10 ಸಾವಿರ ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ: ಅಭಿಯಾನಕ್ಕೆ ಸಚಿವ ಡಾ.ನಾರಾಯಣಗೌಡ ಚಾಲನೆ

Update: 2021-06-10 08:10 GMT

ಬೆಂಗಳೂರು ಜೂ.10-: ಪ್ರತಿಯೊಬ್ಬ ಕ್ರೀಡಾಪಟುವು ಹೆಸರು ನೋಂದಾಯಿಸಿಕೊಂಡು ಕೋವಿಡ್ ತಡೆ ಲಸಿಕೆಯನ್ನು ಪಡೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲೂ ಲಸಿಕೆಯನ್ನು ನೀಡಲಾಗುತ್ತಿದ್ದು, ಎಲ್ಲ ಕ್ರೀಡಾಪಟುಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ. ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಅನುಪ್ ಶ್ರೀಧರ್ ಅವರಿಗೆ ಲಸಿಕೆ ಹಾಕಿಸುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಕೊರೋನ ಇಳಿಮುಖವಾಗುತ್ತಿದೆ. ಆದಾಗ್ಯೂ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹಾಗೂ ಲಸಿಕೆಯನ್ನು ಪಡೆದುಕೊಳ್ಳುವುದು ಅವಶ್ಯಕ. ದೈಹಿಕ ಕ್ಷಮತೆಯನ್ನು ಸದಾಕಾಲ ಕಾಪಾಡಿಕೊಳ್ಳಬೇಕಾಗಿರುವುದು ಕ್ರೀಡಾಪಟುಗಳ ಆದ್ಯ ಕರ್ತವ್ಯ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ ಕೂಡ ಹೌದು. ಹೀಗಾಗಿ ಕ್ರೀಡಾಪಟುಗಳಿಗೆ ಕೋವಿಡ್ -19 ಲಸಿಕೆ ನೀಡುವ ಸಲುವಾಗಿ ಅಭಿಯಾನ ಆರಂಭಿಸಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಎರಡೇ ದಿನಕ್ಕೆ ಅಭಿಯಾನವನ್ನು ಮುಗಿಸುದಿಲ್ಲ. ರಾಜ್ಯಾದ್ಯಂತ ಇರುವ 10 ಸಾವಿರಕ್ಕು ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಬೇಕು. ಎಲ್ಲ ಜಿಲ್ಲಾ ಕೇಂದ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಈ ಅಭಿಯಾನ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಸಹಯೋಗದಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ 2200 ಕ್ರೀಡಾಪಟುಗಳು ಈಗಾಗಲೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇಂದು ಮತ್ತು ನಾಳೆ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರಿಗೆ ಲಸಿಕೆ ನೀಡಲಾಗುತ್ತದೆ. ಈಗ ಹೆಸರು ನೋಂದಾಯಿಸಿಕೊಂಡವರಿಗೆ ಅಭಿಯಾನವನ್ನು ಮುಂದುವರಿಸಿ ಲಸಿಕೆಯನ್ನು ನೀಡಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಅಭಿಯಾನ ಆರಂಭವಾಗಿದ್ದು, ಎಲ್ಲ ಕ್ರೀಡಾಪಟುಗಳು ಲಸಿಕೆ ಪಡೆದುಕೊಂಡ ನಂತರ ಅಭಿಯಾನವನ್ನು ಮುಕ್ತಾಯಗೊಳಿಸಲಾಗುವುದು. ಇದು ಮೊದಲ ಹಂತದ ಲಸಿಕಾ ಅಭಿಯಾನವಾಗಿದ್ದು, ನಿಗದಿತ ಸಮಯದ ನಂತರ ಎರಡನೇ ಹಂತದ ಲಸಿಕೆಯನ್ನೂ ಸಹ ಇದೇ ಮಾದರಿಯಲ್ಲಿ ನೀಡಲಾಗುವುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸಚಿವರ ಜೊತೆ ಚರ್ಚಿಸಿ ಕ್ರೀಡಾಪಟುಗಳಿಗೆ ಲಸಿಕಾ ಕರಣ ಅಭಿಯಾನದ ರೂಪುರೇಷೆಯನ್ನು ಸಿದ್ದಪಡಿಸಿದ್ದಾರೆ ಎಂದರು.

ಮೊದಲ ಡೋಸ್ ಲಸಿಕೆ ಪಡೆದ ಖ್ಯಾತ ಕ್ರೀಡಾಪಟುಗಳು

ಬ್ಯಾಡ್ಮಿಟನ್ ಆಟಗಾರ ಅನೂಪ್ ಶ್ರೀಧರ್, ಪಿ.ಎನ್. ಪ್ರಕಾಶ್- ಶೂಟರ್, ನಿಖಿಲ್- ಶೂಟರ್, ನಿಶಿತಾ- ರೋಯಿಂಗ್, ಶ್ರೇಯಾ ಬಿ. - ರೋಯಿಂಗ್, ಭೂಮಿಕಾ ಆರ್. ಕೇಸರಕರ್- ಸ್ಮಿಮ್ಮರ್, ಪ್ರಿಯಾ ಮೋಹನ್- ಅಥ್ಲೀಟ್ , ನ್ಯಾಶನಲ್ ಚಾಂಪಿಯನ್ ಗಳಾದ ಐಶ್ವರ್ಯಾ, ಯಶವಂತ್, ಅಕ್ಷಯ್ ಸೇರಿದಂತೆ ನೂರಾರು ಕ್ರೀಡಾಪಟುಗಳು ಲಸಿಕೆ ಪಡೆದರು.

ಸಂಸದ ಪಿ.ಸಿ. ಮೋಹನ್, ರಾಜ್ಯ ಒಲಿಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News