಾದ ಸಂಘರ್ಷಗಳು ನಡೆಯುತ್ತಿವೆ. ಕೊರೋನ ಕಾಲದಲ್ಲಿ ಜನಸಾಮಾನ್ಯರ ನೆರವಿಗೆ ನಿಂತಿರುವ ವಿವಿಧ ಸಾಮಾಜಿಕ ಕಾರ್ಯಕರ್ತರು ಆಸ್ಪತ್ರೆಗಳ ಮುಖವಾಡಗಳನ್ನು ಬಯಲಿಗೆಳೆಯುತ್ತಿದ್ದಂತೆಯೇ, ಈ ಕಾರ್ಯಕರ್ತರ ಮೇಲೆ ಮೊಕದ್ದಮೆಗಳನ್ನು ಹೂಡಿ ಅವರನ್ನು ಬಾಯಿ ಮುಚ್ಚಿಸುವುದಕ್ಕೆ ಆಸ್ಪತ್ರೆ ಆಡಳಿತ ಮಂಡಳಿಗಳು ಮುಂದಾಗುತ್ತಿವೆ. ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಕೊರೋನದ ಈ ಸಂಕಷ್ಟ ಕಾಲದಲ್ಲಿ ವೈದ್ಯರು ಮತ್ತು ರೋಗಿಗಳು ತಮ್ಮ ನಡುವೆ ಸಮನ್ವಯವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡು ಆತನ ಮೃತ ದೇಹದ ಜೊತೆಗೆ ಲಕ್ಷಾಂತರ ರೂಪಾಯಿಯ ಬಿಲ್‌ಗಳನ್ನು ನೀಡುವ ಆಸ್ಪತ್ರೆಗಳು ಒಂದು ಕ್ಷಣ ತಮ್ಮ ಎದೆಯನ್ನು ಮುಟ್ಟಿ ನೋಡಿಕೊಳ್ಳಬೇಕು. ವೈದ್ಯಕೀಯ ವೃತ್ತಿಯ ವೌಲ್ಯಗಳಿಗೆ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದೇವೆ ಎಂದು ವೈದ್ಯರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ಲಾಕ್‌ಡೌನ್‌ನಿಂದಾಗಿ ಯಾವ ಆದಾಯದ ಮೂಲವೂ ಇಲ್ಲದ ಮಧ್ಯಮವರ್ಗದ ಜನರಿಗೆ ಲಕ್ಷಾಂತರ ರೂಪಾಯಿ ಶುಲ್ಕವನ್ನು ಭರಿಸುವುದು ಸಾಧ್ಯವಿಲ್ಲ. ಹಲವೆಡೆ ಸರಕಾರದ ಯೋಜನೆಗಳನ್ನು ಮುಚ್ಚಿಟ್ಟು ರೋಗಿಗಳ ಕೈಯಿಂದ ಹಣವಸೂಲಿ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಪ್ರಶ್ನಿಸುವುದು ವೈದ್ಯರ ಮೇಲೆ ನಡೆಯುವ ಹಲ್ಲೆ ಹೇಗಾಗುತ್ತದೆ? ವೈದ್ಯರು ಯಾವ ಕಾರಣಕ್ಕೂ ಪ್ರಶ್ನಾತೀತರಲ್ಲ. ಹಾಗೆಯೇ, ಎಲ್ಲ ವಿಷಯಗಳಲ್ಲೂ ವೈದ್ಯರನ್ನು ಅನಗತ್ಯವಾಗಿ ಸಂಶಯಿಸುವುದು, ವೈದ್ಯರ ಮೇಲೆ ಜಾತಿ, ಧರ್ಮಗಳ ಆಧಾರದಲ್ಲಿ ಆರೋಪಗಳನ್ನು ಮಾಡುವುದೂ ಅತಿರೇಕಗಳೇ ಆಗಿವೆ. ಆಸ್ಪತ್ರೆಗಳು ಹಣದ ದಾಹವನ್ನು ಹೊಂದಿದ್ದರೂ, ವೈದ್ಯರು ಖಾಸಗಿಯಾಗಿ ರೋಗಿಯ ಪ್ರಾಣ ಉಳಿಸಲು ಗರಿಷ್ಠ ಮಟ್ಟದಲ್ಲಿ ಶ್ರಮಿಸುತ್ತಿರುತ್ತಾರೆ. ಕೆಲವೊಮ್ಮೆ ಕೈ ಮೀರಿ ವೈದ್ಯರಿಂದ ಅನಾಹುತಗಳಾಗಬಹುದು. ತಮ್ಮವರನ್ನು ಕಳೆದುಕೊಂಡ ಆಕ್ರೋಶದಲ್ಲಿ ವೈದ್ಯರ ಮೇಲೆ, ಆಸ್ಪತ್ರೆಗಳ ಮೇಲೆ ದಾಳಿ ನಡೆಸುವುದು ಅಕ್ಷಮ್ಯವಾಗಿದೆ. ನಾಳೆ ನಮ್ಮ ಇನ್ನೋರ್ವ ಕುಟುಂಬ ಸದಸ್ಯರು ಅನಾರೋಗ್ಯ ಪೀಡಿತರಾದರೆ ಅದೇ ವೈದ್ಯರ ಬಳಿಗೆ ನಾವು ಒಯ್ಯಬೇಕಾಗುತ್ತದೆ. ಅವರಲ್ಲದಿದ್ದರೆ ಇನ್ನೊಬ್ಬ ವೈದ್ಯರು. ಆ ಇನ್ನೊಬ್ಬ ವೈದ್ಯರಿಂದಲೂ ಅನಾಹುತ ಸಂಭವಿಸಬಾರದು ಎಂದೇನಿಲ್ಲ. ವಾಹನ ಓಡಿಸುವಾಗ ಅನಾಹುತಗಳು ಸಂಭವಿಸಬಹುದಾದರೆ, ಒಬ್ಬ ಮನುಷ್ಯ ಸಾವು-ಬದುಕಿನ ನಡುವೆ ಒದ್ದಾಡುತ್ತಿರುವಾಗ ವೈದ್ಯರಿಂದ ಅನಾಹುತ ಸಂಭವಿಸಬಾರದು ಎಂದೇನಿಲ್ಲವಲ್ಲ?

