ದೇಶದ ಮುಂದಿರುವ ಅಪೌಷ್ಟಿಕತೆ ಎಂಬ ಅಪಾಯಕಾರಿ ವೈರಸ್

Update: 2021-06-11 10:33 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ವೈರಸ್ ಸಾಂಕ್ರಾಮಿಕವು ಅಪ್ಪಳಿಸುವ ಮೊದಲೇ ಭಾರತವು ಜಗತ್ತಿನ ಅತ್ಯಂತ ಅಪೌಷ್ಟಿಕತೆಯ ದೇಶಗಳಲ್ಲೊಂದೆನಿಸಿತ್ತು. ಅಭಿವೃದ್ಧಿಯಲ್ಲಿ ಅತ್ಯಂತ ಕಳಪೆ ಸೂಚಕ (ಇಂಡಿಕೇಟರ್)ಗಳನ್ನು ಹೊಂದಿರುವ ದೇಶವಾಗಿರುವ ಭಾರತದಲ್ಲಿ ಕೋವಿಡ್-19 ಬಡಜನರಿಗೆ ಮರ್ಮಾಘಾತ ನೀಡಿರುವುದು ನಿರೀಕ್ಷಿತವೇ ಆಗಿತ್ತು. ಈ ಮಧ್ಯೆ ಭಾರತ ಸರಕಾರವು ಕಳೆದ ವರ್ಷ ಪೂರ್ವ ಸಿದ್ಧತೆ ಇಲ್ಲದೆ ಜಗತ್ತಿನ ಅತ್ಯಂತ ಕಠಿಣ ಲಾಕ್‌ಡೌನ್ ಜಾರಿಗೊಳಿಸಿ, ಪರಿಸ್ಥಿತಿಯನ್ನು ಇನ್ನಷ್ಟು ಹೀನಾಯಗೊಳಿಸಿತು. ಇದೀಗ ಚಿಂದಿಯಾಗಿರುವ ಆರ್ಥಿಕತೆಯ ಬಟ್ಟೆಗೆ ಉಚಿತ ಲಸಿಕೆ ಮತ್ತು ಪಡಿತರದಿಂದ ತೇಪೆ ಹಚ್ಚಿ ಭಾರತದ ಮಾನವನ್ನು ಮುಚ್ಚಲು ಸರಕಾರ ವಿಫಲ ಪ್ರಯತ್ನ ನಡೆಸುತ್ತಿದೆ. ಅರ್ಥಶಾಸ್ತ್ರಜ್ಞರಾದ ಜೀನ್ ಡ್ರೆಝ್ ಹಾಗೂ ಅನ್ಮೊಲ್ ಸೊಮಾಂಚಿ ಅವರು 2020ರಲ್ಲಿ ಜಾರಿಗೊಳಿಸಲಾದ ಭಾರತದ ಪ್ರಪ್ರಥಮ ಕೋವಿಡ್-19 ಲಾಕ್‌ಡೌನ್‌ನಿಂದ ಬಡಜನರು ಆಹಾರವಂಚಿತರಾಗಿದ್ದರ ಕುರಿತ ಪ್ರಬಂಧದಲ್ಲಿ ಸಮೀಕ್ಷಾ ದತ್ತಾಂಶಗಳ ವಿಶ್ಲೇಷಣೆ ನಡೆಸಿದ್ದಾರೆ.ಜಗತ್ತಿನಲ್ಲೇ ಅತ್ಯಂತ ಕಠಿಣತಮವೆನಿಸಿಕೊಂಡಿರುವ ಭಾರತದ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಭಾರತದಲ್ಲಿ ಲಾಕ್‌ಡೌನ್‌ನಿಂದ ಮೊತ್ತ ಮೊದಲಿಗೆ ಆದಾಯ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬೀರಿರುವುದು ನಿಚ್ಚಳವಾಗಿ ಕಂಡುಬಂದಿದೆ.