ಭೀತಿಯನ್ನು ನಿವಾರಿಸಿದ ಮಸೀದಿಯ ಇಮಾಮ್ ಮನವಿ: ಮಥುರಾ, ಇಟಾವಾಗಳಲ್ಲಿ ಕೋವಿಡ್ ಲಸಿಕೆ ಪಡೆದ ಜನರು

Update: 2021-06-07 11:38 GMT
ಸಾಂದರ್ಭಿಕ ಚಿತ್ರ

ಮಥುರಾ(ಉ.ಪ್ರ),ಜೂ.6: ಉತ್ತರ ಪ್ರದೇಶದ ಮಥುರಾ ಮತ್ತು ಇಟಾವಾಗಳಲ್ಲಿಯ ಇಬ್ಬರು ಇಮಾಮ್ಗಳು ತಮ್ಮ ಮಸೀದಿಗಳ ಧ್ವನಿವರ್ಧಕಗಳ ಮೂಲಕ ಮಾಡಿಕೊಂಡ ಮನವಿಗಳು ಪವಾಡವನ್ನೇ ಸೃಷ್ಟಿಸಿವೆ. ಕೋವಿಡ್ ಲಸಿಕೆಯನ್ನು ಪಡೆಯಲು ನಿರಾಕರಿಸಿದ ನೂರಾರು ಜನರು ತಮ್ಮ ಆಧಾರರಹಿತ ಭೀತಿಯನ್ನು ತೊರೆದು ಲಸಿಕೆಯನ್ನು ಹಾಕಿಕೊಂಡಿದ್ದಾರೆ ಎಂದು telegraphindia.com ವರದಿ ಮಾಡಿದೆ.

ಮಥುರಾ ನಗರದ ರಯಾ ಬಡಾವಣೆಯ ಸುಮಾರು 1,500ಕ್ಕೂ ಹೆಚ್ಚಿನ ನಿವಾಸಿಗಳು ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಆದರೆ ಸ್ಥಳೀಯ ಮಸೀದಿಯ ಧ್ವನಿವರ್ಧಕಗಳಿಂದ ನೀಡಲಾಗಿದ್ದ ಉತ್ತೇಜನದಿಂದಾಗಿ ಶನಿವಾರದವರೆಗೆ ಈ ಪೈಕಿ ಶೇ.80ರಷ್ಟು ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದವರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು,ಲಸಿಕೆಯನ್ನು ಪಡೆಯಲು ತಮ್ಮ ವೈದ್ಯರ ಹಸಿರು ನಿಶಾನೆಗಾಗಿ ಕಾಯುತ್ತಿದ್ದಾರೆ.

ರಯಾ ಬಡಾವಣೆಯ ನಿವಾಸಿಗಳಲ್ಲಿ ಶೇ.60ರಷ್ಟು ಮುಸ್ಲಿಮರು ಮತ್ತು ಶೇ.40ರಷ್ಟು ಹಿಂದುಗಳಾಗಿದ್ದಾರೆ. ಪ್ರದೇಶದಲ್ಲಿ ಮೂವರು ಕೋವಿಡ್ ಲಸಿಕೆಯನ್ನು ಪಡೆದುಕೊಂಡ ಮೂರರಿಂದ ಏಳು ದಿನಗಳಲ್ಲಿ ಸಾವನ್ನಪ್ಪಿದ್ದರಿಂದ ಭೀತಿಗೊಳಗಾಗಿದ್ದ ಜನರು ಲಸಿಕೆ ನೀಡಿಕೆಯನ್ನು ವಿರೋಧಿಸುತ್ತಿದ್ದರು. ಆದರೆ ಮಸೀದಿಯ ಇಮಾಮರ ಪ್ರಕಟಣೆ ಅದ್ಭುತವನ್ನೇ ಸೃಷ್ಟಿಸಿದೆ ಎಂದು ಸ್ಥಳೀಯ ನಿವಾಸಿ ರಹೀಮ್ ಕುರೇಷಿ ತಿಳಿಸಿದರು.ಮೃತ ಮೂವರು ಕೋವಿಡ್19 ಪರೀಕ್ಷೆಗೆ ಒಳಗಾಗಿರಲಿಲ್ಲ, ಹೀಗಾಗಿ ಅವರ ಸಾವಿಗೆ ಕಾರಣವೇನು ಎನ್ನುವುದು ಅಸ್ಪಷ್ಟವಾಗಿದೆ.

