ರಾಜ್ಯದಲ್ಲಿ ಡಿಬಿಟಿ ಮೂಲಕ 12 ಸಾವಿರ ಕೋಟಿ ರೂ.ಗೂ ಅಧಿಕ ನೆರವು ವಿತರಣೆ: ಯಡಿಯೂರಪ್ಪ

Update: 2021-06-10 07:23 GMT

ಬೆಂಗಳೂರು, ಜೂ.10: ಸಿಬ್ಬಂದಿ ಮತ್ತು ಆಡಳಿ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿಪಡಿಸಿರುವ 'ಡಿಬಿಟಿ' ಮೊಬೈಲ್ ಅಪ್ಲಿಕೇಶನ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಈ ವರೆಗೆ ಸುಮಾರು 120 ಯೋಜನೆಗಳನ್ನು ಈ ವೇದಿಕೆಗೆ ಒಳಪಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 12 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಫಲಾನುಭವಿಗಳ ಆಧಾರ್ ಜೋಡಣೆಯಾದ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಹಣ ದುರುಪಯೋಗ, ಲೋಪದೋಷ ಅಥವಾ ಮಧ್ಯವರ್ತಿಗಳ ಹಾವಳಿ ಇಲ್ಲ ಎಂದರು.

ಕೋವಿಡ್-19ರ ಮೊದಲನೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಸರ್ಕಾರವು ಘೋಷಿಸಿದ ಎಲ್ಲಾ ಪ್ಯಾಕೇಜ್‍ಗಳು ಈ ವೇದಿಕೆ ಮೂಲಕವೇ ಪಾವತಿ ಮಾಡಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲ ಯೋಜನೆಗಳನ್ನು ಡಿ.ಬಿ.ಟಿ. ವೇದಿಕೆಯಡಿ ತರಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ವೇದಿಕೆಯು ಫಲಾನುಭವಿಯನ್ನು ಆಧಾರ್ ಸಂಖ್ಯೆ ಮೂಲಕ ಗುರುತಿಸಿ ಫಲಾನುಭವಿಯ ಆಧಾರ್ ಅನ್ನು ಆರ್ಥಿಕ ವಿಳಾಸವಾಗಿ (Financial Address) ಪರಿಗಣಿಸಿ ನಗದು ವರ್ಗಾವಣೆಯನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು. ಬ್ಯಾಂಕ್ ಖಾತೆಗೆ ಆಧಾರ್ ಜೋಡನೆ ಮಾಹಿತಿಯು ಯು.ಐ.ಡಿ.ಐ. ಜಾಲತಾಣದಲ್ಲಿ ಮಾತ್ರ ಲಭ್ಯವಿದ್ದು, ನಾಗರಿಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವ ಬಗ್ಗೆ ತಿಳಿದುಕೊಳ್ಳಲು ಕಷ್ಟವಾಗಿತ್ತು. ನಾಗರಿಕರ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆಯಾಗದೇ ಇದ್ದಲ್ಲಿ ರಾಜ್ಯ ಸರ್ಕಾರವು ನಗದು ಸೌಲಭ್ಯ ವರ್ಗಾವಣೆಗೆ ಬಳಸುತ್ತಿರುವ ಆಧಾರ್ ಆಧಾರಿತ ನಗದು ವರ್ಗಾವಣೆ ವ್ಯವಸ್ಥೆ (Aadhaar Based Payment System) ಮೂಲಕ ಹಣ ಪಡೆಯಲು ಸಾಧ್ಯವಾಗುವುದಿಲ್ಲ. ಇದಲ್ಲ  ಬಹಳಷ್ಟು ನಾಗರಿಕರಿಗೆ ತಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಇದರಿಂದ ಸರ್ಕಾರವು ಯಾವ ಬ್ಯಾಂಕ್ ಖಾತೆಗೆ ನಗದು ಸೌಲಭ್ಯವನ್ನು ಜಮೆ ಮಾಡಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಲು ಇವರುಗಳಿಗೆ ಬಹಳ ಕಷ್ಟವಾಗುತ್ತದೆ. ಅಲ್ಲದೆ ಇತ್ತೀಚಿಗೆ ರಾಜ್ಯ ಸರ್ಕಾರವು ನಾಗರಿಕರಿಂದ ಯಾವುದೇ ಅರ್ಜಿ ಪಡೆಯದೇ ಅರ್ಹತೆ ಆಧಾರದ ಮೇಲೆ ನಗದು ವರ್ಗಾವಣೆಯನ್ನು ಮಾಡುತ್ತಿರುವುದರಿಂದ ಇವರುಗಳಿಗೆ ಹಣ ಬ್ಯಾಂಕ್ ಖಾತೆಯಲ್ಲಿ ಜಮೆಯಾಗುವ ಬಗ್ಗೆಯು ಮಾಹಿತಿ ಲಭ್ಯ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಡಿ.ಬಿ.ಟಿ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಈ ಆ್ಯಪ್ ಅನ್ನು ನಾಗರಿಕರು ಹೆಚ್ಚು-ಹೆಚ್ಚಾಗಿ ಬಳಸಿದಾಗ ಪಾರದರ್ಶಕತೆ ಇರುವ ಸರ್ಕಾರದ ಉದ್ದೇಶ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ನಾಗರೀಕರು ಈ ಆ್ಯಪ್‍ನ ಸದುಪಯೋಗ ಪಡೆದುಕೊಂಡು ಫಲಾನುಭವಿಗಳಿಗೆ ವರ್ಗಾವಣೆಯಾಗಿರುವ ನಗದು ವಿವರವನ್ನು ಪಡೆದುಕೊಳ್ಳಿ ಎಂದರು.

ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಇ-ಆಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಡಿ.ಬಿ. ಟಿ. ಯೋಜನಾ ನಿರ್ದೇಶಕ ಶ್ರೀವತ್ಸ, ಎನ್.ಐ.ಸಿ ಉಪ ನಿರ್ದೇಶಕರಾದ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

ಡಿ.ಬಿ.ಟಿ ಅಪ್ಲಿಕೇಷನ್ ಬಗ್ಗೆ:

ಈ ಆಪ್‍ನ್ನು ಗೂಗಲ್ ಪ್ಲೇ-ಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಂಡು,  ಆಧಾರ್ -ಕೆವೈಸಿ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್ NPCI (National Payment Corporation of India) ಗೆ ಸಂಪರ್ಕಿಸಿ ಆಧಾರ್ ಬ್ಯಾಂಕ್ ಸೀಡಿಂಗ್ ನ ಪ್ರಸಕ್ತ ಸ್ಥಿತಿಯನ್ನು ನೀಡುತ್ತದೆ.

ಡಿ.ಬಿ.ಟಿ ಮೊಬೈಲ್ ಆ್ಯಪ್ ಯೋಜನೆವಾರು ವಿವಿಧ ಕಂತುಗಳಲ್ಲಿ ವರ್ಗಾಹಿಸಿದ ಪಾವತಿ ಮೊತ್ತ, ಪಾವತಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಯು.ಟಿ.ಆರ್ ಸಂಖ್ಯೆಯನ್ನು ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News