ಲಾಕ್‌ಡೌನ್ ಪೂರ್ವಕ್ಕೆ ಹೋಲಿಸಿದರೆ ಲಾಕ್‌ಡೌನ್ ಆನಂತರದ ದಿನಗಳಲ್ಲಿ ಜನತೆಯ ಆದಾಯದಲ್ಲಿ ವ್ಯಾಪಕ ಕುಸಿತವುಂಟಾಗಿರುವುದನ್ನು ಸಮೀಕ್ಷೆಯು ತೋರಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಕೃಷಿಯೇತರ ವೃತ್ತಿಗಳನ್ನು ನಡೆಸುತ್ತಿದ್ದವರ ಆದಾಯವು 2020ರ ಮಾರ್ಚ್ ತಿಂಗಳಲ್ಲಿ 6,858 ರೂ. ಇದ್ದುದು 2020ರ ಮೇ ತಿಂಗಳಲ್ಲಿ 1,929 ರೂ.ಗೆ ಕುಸಿದಿದೆ ಮತ್ತು ಸೆಪ್ಟಂಬರ್ ತಿಂಗಳವರೆಗೂ ಅವರ ಸರಾಸರಿ ಆದಾಯವು ಅಷ್ಟೇ ಮಟ್ಟದಲ್ಲಿತ್ತು. ಲಾಕ್‌ಡೌನ್ ಅವಧಿಯಲ್ಲಿ ಕೃಷಿಯೇತರ ವೃತ್ತಿಗಳವರ ಕೆಲಸ ರಹಿತ ದಿನಗಳ ಅವಧಿಯು 2020ರ ಮಾರ್ಚ್ ಆರಂಭದಲ್ಲಿ 7.3 ಶೇ.ಇದ್ದುದು ಮೇ ಮೊದಲ ವಾರದಲ್ಲಿ 23.6 ಶೇಕಡಕ್ಕೆ ತಲುಪಿತ್ತು ಮತ್ತು ಅದು ಸೆಪ್ಟ್ಟಂಬರ್ ತಿಂಗಳ ಮೊದಲವಾರದರೆಗೂ ಅಧಿಕ ಮಟ್ಟದಲ್ಲಿ ಅಂದರೆ ಶೇ.16.2ರಷ್ಟಿತ್ತು. ದೇಶದ ಬರೋಬ್ಬರಿ ಶೇ.52ರಷ್ಟು ಕುಟುಂಬಗಳಲ್ಲಿನ ಅನ್ನದಾತರಿಗೆ ಲಾಕ್‌ಡೌನ್‌ಗೆ ಮೊದಲು ಉದ್ಯೋಗವಿದ್ದು ಕಳೆದ ವರ್ಷದ ಮೇ ತಿಂಗಳಲ್ಲಿ ನಿರುದ್ಯೋಗಿಗಳಾಗಿದ್ದರು ಹಾಗೂ ಉಳಿದ 20 ಶೇ. ಕುಟುಂಬಗಳ ಅನ್ನದಾತರು ಉದ್ಯೋಗದಲ್ಲಿದ್ದರೂ, ಅವರ ಆದಾಯ ಮೊದಲಿಗಿಂತ ಕುಸಿದಿತ್ತು.
   ಭಾರತದ ಆರ್ಥಿಕತೆಯ ಮೇಲೆ ಲಾಕ್‌ಡೌನ್ ಉಂಟು ಮಾಡಿರುವ ಪರಿಣಾಮವು ತಾತ್ಕಾಲಿಕವಾದುದಲ್ಲವೆಂದು ಜಗತ್ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಡ್ರೆಝ್ ಹಾಗೂ ಸೊಮಾಂಚಿ ವಾದಿಸುತ್ತಾರೆ. 2021ರ ಆರಂಭದಲ್ಲಿ ಎರಡನೇ ಅಲೆಯು ಅಪ್ಪಳಿಸುವುದಕ್ಕೆ ಮುನ್ನ ಕಳೆದ ವರ್ಷದ ಲಾಕ್‌ಡೌನ್‌ಪೂರ್ವದ ದಿನಗಳ ಮಟ್ಟಕ್ಕೆ ಬಹುತೇಕ ಭಾರತೀಯರು ಆದಾಯ ಹಾಗೂ ಉದ್ಯೋಗಗಳನ್ನು ಮರಳಿಪಡೆಯುವುದು ಅನುಮಾನಾಸ್ಪದವಾಗಿದೆ ಎಂದವರು ಹೇಳಿದ್ದಾರೆ.