ಹಾಗೆಯೇ ತಮ್ಮ ರಕ್ಷಣೆಗಾಗಿ ಇರುವ ಕಾಯ್ದೆಗಳನ್ನು ವೈದ್ಯರು ಸ್ವಾರ್ಥಕ್ಕಾಗಿ ಬಳಸ ತೊಡಗಿದರೆ ಅದರಿಂದ ನಷ್ಟ ವೈದ್ಯರಿಗೇ ಆಗಿದೆ. ವೈದ್ಯರ ಮೇಲೆ ಹಲ್ಲೆ ನಡೆಸಿದವರು ಗೂಂಡಾಗಳೋ, ರೌಡಿಗಳೋ ಅಲ್ಲ. ಅವರು ‘ವೈದ್ಯ ನಾರಾಯಣೋ ಹರಿಃ’ ಎಂದು ನಂಬಿದ ಶ್ರೀಸಾಮಾನ್ಯರು. ಇಂದು ವೈದ್ಯರು ಸಮಾಜದಲ್ಲಿ ವರ್ಚಸ್ಸೊಂದನ್ನು ಬೆಳೆಸಿಕೊಂಡಿದ್ದಾರೆ. ವೈದ್ಯರು ಎಂದಾಗ ದಯೆ, ಕರುಣೆಗಳು ನಮ್ಮ ಕಣ್ಮುಂದೆ ಬರುತ್ತವೆೆ. ಅವೆಲ್ಲ ವರ್ಚಸ್ಸನ್ನು ಕಳೆದುಕೊಂಡು ಹಣ ಸಂಪಾದಿಸುವ ಯಂತ್ರವಾಗಿ ವೈದ್ಯರು ಬದಲಾದರೆ ಜನಸಾಮಾನ್ಯರು ಅವರ ಕುರಿತಂತೆ ಅನುಕಂಪವನ್ನು ಕಳೆದುಕೊಳ್ಳುತ್ತಾರೆ. ಜನಸಾಮಾನ್ಯರು ಸಂಘಟಿತವಾಗಿ ವೈದ್ಯರ ವಿರುದ್ಧ ನಿಂತರೆ ಅದು ಇನ್ನಷ್ಟು ವಿಷಮ ವಾತಾವರಣಗಳಿಗೆ ಕಾರಣವಾಗಬಹುದು. ಹಾಗೆಯೇ ವೈದ್ಯ ಮಾಫಿಯಾಗಳ ಸ್ವಾರ್ಥ, ಲಾಲಸೆಗಳನ್ನು ರಾಮ್‌ದೇವ್‌ನಂತಹ ಗುಳ್ಳೆನರಿಗಳು ತಮಗೆ ಪೂರಕವಾಗಿ ಬಳಸುವ ಸಾಧ್ಯತೆಗಳಿವೆ. ಆದುದರಿಂದ ವೈದ್ಯರು ಮತ್ತು ರೋಗಿಗಳ ನಡುವೆ ಗರಿಷ್ಠ ಸಹನೆ, ತಾಳ್ಮೆ, ವಿನಯ, ಕರುಣೆ ಅನುಕಂಪಗಳ ಕೊಡುಕೊಳ್ಳುವಿಕೆ ನಡೆಯಬೇಕು. ರೋಗಿಗಳು ಮತ್ತು ವೈದ್ಯರು ಪರಸ್ಪರರಿಗಾಗಿ ಇರುವವರು. ಒಬ್ಬರನ್ನು ಬಿಟ್ಟು ಒಬ್ಬರಿಲ್ಲ. ಇದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸಮನ್ವಯ, ಹೊಂದಾಣಿಕೆ ಬೆಳೆಯಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News