ಅಂಬೇಡ್ಕರ್ ಪೋಸ್ಟ್ ಹರಿದು ಹಾಕಿದ ತಂಡದಿಂದ ಭೀಮ್ ಆರ್ಮಿ ಸದಸ್ಯ, ದಲಿತ ಯುವಕನ ಹತ್ಯೆ

Update: 2021-06-10 09:37 GMT

ಜೈಪುರ್: ರಾಜಸ್ಥಾನದ ಹನುಮಾನ್‍ಘರ್ ಜಿಲ್ಲೆಯ ಕಿಕ್ರಲಿಯಾ ಗ್ರಾಮದಲ್ಲಿ ಜೂನ್ 5ರಂದು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಂದ ಹಲ್ಲೆಗೊಳಗಾಗಿದ್ದ ಭೀಮ್ ಆರ್ಮಿ ಸದಸ್ಯ, ದಲಿತ ಯುವಕ ವಿನೋದ್ ಬಮ್ನಿಯಾ (21) ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾನಗರ ಆಸ್ಪತ್ರೆಯಲ್ಲಿ ಎರಡು ದಿನಗಳ ನಂತರ ಮೃತಪಟ್ಟ ಘಟನೆ ವರದಿಯಾಗಿದೆ.

ವಿನೋದ್ ಮನೆಯ ಹೊರಗೆ ಅಂಟಿಸಲಾಗಿದ್ದ ಅಂಬೇಡ್ಕರ್ ಪೋಸ್ಟರುಗಳನ್ನು ಹರಿದು ಹಾಕಿದ್ದ ತಂಡವು ಎರಡು ವಾರಗಳ ನಂತರ ವಿನೋದ್ ಮೇಲೆ ಹಲ್ಲೆಗೈದಿತ್ತು ಎಂದು ಆರೋಪಿಸಲಾಗಿದೆ.

ವಿನೋದ್ ಅವರ ಕುಟುಂಬ ಸದಸ್ಯರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಿಗಳ ಪೈಕಿ  ಅನಿಲ್ ಸಿಹಾಗ್ ಹಾಗೂ ರಾಕೇಶ್ ಸಿಹಾಗ್ ಅವರ ಹೆಸರುಗಳು ಎಫ್‍ಐಆರ್‍ನಲ್ಲಿ ಉಲ್ಲೇಖಗೊಂಡಿವೆ. ಘಟನೆ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು ಅವರ ಪೈಕಿ ಈ ಇಬ್ಬರೂ ಸೇರಿದ್ದಾರೆ.

ಆರೋಪಿಗಳು ಜಾತಿ ನಿಂದನೆಗೈದು ಯುವಕನ ಮೇಲೆ ಹಲ್ಲೆ ನಡೆಸಿದ್ದರು. "ನಿನ್ನ ಅಂಬೇಡ್ಕರ್ ಸಿದ್ಧಾಂತ ನೆನಪಾಗುವಂತೆ ಇಂದು ನಿನಗೆ ಮಾಡುತ್ತೇನೆ," ಎಂದು ನಿಂದಿಸಿದ್ದರೆಂದು ಎಫ್‍ಐಆರ್‍ನಲ್ಲಿ ಆರೋಪಿಸಿದ್ದಾರೆ.

ಪೊಲೀಸರು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಭೀಮ್ ಆರ್ಮಿ ಪ್ರತಿಭಟನೆ ನಡೆಸಿದೆ.

ಶಾಲೆಯೊಂದರಲ್ಲಿ ಹನುಮಾನ್ ಚಾಲೀಸಾದ ಪ್ರತಿ ವಿತರಣೆಗೆ ಆಕ್ಷೇಪಿಸಿದ  ನಂತರ ಬೆದರಿಕೆ ಕರೆಗಳು ಬಂದಿವೆ  ಎಂದು ವಿನೋದ್ ಎಪ್ರಿಲ್  ತಿಂಗಳಲ್ಲಿ ಆರೋಪಿಸಿದ್ದರು. ಈ ಕುರಿತು ಎಫ್‍ಐಆರ್ ದಾಖಲಾಗಿತ್ತು. ರಸ್ತೆ ತಡೆಗೆ ವಿರೋಧಿಸಿದ್ದಕ್ಕೆ ತಮಗೆ ಹಾಗೂ ಕುಟುಂಬ ಸದಸ್ಯರಿಗೆ ಹಲ್ಲೆ ನಡೆಸಲಾಗಿದೆ ಎಂದು ಕೂಡ ವಿನೋದ್ ದೂರು ದಾಖಲಿಸಿದ್ದರು.

ಆದರೆ ಜೂನ್ 5ರಂದು ನಡೆದ ಹಲ್ಲೆ ಪೋಸ್ಟರ್ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದ್ದು ಎಂದು ಆರೋಪಿಸಲಾಗಿದೆ. ಎಪ್ರಿಲ್ 14, ಅಂಬೇಡ್ಕರ್ ಜಯಂತಿಯಂದು ವಿನೋದ್ ಮನೆ ಹೊರಗೆ ಅಂಬೇಡ್ಕರ್ ಪೋಸ್ಟರ್ ಹಾಕಲಾಗಿತ್ತು. ಇದನ್ನು ಅನಿಲ್ ಸಿಹಾಗ್ ಹಾಗೂ ರಾಕೇಶ್ ಸಿಹಾಗ್ ಸಹಿತ ಕೆಲವರು  ಹರಿದು ಹಾಕಿದ್ದರು. ಈ ಕುರಿತು ಅವರ ಕುಟುಂಬಗಳಿಗೆ ದೂರಿದ ನಂತರ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗಿತ್ತು ಎಂದು ವಿನೋದ್ ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.

ಆದರೆ ಆರೋಪಿಗಳು ಪ್ರತೀಕಾರ ತೀರಿಸುವ ಸಲುವಾಗಿ ಜೂನ್ 5ರಂದು ವಿನೋದ್ ಮೇಲೆ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿದ್ದರು ಎಂದು  ಆ ಸಂದರ್ಭ ವಿನೋದ್ ಜತೆಗಿದ್ದ ಅವರ ಸೋದರ ಸಂಬಂಧಿ ಮುಕೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News