‘ಲಸಿಕೆ ಪಡೆಯುವಂತೆ ಮಸೀದಿಯ ಧ್ವನಿವರ್ಧಕದ ಮೂಲಕ ಜನರಿಗೆ ಮನವಿ ಮಾಡಿಕೊಳ್ಳುವುದು ಕಠಿಣ ನಿರ್ಧಾರವಾಗಿತ್ತು. ಎಲ್ಲಿ ಜನರು ನಾನು ನನ್ನ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೇನೆ ಎಂದು ಆರೋಪಿಸುತ್ತಾರೋ ಎಂದು ನಾನು ಹೆದರಿದ್ದೆ. ಆದರೆ ನನ್ನ ಮನವಿಗೆ ಹಿಂದುಗಳು ಮತ್ತು ಮುಸ್ಲಿಮರು ಸ್ಪಂದಿಸಿರುವುದು ನನಗೆ ಖುಷಿ ನೀಡಿದೆ. ಗುರುವಾರ ಬೆಳಿಗ್ಗೆ ನಾನು ಮನವಿ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಜನರು ಮನೆಗಳಿಂದ ಹೊರಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ ’ಎಂದು ಇಮಾಮ್ ಹಫೀಝ್ ಇಸ್ಲಾಂ ಖಾನ್ ಹೇಳಿದರು.

ಶನಿವಾರದಿಂದ ಬಡಾವಣೆಯಲ್ಲಿಯ ಮನೆಗಳಿಗೆ ಭೇಟಿ ನೀಡುತ್ತಿರುವ ಖಾನ್, ತಮ್ಮ ಪರಿಸರಗಳನ್ನು ಸ್ವಚ್ಛವಿರಿಸಿಕೊಳ್ಳುವಂತೆ ಮತ್ತು ಮನೆಯಿಂದ ಹೊರಹೋಗುತ್ತಿದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜನರಿಗೆ ತಿಳಿ ಹೇಳುತ್ತಿದ್ದಾರೆ. ವೈರಸ್ ತ್ವರಿತವಾಗಿ ತನ್ನ ಗುಣಲಕ್ಷಣಗಳನ್ನು ಬದಲಿಸುತ್ತಿರುವುದರಿಂದ ಲಸಿಕೆ ಪಡೆದ ಬಳಿಕವೂ ಮನೆಗಳಲ್ಲಿಯೇ ಇರುವಂತೆ ಕಿವಿಮಾತನ್ನೂ ಅವರು ಹೇಳುತ್ತಿದ್ದಾರೆ. 

ಅತ್ತ ಇಟಾವಾದ ಮಸ್ಜಿದ್ ಪಂಜಾಬಿಯನ್ ನ ಮೌಲಾನಾ ಝಾಹಿದ್ ರಝಾ ಕಾದ್ರಿ ಕೂಡ ಶುಕ್ರವಾರ ಮತ್ತು ಶನಿವಾರ ಮಸೀದಿಯ ಧ್ವನಿವರ್ಧಕದ ಮೂಲಕ ಜನರಲ್ಲಿ ಇಂತಹುದೇ ಮನವಿಯನ್ನು ಮಾಡಿಕೊಂಡಿದ್ದಾರೆ. ಲಸಿಕೆಯ ಅಡ್ಡಪರಿಣಾಮಗಳ ಕುರಿತು ವದಂತಿಗಳಿಗೆ ಕಿವಿಗೊಡದಂತೆ ಹಾಗೂ ವೈದ್ಯರು ಮತ್ತು ವಿಜ್ಞಾನಿಗಳಲ್ಲಿ ನಂಬಿಕೆಯಿಡುವಂತೆ ಅವರು ಕೋರಿದ್ದಾರೆ. ಅವರ ಪ್ರಕಟಣೆಯ ಬಳಿಕ ಈವರೆಗೂ ಹಿಂದೇಟು ಹೊಡೆಯುತ್ತಿದ್ದ ಹಲವರು ಕೋವಿಡ್-ಲಸಿಕೆ ಹಾಕಿಸಿಕೊಂಡಿದ್ದಾರೆ. ‘ಇಲ್ಲಿ ಹಿಂದುಗಳು ಮತ್ತು ಮಸ್ಲಿಮರಿದ್ದಾರೆ. ಎರಡೂ ಸಮುದಾಯಗಳು ನನ್ನ ಮನವಿಗೆ ಸ್ಪಂದಿಸುತ್ತಿವೆ ’ಎಂದು ಕಾದ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News