ಆದಾಯದ ಹಾಗೆ ಆಹಾರದ ಅಭದ್ರತೆಯಲ್ಲಿಯೂ ಕಳವಳಕಾರಿಯಾದ ಏರಿಕೆಯಾಗಿರುವ ಬಗ್ಗೆ ಸಮೀಕ್ಷೆಗಳು ಗಮನಸೆಳೆದಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.53ರಿಂದ ಶೇ77.ರಷ್ಟು ಮಂದಿ ಕೋವಿಡ್-19 ಸಾಂಕ್ರಾಮಿಕ ಹಾವಳಿಯ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗ ತಾವು ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ. ಲಾಕ್‌ಡೌನ್ ರದ್ದುಪಡಿಸಿದ ಬಳಿಕವೂ ಹೆಚ್ಚೇನೂ ಪರಿಣಾಮವಾಗಿಲ್ಲವೆಂದು ಅವರು ಹೇಳಿದ್ದಾರೆ.

ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸುಸ್ಥಿರ ಉದ್ಯೋಗಗಳಿಗಾಗಿನ ಕೇಂದ್ರವು ನಡೆಸಿದ ಸಮೀಕ್ಷೆಯು ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. ಸೆಪ್ಟಂಬರ್-ನವೆಂಬರ್ ತಿಂಗಳ ಅವಧಿಯಲ್ಲಿ ಸಾಂಕ್ರಾಮಿಕದ ಹಾವಳಿಯ ಆರಂಭಕ್ಕೆ ಮೊದಲಿಗಿಂತ ಈಗ ಕಡಿಮೆ ಆಹಾರವನ್ನು ಸೇವಿಸುತ್ತಿರುವುದಾಗಿ ಹೇಳಿಕೊಂಡಿರುವ ವ್ಯಕ್ತಿಗಳ ಸಂಖ್ಯೆಯು ಶೇ.60ರಷ್ಟಿದೆ.ಕಡುಬಡತನದ ವರ್ಗಗಳ ಜನರ ಪರಿಸ್ಥಿತಿಯಂತೂ ಇನ್ನಷ್ಟು ಚಿಂತಾಜನಕವಾಗಿದೆ. ಗಣನೀಯ ಸಂಖ್ಯೆಯ ವಲಸೆ ಕಾರ್ಮಿಕರು ಕಳೆದ ವರ್ಷದ ಮೇ ತಿಂಗಳಲ್ಲಿ ದಿನದಲ್ಲಿ ಎರಡು ಹೊತ್ತಿನ ಊಟಕ್ಕಿಂತ ಕಡಿಮೆ ಆಹಾರ ಸೇವಿಸುತ್ತಿದ್ದರು. ಅದೇ ರೀತಿಯ ಪ್ರಧಾನ್ ಎಂಬ ಇನ್ನೊಂದು ಲಾಭೋದ್ದೇಶ ರಹಿತ ಸಂಸ್ಥೆಯ ಅಧ್ಯಯನದ ಪ್ರಕಾರ ಗ್ರಾಮೀಣ ಪ್ರದೇಶಗಳ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಸುಮಾರು ಅರ್ಧಾಂಶದಷ್ಚು ಮಂದಿ ಮುಂಚಿಗಿಂತ ಕಡಿಮೆ ಆಹಾರವನ್ನು ಸೇವಿಸುತ್ತಿದ್ದರೆಂಬ ಅಂಶವು ಬೆಳಕಿಗೆ ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಆಹಾರ ಸೇವನೆಯ ಪ್ರಮಾಣದಲ್ಲಿ ಕುಸಿತ ಮಾತ್ರವಲ್ಲ ಆಹಾರದ ಪೌಷ್ಟಿಕತೆಯ ವೌಲ್ಯದಲ್ಲಿಯೂ ಇಳಿಕೆಯುಂಟಾಗಿರುವುದು ಆತಂಕಕಾರಿ ವಿಷಯವಾಗಿದೆ. ಕಳೆದ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ದ್ವಿದಳಧಾನ್ಯಗಳ ಖರೀದಿಗೆ ಜನರು ಮಾಡಿದ್ದ ವೆಚ್ಚವು ಸ್ಥಿರವಾಗಿತ್ತಾದರೂ, ಮೊಟ್ಟೆ, ಮಾಂಸ, ಮೀನು ಹಾಗೂ ಹಣ್ಣುಹಂಪಲುಗಳಂತಹ ಪೌಷ್ಟಿಕಭರಿತ ಹಾಗೂ ಪ್ರೊಟೀನ್ ಸಮೃದ್ಧ ಆಹಾರಗಳ ಮೇಲೆ ಮಾಡಲಾದ ಖರ್ಚಿನ ಪ್ರಮಾಣದಲ್ಲಿ ತೀವ್ರ ಕುಸಿತವುಂಟಾಗಿತ್ತು. ಮಾಂಸ ಹಾಗೂ ಮೀನಿನ ಮೇಲೆ ಶೇ.25ರಷ್ಟು ಆದಾಯ ಗುಂಪುಗಳು ಮಾಡುತ್ತಿದ್ದ ವೆಚ್ಚವು ಲಾಕ್‌ಡೌನ್ ಪೂರ್ವದ ಅವಧಿಯಲ್ಲಿ ಇದ್ದುದಕ್ಕಿಂತ ಶೇ.50ರಷ್ಟು ಕಡಿಮೆಯಾಗಿತ್ತು.

ಕೋಟ್ಯಂತರ ಭಾರತೀಯರಿಗೆ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಆಹಾರವನ್ನು ಪೂರೈಕೆ ಮಾಡುವ ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಲಾಕ್‌ಡೌನ್ ಸಂದರ್ಭದಲ್ಲಿ ಆಶಾಕಿರಣವಾಗಿ ಪರಿಣಮಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉಚಿತ ಹಾಗೂ ಹೆಚ್ಚುವರಿ ಪಡಿತರ ಆಹಾರದಂತಹ ಪರಿಹಾರ ಕ್ರಮಗಳನ್ನು ಪ್ರಕಟಿಸಿದ್ದವು. ಲಾಕ್‌ಡೌನ್ ಅವಧಿಯಲ್ಲಿ ಶೇ.89ರಷ್ಟು ಭಾರತೀಯರು ಪಡಿತರ ಧಾನ್ಯಗಳನ್ನು ಪಡೆಯುತ್ತಿದ್ದರು. ಅಲ್ಲದೆ, ಅಷ್ಟೇ ಸಂಖ್ಯೆಯ ಭಾರತೀಯರು ತಾತ್ಕಾಲಿಕ ಲಾಕ್‌ಡೌನ್ ಯೋಜನೆಗಳನ್ವಯ ಉಚಿತ ಧಾನ್ಯವನ್ನು ಪಡೆದು ಹಸಿವಿನ ಹೆಮ್ಮಾರಿಯಿಂದ ಪಾರಾಗಿದ್ದಾರೆ.

