ಮಾಜಿ ಸಚಿವ, ಲೇಖಕ, ಪ್ರೊ. ಮುಮ್ತಾಝ್ ಅಲಿ ಖಾನ್ ನಿಧನ

Update: 2021-06-07 14:41 GMT

ಬೆಂಗಳೂರು, ಜೂ.7: ಮಾಜಿ ಸಚಿವ, ಹಿರಿಯ ಶಿಕ್ಷಣ ತಜ್ಞ, ಲೇಖಕ ಪ್ರೊ. ಮುಮ್ತಾಝ್ ಅಲಿ ಖಾನ್(94) ಅವರು ತಮ್ಮ ವಯೋಸಹಜ ಕಾಯಿಲೆಯಿಂದ ಇಲ್ಲಿನ ಗಂಗಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಪತ್ನಿ, ಪುತ್ರಿ ಸಹಿತ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಮುಮ್ತಾಝ್ ಅಲಿ ಖಾನ್ ಅವರು ಚಿಕ್ಕಬಳ್ಳಾಪುರದಲ್ಲೇ ಶಿಕ್ಷಣವನ್ನು ಪೂರೈಸಿ ಇಲ್ಲಿನ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, 1982ರಲ್ಲಿ ಸ್ವಯಂ ನಿವೃತ್ತಿ ಪಡೆದು ಕೊಂಡರು. ಆ ಬಳಿಕ ಇಲ್ಲಿನ ಆರ್.ಟಿ.ನಗರದಲ್ಲಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ, ಮಧ್ಯಾಹ್ನ ಉಪಹಾರ, ಪಠ್ಯಪುಸ್ತಕ ಸಮವಸ್ತ್ರಗಳನ್ನು ನೀಡುವ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರು.

ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದ ಪ್ರೊ. ಮುಮ್ತಾಝ್ ಅಲಿ ಖಾನ್ ಅವರು, ತಮಗೆ ಬರುತ್ತಿದ್ದ ಪಿಂಚಣಿ ಮತ್ತು ಇತರೆ ಸ್ವಂತ ಮೂಲಗಳ ಆದಾಯವನ್ನು ಬಡಮಕ್ಕಳಿಗೆ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದರು. ಅವರ ಪತ್ನಿ ಕೂಡ ಅದೇ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ತಮ್ಮ ಮಗನ ಹೆಸರಿನಲ್ಲಿ (ನೂರ್ ಅಹ್ಮದ್ ಅಲಿಖಾನ್ ಸ್ಮಾರಕ ವಿದ್ಯಾಸಂಸ್ಥೆ) ಶಾಲೆ ನಡೆಸುತ್ತಿದ್ದರು.

2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಪ್ರೊ. ಮುಮ್ತಾಝ್ ಅಲಿ ಖಾನ್, ಅತ್ಯಂತ ಸರಳ ಮತ್ತು ಪ್ರಾಮಾಣಿಕರಾಗಿದ್ದರು. ಅವರು ಸಚಿವರಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಪ್ರತ್ಯೇಕಗೊಳಿಸಿದರು. 50 ಕೋಟಿ ರೂ.ವೆಚ್ಚದಲ್ಲಿ ಹಜ್ ಭವನ ನಿರ್ಮಾಣಕ್ಕೆ ಮುನ್ನುಡಿ ಬರೆದರು. ಜತೆಗೆ ಇಲಾಖೆ ನೇಮಕಾತಿ ನಿಯಮಗಳನ್ನು ರೂಪಿಸುವುದರ ಜೊತೆಗೆ ಕೆಪಿಎಸ್ಸಿ, ಯುಪಿಎಸ್ಸಿ ತರಬೇತಿ ಹಾಗೂ ಸಮುದಾಯದ ಮಕ್ಕಳ ವಿದೇಶಿ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಿದರು.