ಈ ವರ್ಷದ ಬೇಸಿಗೆಯಲ್ಲಿ ಕೋವಿಡ್-19 ಎರಡನೇ ಅಲೆಯ ಅಟ್ಟಹಾಸದಿಂದಾಗಿ ದೇಶದ ಬಹುತೇಕ ರಾಜ್ಯಗಳು ಲಾಕ್‌ಡೌನ್ ಜಾರಿಗೊಳಿಸಿವೆ. ಅದರೆ ಕಳೆದ ವರ್ಷ ಇಡೀ ದೇಶ ಎದುರಿಸಿದಂತಹ ದುರಂತಮಯ ಮಾನವೀಯ ಬಿಕ್ಕಟ್ಟು ಪುನರಾವರ್ತಿಸುವುದನ್ನು ತಪ್ಪಿಸಲು ಸರಕಾರಕ್ಕೆ ಈ ಬಾರಿಯೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಪ್ರಕಟಿಸಲಾಗಿರುವ ಕೋವಿಡ್‌ಲಾಕ್‌ಡೌನ್ ಪರಿಹಾರ ಕ್ರಮಗಳು ನಿರೀಕ್ಷಿತ ಫಲವನ್ನು ನೀಡುತ್ತಿಲ್ಲ. ಕಳೆದ ವರ್ಷ ನೀಡಲಾಗಿದ್ದ ನೆರವನ್ನೂ ಈ ಸಲ ಪುನರಾವರ್ತಿಸಿದರೂ ಅದು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ. ರಾಜ್ಯಮಟ್ಟದಲ್ಲಿ ಪಡಿತರ ವಿತರಣಾ ವ್ಯವಸ್ಥೆಯ ಸಮಸ್ಯೆಗಳಿಂದಾಗಿ ಕೇಂದ್ರ ಸರಕಾರವು ಒದಗಿಸಿರುವ ಉಚಿತ ಆಹಾರಧಾನ್ಯಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯಾಚರಿಸಿ ಪಡಿತರ ವಿತರಣೆ, ಆರ್ಥಿಕ ನೆರವು ಸೇರಿದಂತೆ ಲಾಕ್‌ಡೌನ್‌ನಿಂದ ಅತಂತ್ರರಾಗಿರುವ ಕೋಟ್ಯಂತರ ಭಾರತೀಯರನ್ನು ಕೋವಿಡ್‌ಲಾಕ್‌ಡೌನ್ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಪಾರು ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಆದುದರಿಂದ, ಲಾಕ್‌ಡೌನ್ ಆನಂತರದ ದಿನಗಳಲ್ಲಿ ಈ ದೇಶವನ್ನು ಮೇಲೆತ್ತುವ ಗುರುತರ ಜವಾಬ್ದಾರಿ ಸರಕಾರದ ಮೇಲಿದೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಸರಕಾರ ಆರಂಭಿಸಬೇಕಾಗಿದೆ. ಇದೊಂದು ರೀತಿಯಲ್ಲಿ, ನೆರೆಯಲ್ಲಿ ಅರ್ಧ ಮುಳುಗಿದ ಹಡಗನ್ನು, ನೆರೆ ಇಳಿದ ಬಳಿಕ ಮತ್ತೆ ಹೊಸದಾಗಿ ಕಟ್ಟುವ ಕೆಲಸ. ಒಂದೆಡೆ ನೆರೆಯಿಂದ ಆದ ನಾಶ ನಷ್ಟವನ್ನು ತುಂಬಿಕೊಳ್ಳುತ್ತಾ ಮುಳುಗಿದ ಹಡಗನ್ನು ಎತ್ತಿ ನಿಲ್ಲಿಸಿ ಇನ್ನೊಂದು ನೆರೆಯನ್ನು ಎದುರಿಸಲು ಸರಕಾರ ಸಿದ್ಧವಾಗಬೇಕು. ಸಾಂಕ್ರಾಮಿಕ ರೋಗಗಳನ್ನು ಗೆಲ್ಲುವುದಕ್ಕೆ ಲಸಿಕೆಗಳು ಎಷ್ಟು ಪ್ರಯೋಜನವೋ ಪೌಷ್ಟಿಕ ಆಹಾರವೂ ಅಷ್ಟೇ ಅಗತ್ಯ. ಭವಿಷ್ಯದಲ್ಲಿ ದೇಶವನ್ನು ಕಾಡಲಿರುವ ಅಪೌಷ್ಟಿಕತೆ ಇನ್ನಷ್ಟು ಭೀಕರ ಸಾಂಕ್ರಾಮಿಕ ರೋಗಗಳನ್ನು ಹರಡುವ ಅಪಾಯದ ಬಗ್ಗೆಯೂ ಸರಕಾರ ಚಿಂತೆ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News