ವಕ್ಫ್ ಆಸ್ತಿ ಸಂರಕ್ಷಣೆಗೆ ಒತ್ತು ನೀಡಿಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿದ್ದ ಉರ್ದು ಅಕಾಡೆಮಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ತರುವ ಮೂಲಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುಧಾರಣೆಗೆ ವಿಶೇಷ ಆಸ್ಥೆ ವಹಿಸಿದ್ದರು. 150 ಕೋಟಿ ರೂ.ಗಳಷ್ಟಿದ್ದ ಇಲಾಖೆ ಅನುದಾನವನ್ನು 300 ಕೋಟಿ ರೂ.ಗಳಿಗೆ ಹೆಚ್ಚಿಸುವ ಮೂಲಕ ಸಮುದಾಯ ಕಲ್ಯಾಣಕ್ಕೆ ಅಪಾರ ಶ್ರಮವಹಿಸಿದ್ದರು ಎಂದು ಗೊತ್ತಾಗಿದೆ.

ಸಚಿವರಾಗಿದ್ದ ಅವಧಿಯಲ್ಲಿ ಅತ್ಯಂತ ಹೆಚ್ಚು ದಿನ ಮತ್ತು ಹೆಚ್ಚು ಅವಧಿ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸಿದ್ದು, ವಿಧಾನ ಪರಿಷತ್ ಕಾರ್ಯ ಕಲಾಪದಲ್ಲಿಯೂ ಗೈರು ಹಾಜರಾಗದೆ ಅತ್ಯಂತ ಹೆಚ್ಚು ದಿನ ಪಾಲ್ಗೊಂಡಿದ್ದು ಮುಮ್ತಾಝ್ ಅಲಿ ಖಾನ್ ಅವರ ಹೆಗ್ಗಳಿಕೆ. ಕನ್ನಡ ಸಾಹಿತ್ಯ, ನಾಡು, ನುಡಿಯ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಒಲವು ಹೊಂದಿದ್ದ ಅವರು ಅನೇಕ ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಗಮನಾರ್ಹ ಕೊಡುಗೆ ನೀಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಿಜೆಪಿ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರು, ಆ ಬಳಿಕ ಕಾಂಗ್ರೆಸ್ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು.

ಅಂತ್ಯಕ್ರಿಯೆ: ನಗರದ ಖುದ್ದುಸ್ ಸಾಹೇಬ್ ಖಬ್ರಸ್ಥಾನದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕ ರಿಝ್ವಾನ್ ಅರ್ಶದ್, ಮೇಲ್ಮನೆ ಸದಸ್ಯ ನಸೀರ್ ಅಹ್ಮದ್, ಹಿರಿಯ ಅಧಿಕಾರಿಗಳಾದ ಮೊಹಮ್ಮದ್ ಸನಾಉಲ್ಲಾ, ಅನ್ವರ್ ಪಾಷ, ಅಕ್ರಂ ಪಾಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝಿಂ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸಿಎಂ ಸೇರಿ ಗಣ್ಯರ ಕಂಬನಿ: ಮುಮ್ತಾಝ್ ಅಲಿ ಖಾನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಸಭಾಪತಿ ಬಸವರಾಜ ಹೊರಟ್ಟಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ, ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಮುಮ್ತಾಝ್ ಅಲಿ ಖಾನ್ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಆತ್ಮೀಯ ಸ್ನೇಹಿತ ಹಾಗೂ ಸರಳ ಹಾಗೂ ಸಜ್ಜನ ಚಿಂತನಾಶೀಲ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

`ಶಿಕ್ಷಣ ತಜ್ಞರಾಗಿ, ಸಂಸ್ಕೃತಿ ಚಿಂತಕರಾಗಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದು ತಮ್ಮೊಂದಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ವಿಚಾರ ಸಂಕಿರಣ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಮ್ತಾಝ್ ಅಲಿ ಖಾನ್ ಅವರು, ಕನ್ನಡ ಸಾಹಿತ್ಯದಲ್ಲೂ ಅಪಾರ ಕೃಷಿ ಮಾಡಿ, ನಾಡು-ನುಡಿಯ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಒಲವು ಹೊಂದಿದ್ದರು. ಅನೇಕ ಮೌಲ್ವಿಕ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಶುದ್ಧಹಸ್ತದ ರಾಜಕಾರಣದ ಮೂಲಕ ಮಾದರಿಯಾಗಿದ್ದ ಅವರ ನಿಧನದಿಂದ ರಾಜ್ಯ ಸರಳ, ಸಜ್ಜನ ಹಾಗೂ ಸುಸಂಸ್ಕ್ರತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ'

-ಬಸವರಾಜ ಹೊರಟ್ಟಿ, ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News